ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಅವರು ಕೆಲವು ಅರ್ಥಶಾಸ್ತ್ರಜ್ಞರೊಂದಿಗೆ ಸೇರಿ ಕಳೆದ ಒಂದು ಶತಮಾನದಲ್ಲಿ ಭಾರತದ ಆರ್ಥಿಕ ಅಸಮಾನತೆಯ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಕೆಲವು ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ.
ಅವರು ಸಿದ್ದಪಡಿಸಿದ – ‘ಇನ್‌ಕಮ್ ಅಂಡ್ ವೆಲ್ತ್ ಇನಿಕ್ವಾಲಿಟಿ ಇನ್ ಇಂಡಿಯಾ, 1922-2023: ದಿ ರೈಸ್ ಆಫ್ ದಿ ಬಿಲಿಯನೇರ್ ರಾಜ್’ (ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ, 1922-2023: ಕೋಟ್ಯಾಧಿಪತಿಗಳ ರಾಜ್ಯ ಉದಯ) – ವರದಿಯು ಪ್ರಸ್ತುತ ಭಾರತದಲ್ಲಿನ ಆರ್ಥಿಕ ಅಸಮಾನತೆಯು ಹಿಂದಿನ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಅತ್ಯಂತ ಕೆಟ್ಟದಾಗಿದೆ ಎಂದು ಹೇಳಿದೆ.
2022ರಲ್ಲಿ, ಭಾರತೀಯ ಜನಸಂಖ್ಯೆಯಲ್ಲಿ ಅಗ್ರ 1% ಜನರು (ಅತಿ ಶ್ರೀಮಂತರು) ಒಟ್ಟು ಸಂಪತ್ತಿನ 40.1%ರಷ್ಟು ಪಾಲನ್ನು ಹೊಂದಿದ್ದಾರೆ ಮತ್ತು ಒಟ್ಟು ರಾಷ್ಟ್ರೀಯ ಆದಾಯದಲ್ಲಿ 22.6%ರಷ್ಟನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ, ಕೆಳಭಾಗದಲ್ಲಿರುವ 50% ಜನರು ಒಟ್ಟು ಸಂಪತ್ತಿನಲ್ಲಿ ಕೇವಲ 6.4%ರಷ್ಟನ್ನು ಮಾತ್ರ ಹೊಂದಿದ್ದಾರೆ. ಅವರು ಒಟ್ಟು ಆದಾಯದಲ್ಲಿ 15% ಗಳಿಕೆಯನ್ನು ಹೊಂದಿದ್ದಾರೆ. ಅಗ್ರ 10% ಜನರು ಒಟ್ಟು ಸಂಪತ್ತಿನ 65% ಪಾಲನ್ನು ಹೊಂದಿದ್ದಾರೆ. ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಅವರು 57.7%ರಷ್ಟನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ 10% ಜನರಿಗೆ ಹೋಲಿಸಿದರೆ, ಕೆಳಭಾಗದಲ್ಲಿರುವ 50% ಜನರ ಭವಿಷ್ಯವು ಅತ್ಯಂತ ಶೋಚನೀಯವಾಗಿದೆ.
ಭಾರತದ ತೆರಿಗೆ ವ್ಯವಸ್ಥೆಯು ಹೆಚ್ಚಾಗಿ ಜನರ ಆದಾಯವನ್ನು ಆಧರಿಸಿದೆ. ತೆರಿಗೆ ವ್ಯವಸ್ಥೆ ಹಿಂಜರಿತ ಕಾಣುತ್ತಿದೆ. ಪರಿಣಾಮ, ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆ ವಿಧಿಸಲು ಸರ್ಕಾರ ಮುಂದಾಗಬೇಕಾಗಿದೆ ಎಂದು ಸಂಶೋಧಕರು ವಾದಿಸುತ್ತಾರೆ.
ಆರ್ಥಿಕ ಪೈಪೋಟಿ ಬೆಳೆದಿದೆ
ಪಿಕೆಟ್ಟಿ ಮತ್ತು ಅವರ ಸಹ-ಲೇಖಕರು ಗಮನಿಸಿದ ಎರಡು ಪ್ರಮುಖ ಪ್ರವೃತ್ತಿಗಳಿವೆ. ಮೊದಲನೆಯದಾಗಿ, 1980ರ ದಶಕದಿಂದ ಭಾರತವು ಮಾರುಕಟ್ಟೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದಾಗ ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ ತೀವ್ರವಾಗಿ ಏರಲು ಪ್ರಾರಂಭಿಸಿತು. ಉದಾಹರಣೆಗೆ, ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕೆಳಗಿನ 50% ಜನರ ಸಂಪತ್ತಿನ ಪಾಲು 1982ರಲ್ಲಿ 23.6% ಇತ್ತು. ಈಗ 2022ರಲ್ಲಿ 15%ಕ್ಕೆ ಕುಸಿದಿದೆ. ಆದರೆ, ಇದೇ ಅವಧಿಯಲ್ಲಿ ಅಗ್ರ 10% ಶ್ರೀಮಂತರ ಆದಾಯದ ಪಾಲು 30.1% ರಿಂದ 57.7%ಗೆ ಏರಿದೆ. ಎರಡನೆಯದಾಗಿ, ಭಾರತದಲ್ಲಿನ ಆರ್ಥಿಕ ಬೆಳವಣಿಗೆಯು ಸಮಾಜವಾದಿ ದಶಕಗಳಲ್ಲಿ ನಿಶ್ಚಲವಾಗಿತ್ತು. 1990ರ ನಂತರ ಏರಿಕೆಯಾಗಲು ಪ್ರಾರಂಭಿಸಿತು. 1960 ಮತ್ತು 1990ರ ನಡುವೆ ಭಾರತದ ಆರ್ಥಿಕತೆಯು ಪ್ರತಿ ವರ್ಷ ಶೋಚನೀಯ 1.6% ರಷ್ಟು ಬೆಳವಣಿಗೆ ಕಾಣುತ್ತಿತ್ತು. ಆದರೆ, 1990 ಮತ್ತು 2022 ರ ನಡುವೆ ಪ್ರತಿ ವರ್ಷಕ್ಕೆ 3.6%ರಷ್ಟು ಏರಿಕೆಯಾಗುತ್ತಿದೆ ಎಂದು ಪಿಕೆಟ್ಟಿ ಹೇಳಿದ್ದಾರೆ.
ಹಾಗಾದರೆ, ಈ ಪ್ರವೃತ್ತಿಗಳು ಏನು ಹೇಳುತ್ತವೆ?
ಮೊದಲನೆಯದಾಗಿ, ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕಡೆಯ 50% ಜನರ ಪಾಲು ಕುಸಿತವಾಗಿದೆ ಎಂದರೆ, ಅವರ ನೈಜ ಆದಾಯದ ಮಟ್ಟಗಳು ಅಥವಾ ಜೀವನ ಮಟ್ಟದಲ್ಲಿ ಕುಸಿತವಾಗಿದೆ ಎಂದು ಅರ್ಥವಲ್ಲ ಎಂದು ಪಿಕೆಟ್ಟಿ ಹೇಳುತ್ತಾರೆ. ವಿಶ್ವ ಅಸಮಾನತೆ ಪ್ರಯೋಗಾಲಯದ ಮಾಹಿತಿಯು 1991 ಮತ್ತು 2022ರ ನಡುವೆ ಕಡೆಯ 50% ಜನರ ಒಟ್ಟು ನೈಜ ಆದಾಯವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಸೂಚಿಸುತ್ತದೆ. ಅದೇ ಅವಧಿಯಲ್ಲಿ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಅವರ ಪಾಲು 23.6% ರಿಂದ 15%ಕ್ಕೆ ಕುಸಿದಿದೆ ಎಂಬುದೂ ವಾಸ್ತವ. ಇದನ್ನು, ಬೇರೆ ರೀತಿಯಲ್ಲಿ ಹೇಳುವುದಾದರೆ, ಕಳೆದ 30 ವರ್ಷಗಳಲ್ಲಿ ಭಾರತದ ಒಟ್ಟು ಆರ್ಥಿಕ ಗಾತ್ರವು ತುಂಬಾ ಬೆಳೆದಿದೆ. ಒಟ್ಟು ರಾಷ್ಟ್ರೀಯ ಆದಾಯದಲ್ಲಿ 50% ಜನರು ಕಡಿಮೆ ಪಾಲನ್ನು ಹೊಂದಿದ್ದರೂ, ಅವರ ನೈಜ ಆದಾಯದಲ್ಲಿ ಏರಿಕೆಯಾಗಿದೆ. ಆದರೆ, ಇದೇ ವೇಳೆ, ಶ್ರೀಮಂತರ ಆದಾಯ ಬಹುಪಟ್ಟುಗಳಲ್ಲಿ ಹೆಚ್ಚಾಗಿದೆ.
ಎರಡನೆಯದಾಗಿ, 1980ರ ದಶಕದಿಂದ ಈಚೆಗೆ ಆದಾಯದ ಷೇರುಗಳಲ್ಲಿ ಕಡೆಯ 50% ಜನರು ಅಗ್ರ 1% ಮತ್ತು 10% ಶ್ರೀಮಂತರಷ್ಟು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸಿಲ್ಲ ಎಂಬುದನ್ನು ವರದಿ ತೋರುತ್ತದೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಯಾವುದೇ ಗುಂಪು – ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಿನ ಪಾಲು ಪಡೆಯಲು ಮಾರುಕಟ್ಟೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವ ಗುಂಪಿನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕು. ಭಾರತದಲ್ಲಿ ಅಗ್ರ 1% ಶ್ರೀಮಂತರು ವಾರ್ಷಿಕವಾಗಿ ಸರಾಸರಿ 53 ಲಕ್ಷ ರೂ. ಗಳಿಸುತ್ತಾರೆ. ಆದರೆ, ಕಡೆಯ 50% ಜನರು ಕೇವಲ 71 ರೂ. ಮಾತ್ರ ಗಳಿಸುತ್ತಾರೆ ಎಂದು ಪಿಕೆಟ್ಟಿ ಅಂದಾಜಿಸಿದ್ದಾರೆ.
ಈ 50% ಜನರು ತಮ್ಮ ಆಸ್ತಿ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಬೇಕಾಗಿದೆ. ಅವರ ಆಸ್ತಿ ಸರ್ಕಾರದ ಮೂಲಕ ಕೈಗಾರಿಕೋದ್ಯಮಗಳ ಕೈ ಸೇರುವ ಆತಂಕವೂ ಇರುತ್ತದೆ. ಅಲ್ಲದೆ, ಅವರಿಗೆ ಜೀವನೋಪಾಯವನ್ನು ಮಾಡಲು ಕಷ್ಟವಾಗುತ್ತದೆ. ಅವರು ಆದಾಯದ ಏಣಿಯ ಮೇಲೆ ಏರಲು ಕೂಡ ಅವಕಾಶಗಳು ದೊರೆಯುವುದಿಲ್ಲ. ಆದ್ದರಿಂದ, ಭಾರತದ ಬಡವರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯದ ಅಗತ್ಯವಿದೆಯೇ ಹೊರತು, ಹೆಚ್ಚಿನ ಆದಾಯ ಗಳಿಸುವವರ ಮೇಲೆ ಹೆಚ್ಚಿನ ತೆರಿಗೆಗಳಲ್ಲ ಎಂಬುದನ್ನು ಪಿಕೆಟ್ಟಿ ಪ್ರತಿಪಾದಿಸಿದ್ದಾರೆ.
ಸಂಪತ್ತಿನ ಅಸಮಾನತೆ
ಇಂದು ನಾವು ಭಾರತದಲ್ಲಿ ಕಾಣುವ ವಿಪರೀತ ಸಂಪತ್ತಿನ ಅಸಮಾನತೆಗೆ ಮುಕ್ತ ಮಾರುಕಟ್ಟೆ ಕಾರಣವಲ್ಲ. ಬದಲಾಗಿ, ಈ ಅಗ್ರ 1% ಶ್ರೀಮಂತರು ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ಪಡೆಯುತ್ತಿರುವುದು ಕಾರಣ. ಸರ್ಕಾರದ ಸವಲತ್ತುಗಳು ಅವರನ್ನು ರಕ್ಷಿಸುತ್ತಿವೆ. ಪರಿಣಾಮ, ಆದಾಯದಲ್ಲಿ ಅವರ ಪಾಲನ್ನು ಗಣನೀಯವಾಗಿ ಕಡಿಮೆ ಮಾಡುವ ಮಾರುಕಟ್ಟೆ ಸ್ಪರ್ಧೆಯಿಂದ ಅವರು ಪಾರಾಗುತ್ತಿದ್ದಾರೆ. ಅಂತಹ ವಿಶೇಷ ಸವಲತ್ತುಗಳನ್ನು ತೊಡೆದುಹಾಕುವುದು ಮತ್ತು ಆರ್ಥಿಕತೆಯಲ್ಲಿ ಹೆಚ್ಚಿನ ಸ್ಪರ್ಧೆಗೆ ಅವಕಾಶ ನೀಡುವುದು ಮುಂದಿನ ಮಾರ್ಗವಾಗಿದೆ.
ಆರ್ಥಿಕತೆಯಲ್ಲಿ ಸ್ಪರ್ಧೆಯು ಸ್ವಾಭಾವಿಕವಾಗಿ ಅಗ್ರ 1% ಶ್ರೀಮಂತರ ಸಂಪತ್ತಿನ ಪಾಲನ್ನು ಕಡಿಮೆ ಮಾಡುತ್ತದೆ. ಎಲ್ಲರಿಗೂ ವ್ಯಾಪಕ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ, ಹೂಡಿಕೆದಾರರ ಸಂಖ್ಯೆಯು ಹೆಚ್ಚಿದಂತೆ ‘ಆರ್ಥಿಕ ಪೈ’ಗಳು ಎನ್ನಿಸಿಕೊಂಡವರ ಸಂಖ್ಯೆ ಹಿಗ್ಗುತ್ತದೆ. ಈ ಸ್ಪರ್ಧೆಯು ಯಾರೊಬ್ಬರೂ ಶಾಶ್ವತವಾಗಿ ಅಗ್ರಸ್ಥಾನದಲ್ಲಿ ಉಳಿಯುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಸಂಪತ್ತು ತೆರಿಗೆ ವಿಧಿಸುವುರಿಂದ ಸಾಮಾನ್ಯವಾಗಿ, ಹೂಡಿಕೆದಾರರು ತಮ್ಮ ನಿರೀಕ್ಷಿತ ತೆರಿಗೆಗಿಂತಲೂ ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ. ಆಗ, ಅವರು ಅದರಿಂದ ತಪ್ಪಿಸಿಕೊಳ್ಳಲು ಯಾವುದೇ ಉದ್ಯಮಗಳ ಮೇಲಿನ ಹೂಡಿಕೆಗಳಲ್ಲಿ ತಮ್ಮ ಬಂಡವಾಳದ ಮೊತ್ತವನ್ನು ಕಡಿಮೆ ಮಾಡುತ್ತಾರೆ. ಅದು ಕಡಿಮೆ ವೇತನವನ್ನು ಪಡೆಯುವ ಕಾರ್ಮಿಕರ ಆದಾಯದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ.
ಹೀಗಾಗಿ, ಅಸಮಾನತೆಯ ವಿರುದ್ಧ ಹೋರಾಡಲು ಮತ್ತು ಬಡವರಿಗೆ ಸಹಾಯ ಮಾಡಲು ಸರಿಯಾದ ಮಾರ್ಗವೆಂದರೆ, ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದು ಮಾತ್ರವಲ್ಲ, ಬಡವರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ನೀಡಬೇಕಾಗಿದೆ.