“ದೇಶದಲ್ಲಿ ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ (ಜೂನ್‌ನಿಂದ ಸೆಪ್ಟೆಂಬರ್) ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಸರಾಸರಿ 87 ಸೆಂ.ಮೀ.ನಷ್ಟು ಮಳೆಯಾಗುವ ಅಂದಾಜಿಸಿದೆ” ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಹಾಗೆಯೇ ಈ ಬಾರಿ ಎಲ್ ನಿನೊ ಪ್ರಭಾವವಿರುವ ಸಾಧ್ಯತೆಯನ್ನು ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಅವರು ತಳ್ಳಿಹಾಕಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಮುಂದಿನ 5 ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ: ಹವಾಮಾನ ಇಲಾಖೆ
ಭಾರತದ ಕೃಷಿ ವಲಯಕ್ಕೆ ಮಾನ್ಸೂನ್ ನಿರ್ಣಾಯಕವಾಗಿದೆ. ದೇಶದ ಜನರ ಶೇಕಡ 42.3ರಷ್ಟು ಜನರ ಜೀವನೋಪಾಯವು ಮಾನ್ಸೂನ್ ಮೇಲೆ ಅವಲಂಭಿಸಿದೆ. ದೇಶದ ಜಿಡಿಪಿಗೆ ಶೇಕಡ 18.2ರಷ್ಟು ಕೊಡುಗೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಕೃಷಿ ಪ್ರದೇಶದ ಮೇಲೆ ಮಾನ್ಸೂನ್ ಪ್ರಭಾವ ಬೀರುತ್ತದೆ. ದೇಶಾದ್ಯಂತ ವಿದ್ಯುತ್ ಉತ್ಪಾದನೆಯ ಜೊತೆಗೆ ಕುಡಿಯುವ ನೀರಿಗೆ ನಿರ್ಣಾಯಕವಾಗಿರುವ ಜಲಾಶಯಗಳ ಮರುಪೂರಣಕ್ಕೂ ಮಾನ್ಸೂನ್ ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.
ಭಾರೀ ಮಳೆಯ ಘಟನೆಗಳು (ಅಲ್ಪ ಅವಧಿಯಲ್ಲಿ ಹೆಚ್ಚಿನ ಮಳೆ) ಹೆಚ್ಚುತ್ತಿರುವಾಗ ಮಳೆಗಾಲದ ದಿನಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದಾಗಿ ಆಗಾಗ್ಗೆ ಬರ ಮತ್ತು ಪ್ರವಾಹಕ್ಕೆ ಕಾರಣವಾಗುತ್ತದೆ.
ಭಾರತದಲ್ಲಿ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳದ ದಕ್ಷಿಣದಲ್ಲಿ ಆರಂಭವಾಗುತ್ತದೆ. ಸೆಪ್ಟೆಂಬರ್ ಮಧ್ಯದಲ್ಲಿ ಅಂತ್ಯವಾಗುತ್ತದೆ.
ಇದನ್ನು ಓದಿದ್ದೀರಾ? ಮಾನ್ಸೂನ್ ಸಾಮಾನ್ಯ, ಕರಾವಳಿ ಕರ್ನಾಟಕದಲ್ಲಿ ಅಧಿಕ ಮಳೆ: ಖಾಸಗಿ ಹವಾಮಾನ ಸಂಸ್ಥೆ ಮುನ್ಸೂಚನೆ
ಇನ್ನು 2025ರಲ್ಲಿ ದೇಶದಲ್ಲಿ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಜೂನ್-ಸೆಪ್ಟೆಂಬರ್ ಅವಧಿಯಲ್ಲಿ 868.6 ಮಿಮೀ ಸರಾಸರಿ ಮಳೆಯಾಗುವ ನಿರೀಕ್ಷೆಯಿದೆ ಎಂದಿದೆ.
ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕೇರಳ, ಕರಾವಳಿ ಕರ್ನಾಟಕ ಮತ್ತು ಗೋವಾ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚುವರಿ ಮಳೆಯಾಗುವ ಸಾಧ್ಯತೆಯಿದೆ. ಇದು ಅನುಕೂಲಕರ ಮಳೆ ಎಂದು ಸ್ಕೈಮೆಟ್ ಮುನ್ಸೂಚನೆ ನೀಡಿದೆ.
