ಮೇ ತಿಂಗಳಲ್ಲಿ ಪಾಕಿಸ್ತಾನದೊಂದಿಗಿನ ಘರ್ಷಣೆಯಲ್ಲಿ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದಾಗಿ ಭಾರತೀಯ ಸೇನೆ ಮೊದಲ ಬಾರಿಗೆ ದೃಢಪಡಿಸಿದೆ. ಆದರೆ ನಾಲ್ಕು ದಿನಗಳ ಸಂಘರ್ಷ ಪರಮಾಣು ಯುದ್ಧದ ಹಂತಕ್ಕೆ ಬಂದಿರಲಿಲ್ಲ ಎಂದೂ ಹೇಳಿದೆ.
ಈ ಬಗ್ಗೆ ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, “ಜೆಟ್ ಪತನಗೊಂಡಿದೆಯೇ ಎಂಬುದಕ್ಕಿಂತ ಜೆಟ್‌ಗಳನ್ನು ಏಕೆ ಪತನಗೊಳಿಸಲಾಗಿದೆ ಎಂಬುದು ಮುಖ್ಯ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಸಂಘರ್ಷ | ರಾಂಚಿಯಲ್ಲಿ ನಕಲಿ ಸೇನಾ ಸಮವಸ್ತ್ರಗಳು ಪತ್ತೆ
ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಈ ಹೇಳಿಕೆ ‘ಸಂಪೂರ್ಣವಾಗಿ ತಪ್ಪು’ ಎಂದೂ ಉನ್ನತ ರಕ್ಷಣಾ ಅಧಿಕಾರಿ ಅನಿಲ್ ಚೌಹಾಣ್ ಹೇಳಿದ್ದಾರೆ. ಆದರೆ ಭಾರತ ಎಷ್ಟು ಜೆಟ್‌ಗಳನ್ನು ಕಳೆದುಕೊಂಡಿದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಲು ನಿರಾಕರಿಸಿದರು. “ಯಾವ ತಪ್ಪಿನಿಂದಾಗಿ ಜೆಟ್ ವಿಮಾನ ಪತನಗೊಂಡಿತು ಎಂಬುದು ಮುಖ್ಯವೇ ಹೊರತು, ಎಷ್ಟು ಪತನವಾಗಿದೆ ಎಂಬುದಲ್ಲ” ಎಂದು ಹೇಳಿದ್ದಾರೆ.
“ನಾವು ಮಾಡಿದ ಯುದ್ಧತಂತ್ರದ ತಪ್ಪನ್ನು ಅರ್ಥಮಾಡಿಕೊಳ್ಳಲು, ಅದನ್ನು ಸರಿಪಡಿಸಲು, ಎರಡು ದಿನಗಳ ನಂತರ ಅದನ್ನು ಮತ್ತೆ ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗುತ್ತಿರುವುದು ಒಳ್ಳೆಯ ವಿಚಾರ. ಎಲ್ಲಾ ಜೆಟ್‌ಗಳನ್ನು ಮತ್ತೆ ಹಾರಿಸಲು ಸಾಧ್ಯವಾಗುತ್ತದೆ” ಎಂದು ಜನರಲ್ ಚೌಹಾಣ್ ಹೇಳಿದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕಾ ದಾಳಿ ನಡೆಸಿ 26 ಮಂದಿಯನ್ನು ಕೊಂದಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕಾ ನೆಲೆಗಳ ಮೇಲೆ ದಾಳಿ ನಡೆಸಿ 100ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ.
ಇದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಹೆಚ್ಚಾಗಿದೆ. ದಾಳಿ, ಪ್ರತಿದಾಳಿ ಹೆಚ್ಚಾಗುತ್ತಿದ್ದಂತೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ.
