ಮಹಿಳೆಯರಿಗೆ ಅತ್ಯಂತ ಅಪಾಯಕಾರಿ 10 ದೇಶಗಳಲ್ಲಿ ‘ಭಾರತ’ವೂ ಒಂದು; ಪಾಕ್‌-ಬಾಂಗ್ಲಾವೇ ಬೆಟರ್‌ ಎಂದ ಸಮೀಕ್ಷೆ

Date:

Advertisements

ಒಂಟಿಯಾಗಿ ಬದುಕುವ ಮತ್ತು ಪ್ರಯಾಣಿಸುವ ಮಹಿಳೆಯರಿಗೆ ಸುರಕ್ಷತೆಯು ಅತ್ಯಂತ ಮುಖ್ಯವಾದ ಕಾಳಜಿಯ ವಿಚಾರವಾಗಿದೆ. ವಿಶೇಷವಾಗಿ ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ಹೆಚ್ಚು ಗಮನಿಸಬೇಕಾದ ತುರ್ತು ಅಗತ್ಯವಿದೆ. ಇದೇ ಹೊತ್ತಿನಲ್ಲಿ ‘ವಿಶ್ವ ಜನಸಂಖ್ಯಾ ವಿಮರ್ಶೆ’ಯ ಮಹಿಳಾ ಅಪಾಯ ಸೂಚ್ಯಂಕವು ಗಂಭೀರ ವಿಚಾರವನ್ನು ಬಹಿರಂಗಪಡಿಸಿದೆ. 2025ರಲ್ಲಿ ಮಹಿಳೆಯರು ಹೆಚ್ಚು ಅಪಾಯಗಳನ್ನು ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನಪಡೆದಿದೆ ಎಂದು ಹೇಳಿದೆ. ಮಾತ್ರವಲ್ಲ, ಭಾರತಕ್ಕೆ ಹೋಲಿಸದರೆ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿಯೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆ ಪ್ರಮಾಣದಲ್ಲಿವೆ ಎಂದು ವಿವರಿಸಿದೆ.

ಮಹಿಳಾ ಅಪಾಯ ಸೂಚ್ಯಂಕದ ಪ್ರಕಾರ, 2025ರಲ್ಲಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಆ 10 ರಾಷ್ಟ್ರಗಳ ಪಟ್ಟಿ ಇಲ್ಲಿದೆ:

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾವು ಲಿಂಗ ಆಧಾರಿತ ಹಿಂಸಾಚಾರಕ್ಕೆ (GBV) ಸಂಬಂಧಿಸಿದಂತೆ ಆತಂಕಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಹಿಳೆಯರಿಗೆ ಹೆಚ್ಚು ಅಸುರಕ್ಷಿತವಾದ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ಕತ್ತಲಾದ ನಂತರ ಮಹಿಳೆಯರು ಒಂಟಿಯಾಗಿ ಹೊರಗೆ ಹೋಗುವುದೇ ಸಮಸ್ಯೆಯಾಗಿದೆ. ರಾತ್ರಿ ವೇಳೆ ಹೊರಹೋಗುವ ಮಹಿಳೆಯರಲ್ಲಿ ಸುರಕ್ಷಿತ ಭಾವನೆಯು ತೀರಾ ಕಡಿಮೆಯಾಗಿದೆ.

Advertisements

ಬ್ರೆಜಿಲ್
ಮಹಿಳೆಯರು ಗಮನಾರ್ಹ ಅಪಾಯಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ರಾತ್ರಿಯಲ್ಲಿ ಒಂಟಿಯಾಗಿ ಹೊರಹೋಗುವ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂಬ ವಿಚಾರದಲ್ಲಿ ಆತಂಕವೇ ಹೆಚ್ಚಾಗಿರುತ್ತದೆ. ಬ್ರೆಜಿಲ್‌ನಲ್ಲಿ ಸ್ತ್ರೀ ಹತ್ಯೆಗಳು ಮತ್ತು ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯಗಳು ಮಹಿಳೆಯರಲ್ಲಿ ಅಭದ್ರತೆಯನ್ನು ಸೃಷ್ಟಿಸಿವೆ. ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚು ಅಭದ್ರತೆ ಕಾಡುತ್ತಿದೆ.

ರಷ್ಯಾ
ರಾಜಕೀಯ ನಿರ್ಬಂಧಗಳು ಮತ್ತು ಲಿಂಗಾಧಾರಿತ ಸಾಂಸ್ಕೃತಿಕ ತಾರತಮ್ಯದಿಂದಾಗಿ ರಷ್ಯಾದಲ್ಲಿ ಮಹಿಳೆಯರು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಮೆಕ್ಸಿಕೋ
ಮಹಿಳೆಯರ ವಿರುದ್ಧದ ಹಿಂಸಾಚಾರದಲ್ಲಿ ಗಮನಾರ್ಹ ಮತ್ತು ಕಳವಳಕಾರಿ ಸಮಸ್ಯೆಯನ್ನು ಮೆಕ್ಸಿಕೋ ಎದುರಿಸುತ್ತಿದೆ. ಇಲ್ಲಿ ಮಹಿಳೆಯರು ಸುರಕ್ಷತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಮಾದಕವಸ್ತು ಸಂಬಂಧಿತ ಅಪರಾಧಗಳ ಹೆಚ್ಚಳವು ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಅಪಾಯಕಾರಿಯಾಗಿದೆ ಮಹಿಳಾ ಪ್ರಯಾಣಿಕರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಮಯದಲ್ಲೂ ಹೆಚ್ಚು ಜಾಗರೂಕರಾಗಿರಬೇಕು ಎಂದು ಸಮೀಕ್ಷೆಯು ಸಲಹೆ ನೀಡಿದೆ.

ಇರಾನ್
ಇರಾನ್‌ನಲ್ಲಿ ಮಹಿಳೆಯರನ್ನು ನಿಯಂತ್ರಿಸುವ ಕಟ್ಟುನಿಟ್ಟಾದ ಕಾನೂನುಗಳು ಮತ್ತು ಸಾಮಾಜಿಕ ಅನಿಷ್ಠ ರೂಢಿಗಳು ಜಾರಿಯಲ್ಲಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಉಡುಗೆ, ಏಕಾಂಗಿ ಪ್ರಯಾಣ ಸೇರಿದಂತೆ ಹಲವಾರು ವಿಚಾರಗಳಲ್ಲಿ ನಿರ್ಬಂಧಗಳಿವೆ. ಇದು, ಸ್ತ್ರೀ ಸ್ವಾತಂತ್ರ್ಯವನ್ನು ಗಮನಾರ್ಹವಾಗಿ ಸೀಮಿತಗೊಳಿಸಿದೆ. ಮಹಿಳೆಯರ ಮೇಲಿನ ಕಿರುಕುಳ, ಹಲ್ಲೆ, ದೌರ್ಜನ್ಯಗಳ ಸಂದರ್ಭಗಳಲ್ಲಿ ಕಾನೂನುಗಳು ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿಲ್ಲ. ಇದು ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ಸವಾಲನ್ನು ಉಂಟುಮಾಡುತ್ತದೆ.

ಡೊಮಿನಿಕನ್ ಗಣರಾಜ್ಯ
ಡೊಮಿನಿಕನ್ ಗಣರಾಜ್ಯವು ತನ್ನ ಜನಪ್ರಿಯತೆಯ ಹೊರತಾಗಿಯೂ, ಕಳ್ಳತನ ಮತ್ತು ಲೈಂಗಿಕ ಕಿರುಕುಳದಂತಹ ಅಪರಾಧಗಳಿಂದಲೂ ಕುಖ್ಯಾತಿ ಪಡೆದಿದೆ. ಇದು ಮಹಿಳಾ ಪ್ರವಾಸಿಗರಿಗೆ ಗಮನಾರ್ಹ ಕಳವಳಕಾರಿ ರಾಷ್ಟ್ರವಾಗಿದೆ. ಪ್ರವಾಸಿಗರು ಹೆಚ್ಚಿರುವ ಪ್ರದೇಶಗಳಲ್ಲೂ ಮಹಿಳೆಯರ ಮೇಲೆ ಹಿಂಸಾಚಾರಗಳು ನಡೆಯುತ್ತವೆ. ಆದ್ದರಿಂದ, ಮಹಿಳಾ ಪ್ರಯಾಣಿಕರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ.

ಈಜಿಪ್ಟ್
ಈಜಿಪ್ಟ್‌ನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗಾಗ್ಗೆ ಕಿರುಕುಳಗಳು ನಡೆಯುತ್ತಲೇ ಇರುತ್ತವೆ. ಹಾಲಿ ರಾಜಕೀಯ ಅಶಾಂತಿಯು ಮಹಿಳೆಯರಿಗೆ ಸುರಕ್ಷತಾ ಅಪಾಯಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಥಳೀಯ ಕಾನೂನುಗಳು ಮತ್ತು ಚಾಲ್ತಿಯಲ್ಲಿರುವ ಸಾಮಾಜಿಕ ರೂಢಿಗಳು ಕೆಲವೊಮ್ಮೆ ಮಹಿಳೆಯರನ್ನು ಹೆಚ್ಚಾಗಿ ನಿಯಂತ್ರಿಸಲು ಯತ್ನಿಸುತ್ತವೆ.

ಮೊರಾಕೊ
ಮೊರಾಕೊ ದೇಶವು ಲೈಂಗಿಕ ಹಿಂಸೆ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಅಲ್ಲಿನ 50% ಮಹಿಳೆಯರು ತಾವು ಲೈಂಗಿಕ ದೌರ್ಜನ್ಯ, ಕಿರುಕುಳವನ್ನು ಎದುರಿಸಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ. ದುರದೃಷ್ಟವಶಾತ್ ಅಂತಹ ದೌರ್ಜನ್ಯಗಳನ್ನು ಸಹಿಸಿಕೊಳ್ಳುವ ಅಥವಾ ಕ್ಷಮಿಸುವಂತಹ ಕೆಲವು ಸಾಂಸ್ಕೃತಿಕ ನಂಬಿಕೆಗಳು ಈ ಸಮಸ್ಯೆಯನ್ನು ಉಲ್ಬಣಗೊಳಿಸಿವೆ.

ಭಾರತ
ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿಯು ಗಮನಾರ್ಹವಾಗಿ ಹೆಚ್ಚಿದೆ. ಆದರೂ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ಮಾತ್ರವಲ್ಲ, ಹೆಚ್ಚಿನ ಘಟನೆಗಳು ಗೌರವ, ಮರ್ಯಾದೆಗೆ ಅಂಜಿ ವರದಿಯಾಗದೆ, ಬೆಳಕಿಗೆ ಬಾರದಂತಾಗುತ್ತಿವೆ. ದಾಖಲಾದ ಪ್ರಕರಣಗಳಲ್ಲೂ ಶಿಕ್ಷೆಯ ಪ್ರಮಾಣ ತೀರಾ ಕಡಿಮೆಯಿದೆ. ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಅಪಾಯಗಳು ಇನ್ನೂ ಗಣನೀಯವಾಗಿವೆ ಎಂಬುದನ್ನು ಸಮೀಕ್ಷೆ ಎತ್ತಿ ತೋರಿಸಿದೆ.

ಥೈಲ್ಯಾಂಡ್
ಸಾಮಾನ್ಯವಾಗಿ ಪ್ರವಾಸಿ ಸ್ನೇಹಿ ರಾಷ್ಟ್ರವೆಂದು ಪರಿಗಣಿಸಲಾಗಿರುವ ಥೈಲ್ಯಾಂಡ್‌ನಲ್ಲಿ ಮಹಿಳೆಯರು ಕಳ್ಳಸಾಗಣೆ ಮತ್ತು ಶೋಷಣೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಕಾಂಗಿ ಮಹಿಳಾ ಪ್ರಯಾಣಿಕರು, ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವವರು ಅಸುರಕ್ಷತೆಯನ್ನು ಎದುರಿಸುವುದು ಗಂಭೀರ ಸಮಸ್ಯೆಯಾಗಿದೆ. ಮಹಿಳೆಯರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ರಾತ್ರಿಯಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಆದಾಗ್ಯೂ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ಇಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X