ಪುಣೆಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಪೋರ್ಷೆ ಕಾರು ಹಿಟ್ ಆ್ಯಂಡ್ ರನ್ ರೀತಿಯಲ್ಲೇ ಮತ್ತೊಂದು ಪ್ರಕರಣ ಮುಂಬೈನಲ್ಲಿ ಇಂದು ನಡೆದಿದೆ. ಮುಂಬೈನ ವಾರ್ಲಿಯಲ್ಲಿ ಬಿಎಂಡಬ್ಲ್ಯು ಕಾರನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ನಾಯಕರೊಬ್ಬರ 24 ವರ್ಷದ ಪುತ್ರ ಮಿಹಿರ್ ಶಾ ಕಾರು ಚಾಲನೆ ಮಾಡುತ್ತಿದ್ದು, ಅಪಘಾತದ ನಂತರ ನಾಪತ್ತೆಯಾಗಿದ್ದಾನೆ. ಮಿಹಿರ್ ಶಾ ತಂದೆ ರಾಜೇಶ್ ಶಾ ಪಾಲ್ಗರ್ ಜಿಲ್ಲೆಯ ಶಿವಸೇನೆಯ ಪ್ರಮುಖ ನಾಯಕರಾಗಿದ್ದಾರೆ.
ಬಿಎಂಡಬ್ಲ್ಯು ಕಾರು ರಾಜೇಶ್ ಶಾ ಹೆಸರಿನಲ್ಲಿ ನೋಂದಣಿಯಾಗಿದೆ. ಇಂದು ಬೆಳಿಗ್ಗೆ 5.30ರ ಸುಮಾರಿಗೆ ಮುಂಬೈನ ಅತ್ರಿಯಾ ಮಾಲ್ ಬಳಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿ ತಮ್ಮ ಪತಿಯ ಜೊತೆ ತೆರಳುತ್ತಿದ್ದ ಕಾವೇರಿ ನಕ್ವಾ ಎಂಬುವವರು ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ದ್ವಿಚಕ್ರ ವಾಹನದಲ್ಲಿ ದಂಪತಿ ತೆರಳುತ್ತಿದ್ದಾಗ ವೇಗವಾಗಿ ಬಂದ ಮಿಹಿರ್ ಶಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿದೆ.ಸ್ಕೂಟರ್‌ನಿಂದ ಕಾವೇರಿ ನಕ್ವಾ ಅವರ ಪತಿ ಪ್ರದೀಪ್ ನಕ್ವಾ ಬಿದ್ದ ನಂತರ ಕಾರಿನಡಿ ಕಾವೇರಿ ಅವರು ಸಿಲುಕಿದ್ದಾರೆ. ಅವರನ್ನು 100 ಮೀಟರ್‌ವರೆಗೂ ಕಾರು ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 19ರ ಇಬ್ಬರು ಐಟಿ ಉದ್ಯೋಗಿಗಳು ತೆರಳುತ್ತಿದ್ದ ಬೈಕ್‌ಗೆ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಅತಿ ವೇಗದ ಪೋರ್ಷೆ ಕಾರು ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಇಬ್ಬರೂ ಐಟಿ ಉದ್ಯೋಗಿಗಳು ಸಾವನ್ನಪ್ಪಿದ್ದರು. ಅಪಘಾತವಾದ ಸಮಯದಲ್ಲಿ ಬಾಲಕ ಮದ್ಯಪಾನ ಮಾಡಿದ್ದ.
ಸದ್ಯ ಬಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಆತನ ಪೋಷಕರು ಹಾಗೂ ಅಜ್ಜ ಸೆರೆಮನೆಯಲ್ಲಿದ್ದಾರೆ.
