ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೇನಾ ನೆಲೆ ಮೇಲೆ ಆತ್ಮಹತ್ಯಾ ದಾಳಿ ಮತ್ತು ಪಂಜಾಬ್‌ನ ಜಲಂಧರ್‌ನಲ್ಲಿ ಡ್ರೋನ್ ದಾಳಿ ನಡೆದಿವೆ ಎಂಬ ವಿಚಾರವಾಗಿ ಹಲವಾರು ಪೋಸ್ಟ್‌ಗಳು, ವಿಡಿಯೋಗಳು, ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆದರೆ, ಈ ಎಲ್ಲವನ್ನೂ ಭಾರತ ಸರ್ಕಾರ ಅಲ್ಲಗಳೆದಿದ್ದು, ಅವೆಲ್ಲವೂ ಸುಳ್ಳು ಸುದ್ದಿ ಮತ್ತು ವದಂತಿಗಳು ಎಂದು ಸ್ಪಷ್ಟನೆ ನೀಡಿದೆ.
ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕ್ ಯೂನಿಟ್, ಜಮ್ಮು ಮತ್ತು ಕಾಶ್ಮೀರದ ಯಾವುದೇ ಸೇನಾ ನೆಲೆಗಳಲ್ಲಿ ಯಾವುದೇ ‘ಫಿದಾಯೀನ್’ ಅಥವಾ ಆತ್ಮಹತ್ಯಾ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಜಲಂಧರ್‌ನಲ್ಲಿ ಡ್ರೋನ್ ದಾಳಿ ನಡೆದಿದೆ ಎಂಬ ಹೇಳಿಕೆಯ ಜೊತೆಗೆ ಬೆಂಕಿ ಉರಿಯುತ್ತಿರುವ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಅದು ದಾಳಿಯ ವಿಡಿಯೋ ಅಲ್ಲ. ಬದಲಾಗಿ, ಕೃಷಿ ಭೂಮಿಯಲ್ಲಿ ಕೃಷಿ ತ್ಯಾಜ್ಯವನ್ನು ಸುಡಲಾಗಿರುವ ಹಳೆಯ ವಿಡಿಯೋ ಎಂದು ಜಲಂಧರ್ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ವೈರಲ್ ಆಗುತ್ತಿರುವ ಪೋಸ್ಟ್ ನಕಲಿ ಎಂದು ಹೇಳಿದ್ದಾರೆ.
Drone Attack in Jalandhar⁉️
— PIB Fact Check (@PIBFactCheck) May 8, 2025
This drone strike video from #Jalandhar is widely circulating on social media#PIBFactCheck
* This is an unrelated video of a farm fire. The video has the time 7:39 PM, while the drone attack began later.
* Do not share this video. See the… pic.twitter.com/IRBjq2KOTQ
ಈ ಎರಡು ಪೋಸ್ಟ್‌ಗಳು ಮಾತ್ರವಲ್ಲದೆ, ಕಳೆದ ಎರಡು ದಿನಗಳಲ್ಲಿ ವೈರಲ್ ಆದ ಸುಮಾರು 7 ವಿಡಿಯೋಗಳ ಸತ್ಯಾಸತ್ಯತೆಯನ್ನು ಪಿಐಬಿ ಪರಿಶೀಲನೆ ಮಾಡಿದೆ. ಇವುಗಳಲ್ಲಿ ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಯ ದೃಶ್ಯಾವಳಿ ಎಂದು 2020ರ ಬೈರುತ್ ಸ್ಫೋಟದ ವಿಡಿಯೋವನ್ನು ಹಂಚಿಕೊಳ್ಳಲಾಗಿರುವುದನ್ನು ಪಿಐಬಿ ಕಂಡುಹಿಡಿದೆ.
ಈ ವರದಿ ಓದಿದ್ದೀರಾ?: ಪ್ರಬುದ್ಧತೆ ತೋರುತ್ತಿರುವ ಸರ್ಕಾರ – ಯುದ್ಧ ಬಯಸುತ್ತಿರುವ ಭಕ್ತರು ಮತ್ತು ಮಾಧ್ಯಮಗಳು
ಮತ್ತೊಂದು ನಕಲಿ ವಿಡಿಯೋವನ್ನು ಪಾಕಿಸ್ತಾನ ಪಡೆಗಳು ಭಾರತೀಯ ಸೇನಾ ನೆಲೆಯನ್ನು ನಾಶಪಡಿಸಿವೆ ಎಂಬ ಹೇಳಿಕೆಯ ಜೊತೆಗೆ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಉಲ್ಲೇಖಿಸಿರುವಂತೆ ’20 ರಾಜ್ ಬೆಟಾಲಿಯನ್’ ಎಂಬ ಯಾವುದೇ ಘಟಕವು ಭಾರತೀಯ ಸೇನೆಯಲ್ಲಿ ಇಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.
ಗುಜರಾತ್‌ನ ಹಜೀರಾ ಬಂದರಿನ ಮೇಲಿನ ದಾಳಿ ಎಂದು ಹೇಳಿಕೊಂಡು 2021ರಲ್ಲಿ ತೈಲ ಟ್ಯಾಂಕರ್ ಸ್ಫೋಟದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ, ಭಾರತೀಯ ಸೇನೆಯು ತನ್ನ ಅಂಬಾಲಾ ವಾಯುನೆಲೆಯಿಂದ ಪಾಕ್ ಮೇಲೆ ದಾಳಿಗಳನ್ನು ನಡೆಸಿದೆ ಎಂದು ನಕಲಿ ವಿಡಿಯೋವನ್ನು ಹರಿಬಿಡಲಾಗಿದೆ. ಆ ವಿಡಿಯೋ ನಕಲಿ ಎಂದು ರಕ್ಷಣಾ ಸಚಿವಾಲಯವೇ ಸ್ಪಷ್ಟಪಡಿಸಿದೆ.