ಮಧ್ಯಪ್ರದೇಶದ ಇಂಧೋರ್‌ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಗೋಶಾಲೆಯನ್ನು ಇಂಧೋರ್ ಮಹಾನಗರ ಪಾಲಿಕೆ ತೆರವುಗೊಳಿಸಿದೆ. ಈ ವೇಳೆ, ಬಜರಂಗದಳದ ಕಾರ್ಯಕರ್ತರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ಘರ್ಷಣೆ ನಡೆದಿದೆ. ಹಿಂಸಾಚಾರದಲ್ಲಿ ಸರ್ಕಾರಿ ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಇಂಧೋರ್‌ನ ದತ್ತನಗರದ ಕೆಲವು ವರ್ಷಗಳಿಂದ ಅಕ್ರಮವಾಗಿ ಗೋಶಾಲೆ ನಡೆಸಲಾಗುತ್ತಿತ್ತು. ಆ ಗೋಶಾಲೆಯನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದಾರೆ.
ಗೋಶಾಲೆಯನ್ನು ಅಗತ್ಯ ಅನುಮತಿ ಪಡೆಯದೆ ನಿರ್ಮಿಸಲಾಗಿತ್ತು. ಗೋಶಾಲೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಆ ಪ್ರದೇಶದ ನಿವಾಸಿಗಳು ಹಲವು ದೂರುಗಳನ್ನು ಸಲ್ಲಿಸಿದ್ದರು. ಹೀಗಾಗಿ, ಅಕ್ರಮವಾಗಿ ನಿರ್ಮಿಸಲಾಗಿದ್ದ ಗೋಶಾಲೆಯನ್ನು ತೆರವುಗೊಳಿಸಿರುವುದಾಗಿ ಇಂಧೋರ್ ಮಹಾನಗರ ಪಾಲಿಕೆಯ ಉಪ ಆಯುಕ್ತೆ ಲತಾ ಅಗರವಾಲ್ ತಿಳಿಸಿದ್ದಾರೆ.
ಈ ವೇಳೆ, ಬಜರಂಗದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಹಿಂಸಾಚಾರ ನಡೆದಿದೆ. ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಜರಂಗದಳದ ಕಾರ್ಯಕರ್ತರು ಜಾನುವಾರು ಸಾಗಣೆ ಮಾಡುತ್ತಿದ್ದ ಟ್ರಕ್‌ನ ಕಿಟಕಿ ಗಾಜನ್ನು ಹೊಡೆದು ಹಾಕಿದ್ದಾರೆ. ಅಲ್ಲದೆ, ಪಾಲಿಯ ಮೂವರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿದೆ. ಸರ್ಕಾರಿ ವಾಹನಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಆದರೆ, ಘರ್ಷಣೆ ಸಂಬಂಧ ಪಾಲಿಕಯಾಗಲೀ, ಬಜರಂಗದಳದ ಕಾರ್ಯಕರ್ತರಾಗಲೀ ದೂರು ದಾಖಲಿಸಿಲ್ಲ ಎಂದು ಡಿಸಿಪಿ ವಿನೋದ್ ಕುಮಾರ್ ಮೀನಾ ತಿಳಿಸಿದ್ದಾರೆ.