ಪ್ರಾಣಿಗಳ ಮೇಲಿನ ಕ್ರೌರ್ಯ ಹಾಗೂ ಅವುಗಳನ್ನು ಕೊಂದು ತಿನ್ನುತ್ತಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ ಎಂದು ಐಐಟಿ ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿಮ್ಲಾದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಅಲ್ಲಿ ಮುಗ್ಧ ಪ್ರಾಣಿಗಳನ್ನು ಕಡಿಯುತ್ತಿದ್ದೀರಿ. ಅವುಗಳು ಸಹಜೀವನದ ಸಂಬಂಧವನ್ನು ಹೊಂದಿದ್ದು, ಅವುಗಳ ಹತ್ಯೆಯಿಂದ ಪರಿಸರದ ಅವನತಿಯಾಗುತ್ತಿದೆ. ನಾವು ಹೀಗೆಯೇ ಮಾಡಿದರೆ, ಹಿಮಾಚಲ ಪ್ರದೇಶವು ಗಮನಾರ್ಹವಾಗಿ ಅವನತಿ ಹೊಂದಲಿದೆ ಎಂದಿದ್ದಾರೆ.
ಅಲ್ಲದೆ, ತಾವು ಮಾಂಸ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ವಿದ್ಯಾರ್ಥಿಗಳಿಗೆ ಲಕ್ಷ್ಮೀಧರ್ ಬೆಹೆರಾ ಸೂಚಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ಪ್ರಾಕೃತಿಕ ವಿಕೋಪ ಉಂಟಾಗಿತ್ತು. ತಜ್ಞರು ಈ ಭೀಕರ ದುರಂತಕ್ಕೆ ಅನೇಕ ವೈಜ್ಞಾನಿಕ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ ಐಐಟಿ ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಮಾಂಸಾಹಾರ ಸೇವನೆಯಿಂದ ಹೀಗಾಗಿದೆ ಎಂಬ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ಆಕ್ರೋಶ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ಹೆಸರಾಂತ ವ್ಯಂಗ್ಯಚಿತ್ರಕಾರ ಅಜಿತ್ ನಿನಾನ್ ಮೈಸೂರಿನಲ್ಲಿ ನಿಧನ
ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಇತರ ಹಲವು ಸಂಗತಿಗಳು ಮತ್ತೆ ಮತ್ತೆ ಘಟಿಸುತ್ತಿವೆ. ಇವೆಲ್ಲವೂ ಪ್ರಾಣಿಗಳ ಮೇಲಿನ ಕ್ರೌರ್ಯದ ಪರಿಣಾಮಗಳು. ಬೆಹೆರಾ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ನೆಟ್ಟಿಗರು ಲಕ್ಷ್ಮೀಧರ್ ಬೆಹೆರಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋ ಕುರಿತು ಐಐಟಿ ಮಂಡಿಯ ಮೀಡಿಯಾ ಸೆಲ್ ಸದಸ್ಯರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಂಸಾಹಾರ ಸೇವನೆ ಮಾಡದಂತೆ ಹೇಳಿರುವುದು ನಿರ್ದೇಶಕರ ವೈಯಕ್ತಿಕ ಅಭಿಪ್ರಾಯವಾಗಿರಬಹುದು ಎಂದು ತಿಳಿಸಿದ್ದಾರೆ.
ಬೆಹೆರಾ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅವರು ‘ಪವಿತ್ರ ಮಂತ್ರಗಳನ್ನು’ ಪಠಿಸುವ ಮೂಲಕ ತನ್ನ ಸ್ನೇಹಿತನ ಅಪಾರ್ಟ್ಮೆಂಟ್ನಿಂದ ಭೂತೋಚ್ಚಾಟನೆ ಮಾಡಿ ‘ದುಷ್ಟಶಕ್ತಿಗಳನ್ನು’ ನಿರ್ಮೂಲನಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೆ ಎಂದು ಹೇಳಿಕೊಂಡಿದ್ದು ಸುದ್ದಿಯಾಗಿತ್ತು.