ಉತ್ತರಪ್ರದೇಶದ ಪೂರ್ವಾಂಚಲ ಸೀಮೆಯ 13 ಕ್ಷೇತ್ರಗಳು ಬಿಜೆಪಿಯ ಪಾಲಿಗೆ ಈ ಸಲ ಏರು ಹಾದಿಯ ಪಯಣವಾಗಿ ಪರಿಣಮಿಸಿವೆ. ಇಂಡಿಯಾ ಮೈತ್ರಿಕೂಟ, ಅದರಲ್ಲೂ ವಿಶೇಷವಾಗಿ ಸಮಾಜವಾದಿ ಪಾರ್ಟಿ ಪೂರ್ವಾಂಚಲದಲ್ಲಿ ಕಳೆದುಕೊಂಡಿರುವ ನೆಲೆಯನ್ನು ಮತ್ತೆ ಗಳಿಸಲು ತೀವ್ರವಾಗಿ ಸೆಣಸಿದೆ. ‘ಪಿಛಡಾ ದಲಿತ್ ಅಲ್ಪಸಂಖ್ಯಾತ್’ (ಅಹಿಂದ) ಮತಗಳ ಮೇಲೆ ಕಣ್ಣಿರಿಸಿ ವ್ಯೂಹ ಹೆಣೆದಿದೆ.
ಹದಿಮೂರರ ಪೈಕಿ ಹನ್ನೊಂದು ಕ್ಷೇತ್ರಗಳನ್ನು 2019ರಲ್ಲಿ ಬಿಜೆಪಿ ತನ್ನ ಮಿತ್ರಪಕ್ಷ ಅಪ್ನಾದಳದೊಂದಿಗೆ ಗೆದ್ದುಕೊಂಡಿತ್ತು. ಘಾಜೀಪುರ ಮತ್ತು ಘೋಸಿ ಬಿ.ಎಸ್.ಪಿ. ಪಾಲಾಗಿದ್ದವು. ಎಸ್.ಪಿ. ಮತ್ತು ಕಾಂಗ್ರೆಸ್ ಗೆ ಏನೂ ಗಿಟ್ಟಿರಲಿಲ್ಲ. ಐದು ಸೀಟುಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ತವರು ಜಿಲ್ಲೆ ಗೋರಖಪುರದ ಸುತ್ತಮುತ್ತಲಿನವು. ನಾಲ್ಕು ಕ್ಷೇತ್ರಗಳು ಪ್ರಧಾನಿ ಮೋದಿಯವರ ವಾರಾಣಸಿ ಕ್ಷೇತ್ರದ ನೆರೆಹೊರೆಯಲ್ಲಿವೆ.
ಪ್ರತಿಪಕ್ಷಗಳನ್ನು ಚಿತ್ತು ಮಾಡಲು ಬಿಜೆಪಿ ಯೋಗಿ ಮಂತ್ರವನ್ನು ಜಪಿಸುವ ಜೊತೆಗೆ ಯೋಗಿಯವರ ಗೋರಕ್ಷನಾಥ ಪೀಠ ಹೊಂದಿರುವ ದಟ್ಟ ಪ್ರಭಾವಳಿಯನ್ನು ಝಳಪಿಸಿದೆ. ಯೋಗಿ ಪ್ರಚಾರದ ಮುಂಚೂಣಿ ವಹಿಸಿದ್ದಾರೆ. ಗೋರಕ್ಷನಾಥ ಪೀಠದ ಮುಖ್ಯಸ್ಥರಾಗಿ ಅವರ ಪ್ರಭಾವ ದಲಿತ, ಬ್ರಾಹ್ಮಣ, ರಜಪೂತ, ಭೂಮಿಹಾರ ಕುಲಗಳಲ್ಲಿಯೂ ಕೆಲಸ ಮಾಡುತ್ತಿದೆ. ಆದಿತ್ಯನಾಥರ ಪ್ರಭಾವ ಇಲ್ಲದೆ ಹೋಗಿದ್ದರೆ ಬಿಜೆಪಿ ಪೂರ್ವಾಂಚಲದಲ್ಲಿ ಮತ್ತಷ್ಟು ಹೆಚ್ಚು ತಿಣುಕಾಡಬೇಕಿತ್ತು.
ಜೂನ್ ಒಂದರಂದು ಕಟ್ಟಕಡೆಯ ಹಂತದ ಮತದಾನ ಸನ್ನಿಹಿತವಾಗಿದೆ. ಪರಾಕಾಷ್ಠೆಯ ಸನ್ನಿವೇಶದಲ್ಲಿ ಪೂರ್ವಾಂಚಲ ಸೀಮೆಯನ್ನು ಹೊಕ್ಕಿದೆ. ಮಹಾರಾಜಗಂಜ್, ಗೋರಖಪುರ, ಕುಶೀನಗರ, ದೇವರಿಯಾ, ಬಾಂಸ್ಗಾಂವ್, ಘೋಸೀ, ಸಲೇಮ್ಪುರ, ಬಲಿಯಾ, ಗಾಜೀಪುರ, ಚಂದೌಲಿ, ವಾರಾಣಸಿ, ಮಿರ್ಜಾಪುರ ಹಾಗೂ ರಾಬರ್ಟ್ಸ್ ಗಂಜ್ ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ವಿಶೇಷವಾಗಿ ಪೂರ್ವಾಂಚಲದ ಚುನಾವಣೆಗಳಲ್ಲಿ ಜಾತಿಗಳ ಭೂಮಿಕೆ ದೊಡ್ಡದು. ಒಂದು ಕಾಲಕ್ಕೆ ಬ್ರಾಹ್ಮಣ ಮತ್ತು ರಜಪೂತರು ಈ ಚುನಾವಣೆಯ ದೆಸೆ ಮತ್ತು ದಿಸೆಗಳನ್ನು ತೀರ್ಮಾನಿಸುತ್ತಿದ್ದರು. ಮಂಡಲ-ಕಮಂಡಲ ರಾಜಕಾರಣ ಹಳೆಯ ರಾಜಕಾರಣವನ್ನು ಬದಲಿಸಿದೆ. ಕಮಂಡಲ ರಾಜಕಾರಣದ ಜೊತೆ ಜೊತೆಗೆ ಜಾತಿಯ ಚಕ್ರವ್ಯೂಹವನ್ನು ಭೇದಿಸುವ ಸವಾಲು ಬಿಜೆಪಿಯ ಮುಂದಿದೆ. ಬಿ.ಎಸ್.ಪಿ. ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದೆ.

ಎರಡು ಅಥವಾ ಮೂರು ರಾಜ್ಯಗಳು ಗಳಿಸುವುದಕ್ಕಿಂತಲೂ ಹೆಚ್ಚು ಮಂದಿ ಸದಸ್ಯರನ್ನು (80) ಲೋಕಸಭೆಗೆ ಆರಿಸುವ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ. ಎಂಭತ್ತರ ಪೈಕಿ ಅರವತ್ತೇಳು ಲೋಕಸಭಾ ಕ್ಷೇತ್ರಗಳ ಮತದಾನ ಮುಗಿದಿದೆ. ಏಳನೆಯ ಈ ಹಂತದಲ್ಲಿ ಪ್ರಧಾನಿಯವರನ್ನು ಎರಡು ಬಾರಿ ಗೆಲ್ಲಿಸಿರುವ ವಾರಾಣಸಿ ಇದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಉಕ್ಕಿನ ಕೋಟೆ ಗೋರಖಪುರ, ಕುಪ್ರಸಿದ್ಧ ಅನ್ಸಾರಿ ಸೋದರರ ಗಾಜೀಪುರ ಇವೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮಗ ನೀರಜ್ ಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಲಿಯಾ ಇದೆ.
ಹೊಳಪು ಕಳೆದುಕೊಳ್ಳತೊಡಗಿದ್ದರೂ ಚಾಲ್ತಿಯಲ್ಲಿರುವ ಪ್ರಧಾನಿ ಮೋದಿಯವರ ವರ್ಚಸ್ಸು, ಮುಖ್ಯಮಂತ್ರಿ ಆದಿತ್ಯನಾಥ ಅವರ ಅಭಿವೃದ್ಧಿಪರವಿದ್ದರೂ ಹಿಂದುತ್ವ ಕುರಿತ ಅಚಲ ಬದ್ಧತೆ, ಮಾಫಿಯಾ ನಿಗ್ರಹದ ನಿಲುವು ಗಳಿಸಿರುವ ಜನಪ್ರಿಯತೆಯನ್ನು ಒರೆಗೆ ಒಡ್ಡಲಿವೆ.
ಸಂಜಯ ನಿಷಾದ್ ಅವರ ನಿಷಾದ್ ಪಾರ್ಟಿ, ಒ.ಪಿ.ರಾಜಭರ್ ಅವರ ಎಸ್.ಬಿ.ಎಸ್.ಪಿ., ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ (ಎಸ್) ನಂತಹ ಬಿಜೆಪಿ ಮಿತ್ರಪಕ್ಷಗಳ ಸತ್ವಪರೀಕ್ಷೆಯೂ ಈ ಹಂತದಲ್ಲಿ ನಡೆಯಲಿದೆ. ಆದಿತ್ಯನಾಥರ ಸೀಮೆಯಿದು ಎಂಬ ವಾಸ್ತವ ಅರಿತಿರುವ ಮೋದಿಯವರು ಈ ಹಂತದಲ್ಲಿ ಮುಖ್ಯಮಂತ್ರಿಯವರನ್ನು ಪ್ರಚಾರಸಭೆಗಳಲ್ಲಿ ಹಾಡಿ ಹರಸುತ್ತಿದ್ದಾರೆ.
ಪೂರ್ವಾಂಚಲದಲ್ಲಿ ಕಳೆದ ಎರಡು ವಿಧಾನಸಭೆ ಮತ್ತು ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಯಶಸ್ಸಿನ ಹಿಂದೆ ಹಿಂದುಳಿದ ವರ್ಗಗಳ ಬೆಂಬಲ ದೊಡ್ಡ ರೀತಿಯಲ್ಲಿ ಕೆಲಸ ಮಾಡಿತ್ತು. ಯಾದವರ ಪಕ್ಷವೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಪ್ರಯತ್ನವನ್ನು ಅಖಿಲೇಶ್ ಈ ಸಲ ಉತ್ತರಪ್ರದೇಶದ ಉದ್ದಗಲಕ್ಕೂ ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೆ. ಕೇವಲ ಐವರು ಯಾದವರಿಗೆ ಮಾತ್ರವೇ ಟಿಕೆಟ್ ನೀಡಿದ್ದಾರೆ. ಮಾಯಾವತಿಯವರು ದಲಿತ-ಮುಸಲ್ಮಾನ ದಾಳ ಉರುಳಿಸಿದ್ದಾರೆ. ಆರು ಸೀಟುಗಳಲ್ಲಿ ಹಿಂದುಳಿದ ವರ್ಗಗಳಿಗೆ ಟಿಕೆಟ್ ನೀಡಿದ್ದಾರೆ.
ಯಾದವರ ನಂತರ ಕುರ್ಮಿಗಳು ಉತ್ತರಪ್ರದೇಶದ ಅತಿ ದೊಡ್ಡ ಹಿಂದುಳಿದ ಜಾತಿ. ಬಿಜೆಪಿಯ ಮಿತ್ರಪಕ್ಷ ಅನುಪ್ರಿಯಾ ಪಟೇಲ್ ಅವರ ಅಪ್ನಾದಳ (ಎಸ್) ಕುರ್ಮಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರತಿನಿಧಿಸುವ ಪಕ್ಷ. ಅನುಪ್ರಿಯಾ ಪಟೇಲ್ ಮಿರ್ಜಾಪುರ ಕಣದಲ್ಲಿದ್ದಾರೆ.
ಘೋಸೀ ಕ್ಷೇತ್ರದಿಂದ ಬಿ.ಎಸ್.ಪಿ.ಯ ಅತುಲ್ ರಾಯ್ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಆಗ ಸಮಾಜವಾದಿ ಪಾರ್ಟಿ ಮತ್ತು ಬಿ.ಎಸ್.ಪಿ. ಚುನಾವಣಾ ಮೈತ್ರಿ ಮಾಡಿಕೊಂಡಿದ್ದವು. ಎಸ್.ಪಿ.ಯ ಮತಗಳೂ ಬಿ.ಎಸ್.ಪಿ.ಯ ಪಾಲಾಗಿದ್ದವು. ಈ ಸಲ ಎಸ್.ಪಿ. ಮತ್ತು ಬಿ.ಎಸ್.ಪಿ. ಬಲಿಷ್ಠ ಉಮೇದುವಾರರನ್ನು ಹೂಡಿವೆ. ಬಿಜೆಪಿ ತನ್ನ ಮಿತ್ರಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿಯ ಅರವಿಂದ್ ರಾಜಭರ್ ಅವರನ್ನು ಎನ್.ಡಿ.ಎ. ಅಭ್ಯರ್ಥಿಯನ್ನಾಗಿ ಹೂಡಿದೆ. ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿಯ (ಎಸ್.ಬಿ.ಎಸ್.ಪಿ) ಸ್ಥಾಪಕ ಓಂಪ್ರಕಾಶ್ ರಾಜಭರ್ ಅವರ ಮಗ ಅರವಿಂದ್. ಓಂಪ್ರಕಾಶ್ ಒಂದು ಕಾಲದಲ್ಲಿ ಬಿ.ಎಸ್.ಪಿ.ಯಲ್ಲಿ ಇದ್ದವರು.
ಎರಡನೆಯ ಸಲ ಟಿಕೆಟ್ ಸಿಗಲಿಲ್ಲವೆಂದು ತಮ್ಮದೇ ಸಮುದಾಯದ ಹೊಸ ಪಕ್ಷ ಕಟ್ಟಿದರು. ಎಸ್.ಪಿ. ಸಂಗ ಬೆಳೆಸಿದ್ದವರು ಈ ಸಲ ಬಿಜೆಪಿ ತೆಕ್ಕೆಗೆ ಜಾರಿದ್ದರು. ಇತ್ತೀಚಿನ ತನಕ ಬಿಜೆಪಿಯನ್ನು ತೆಗಳುತ್ತಿದ್ದ ಓಂಪ್ರಕಾಶ್ ರಾಜಭರ್ ಅವರ ಕುರಿತು ಬಿಜೆಪಿಯ ಸ್ಥಳೀಯ ನಾಯಕತ್ವ—ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಉತ್ಸಾಹವಿಲ್ಲ. ಜೊತೆಗೆ ಮತಪತ್ರದಲ್ಲಿ ಎಸ್.ಬಿ.ಎಸ್.ಪಿ.ಯ ಚಿಹ್ನೆಯಿರುತ್ತದೆಯೇ ವಿನಾ ಕಮಲದ ಗುರುತಲ್ಲ. ಎರಡು ಲಕ್ಷದಷ್ಟು ರಾಜಭರ್ ಮತಗಳ ಪೈಕಿ ಬಹುತೇಕ ಮತಗಳು ಅರವಿಂದ್ ಪಾಲಾದರೂ, ಬಿಜೆಪಿಯನ್ನು ಬೆಂಬಲಿಸುವ ಇತರೆ ಸಮುದಾಯಗಳು ನಿರಾಸಕ್ತಿ ತಳೆದಿವೆ.
ಗಾಜೀಪುರ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಬಿ.ಎಸ್.ಪಿ.ಯ ಅಫ್ಜಲ್ ಅನ್ಸಾರಿ ಗೆದ್ದಿದ್ದರು. ಬಿಜೆಪಿಯ ಮನೋಜ್ ಸಿನ್ಹಾ ಅವರನ್ನು 1.19 ಲಕ್ಷ ಮತಗಳಿಂದ ಸೋಲಿಸಿದ್ದರು. ಅಫ್ಜಲ್ ಈ ಸಲ ಸಮಾಜವಾದಿ ಪಾರ್ಟಿಯ ಅಭ್ಯರ್ಥಿ. ಮುಖ್ತಾರ್ ಅನ್ಸಾರಿ ಇತ್ತೀಚೆಗೆ ಜೈಲಿನಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ ಅಫ್ಜಲ್ ಗೆ ಸಹಾನುಭೂತಿ ಮತಗಳು ದೊರೆಯುವ ಸಾಧ್ಯತೆಯಿದೆ. ಆದರೆ ತನ್ನನ್ನು ತೊರೆದಿರುವ ಅಫ್ಜಲ್ ವಿರುದ್ಧ ಬಿ.ಎಸ್.ಪಿ ಕತ್ತಿ ಮಸೆದಿದೆ.
ಲಾಲ್ ಗಂಜ್ ಕ್ಷೇತ್ರವನ್ನು 2019ರಲ್ಲಿ ಎಸ್.ಪಿ.-ಬಿ.ಎಸ್.ಪಿ.ಮೈತ್ರಿಯು ಬಿಜೆಪಿಯಿಂದ ಕಸಿದುಕೊಂಡಿತ್ತು. ಬಿ.ಎಸ್.ಪಿ.ಯ ಸಂಗೀತಾ ಆಝಾದ್ ಗೆದ್ದಿದ್ದರು. 2014ರಲ್ಲಿ ಗೆದ್ದಿದ್ದ ತನ್ನ ಅಭ್ಯರ್ಥಿ ನೀಲಂ ಸೋನ್ಕರ್ ಅವರನ್ನೇ ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ಡಾ.ಇಂದು ಚೌಧರಿ ಬಿ.ಎಸ್.ಪಿ. ಅಭ್ಯರ್ಥಿ. ಹಳೆಯ ಸಮಾಜವಾದಿ ದರೋಗಾ ಸರೋಜ್ ಸಮಾಜವಾದಿ ಪಾರ್ಟಿಯ ಹುರಿಯಾಳು. ಈ ಕ್ಷೇತ್ರದಲ್ಲಿ ಎರಡೂವರೆ ಲಕ್ಷ ಮುಸ್ಲಿಮ್ ಮತ್ತು ಎರಡು ಲಕ್ಷ ಯಾದವ ಮತದಾರರಿದ್ದಾರೆ. ಆದರೆ ಅತಿ ಹಿಂದುಳಿದವರು ಮತ್ತು ದಲಿತರ ಮತಗಳು ಕೂಡ ಇಷ್ಟೇ ನಿರ್ಣಾಯಕ ಪ್ರಮಾಣದಲ್ಲಿವೆ. ಹೀಗಾಗಿ ಇಲ್ಲಿ ಬಿಜೆಪಿಯ ಗೆಲುವು ಬಿ.ಎಸ್.ಪಿ. ಪಡೆಯುವ ಮತಗಳ ಸಂಖ್ಯೆಯನ್ನು ಅವಲಂಬಿಸಿದೆ.
ಚಂದೌಲಿ ಕ್ಷೇತ್ರವನ್ನು ಕಳೆದ ಸಲ ಬಿಜೆಪಿ ಸುಮಾರು 14 ಸಾವಿರ ಮತಗಳ ಅಂತರದಿಂದ ಗೆದ್ದಿತ್ತು. ಸಮಾಜವಾದಿ ಪಾರ್ಟಿಯ ವೀರೇಂದ್ರ ಸಿಂಗ್ ಮತ್ತು ಬಿ.ಎಸ್.ಪಿ.ಯ ಸತ್ಯೇಂದ್ರಕುಮಾರ್ ಮೌರ್ಯ ಕಣದಲ್ಲಿದ್ದಾರೆ. ಮೌರ್ಯ ಮತದಾರರು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈವರೆಗೆ ಈ ಜನಾಂಗ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಈ ಮತದಾರರ ಮತಗಳು ಒಡೆದರೆ ಬಿಜೆಪಿಯ ಅಭ್ಯರ್ಥಿ ಫಜೀತಿ ಎದುರಿಸುವುದು ನಿಶ್ಚಿತ.
ಬಲಿಯಾ ಕ್ಷೇತ್ರದಲ್ಲಿ ಕಳೆದ ಸಲ ಬಿಜೆಪಿಯ ವೀರೇಂದ್ರಸಿಂಗ್ ಮಸ್ತ್ ಅವರು 15 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಸಲ ಬಿಜೆಪಿಯು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮಗ ನೀರಜ್ ಶೇಖರ್ ಅವರನ್ನು ಸ್ಪರ್ಧೆಗೆ ಇಳಿಸಿದೆ. ಸಮಾಜವಾದಿ ಪಕ್ಷದ ಸನಾತನ ಪಾಂಡೆ ಮತ್ತು ಬಿ.ಎಸ್.ಪಿ.ಯ ಲಲ್ಲನ್ ಸಿಂಗ್ ಯಾದವ್ ಕಣದಲ್ಲಿದ್ದಾರೆ. ನೀರಜ್ ಶೇಖರ್ ಮೇಲುಗೈ ಹೊಂದಿದ್ದಾರೆ. ವಾರಾಣಸಿಯಲ್ಲಿ ಉಳಿದಿರುವ ಕುತೂಹಲದ ಸಂಗತಿ ಮೋದಿಯವರ ಗೆಲುವಿನ ಅಂತರ ಮಾತ್ರ.
