ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ದೆಹಲಿಯಲ್ಲಿರುವ ನಿಗಮ್ ಬೋಧ ಘಾಟ್‌ನಲ್ಲಿ ಬೆಳಗ್ಗೆ 11:45 ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ ಗೃಹ ಇಲಾಖೆಯು ರಕ್ಷಣಾ ಇಲಾಖೆಗೆ ಪತ್ರ ಬರೆದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದೆ.
ಸದ್ಯ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ದೆಹಲಿಯಲ್ಲಿರುವ ಎಐಸಿಸಿ ಕಚೇರಿಗೆ ತರಲಾಗಿದ್ದು 8:30 ರಿಂದ 9:30 ರ ವರೆಗೂ ಸಾರ್ವಜನಿಕರು ಮತ್ತು ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 9:30 ಬಳಿಕ ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ.
ಪ್ರತ್ಯೇಕ ಸ್ಮಾರಕಕ್ಕೆ ಅವಕಾಶ
ತಡರಾತ್ರಿಯಲ್ಲಿ ನಡೆದ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳ ನೀಡಲು ಕೇಂದ್ರವು ಒಪ್ಪಿಗೆ ನೀಡಿದೆ. ಡಿ.27ರ ತಡರಾತ್ರಿಯಲ್ಲಿ ಪ್ರತ್ಯೇಕ ಸ್ಮಾರಕ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆಯನ್ನು ಪ್ರತ್ಯೇಕ ಸ್ಮಾರಕ ಸ್ಥಳದಲ್ಲಿ ನಡೆಸಬೇಕೆಂಬ ಕಾಂಗ್ರೆಸ್‌ನ ಮನವಿಯನ್ನು ಕೇಂದ್ರವು ಆರಂಭದಲ್ಲಿ ನಿರಾಕರಿಸಿತು. ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಭಾರತದ ಮೊದಲ ಸಿಖ್ ಪ್ರಧಾನಿಗೆ ಉದ್ದೇಶಪೂರ್ವಕ ಅವಮಾನ” ಎಂದು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿಸಿಟಿವಿ ಅಳವಡಿಸಿ, ಸೆಕ್ಯುರಿಟಿ ನೇಮಿಸಿದರಷ್ಟೇ ಮಹಿಳಾ ಸುರಕ್ಷತೆ ಸಾಧ್ಯವೇ?
ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅತಿ ಗಣ್ಯರಿಗೆ ಮೀಸಲಾದ ಸ್ಥಳದಲ್ಲಿ ಗೌರವ ಸಂಪ್ರದಾಯಗಳೊಂದಿಗೆ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಡೆಸುವಂತೆ ಮನವಿ ಮಾಡಿದರು.
ಈ ಬೆಳವಣಿಗೆ ನಂತರ ತಡರಾತ್ರಿಯಲ್ಲಿ ಕೇಂದ್ರ ಗೃಹ ಸಚಿವಾಲಯವು, ಕಾಂಗ್ರೆಸ್ ಮುಖ್ಯಸ್ಥರಿಂದ ಸಿಂಗ್ ಅವರ ಸ್ಮಾರಕಕ್ಕಾಗಿ ಜಾಗವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತು.
