ಭಾರತದಲ್ಲಿನ ಮಧ್ಯಮವರ್ಗದ ಜನರು ಹೊಂದಿರುವ ಸ್ವಂತ ಸೂರು ಕಟ್ಟಿಕೊಳ್ಳಬೇಕೆಂಬ ಕನಸನ್ನು ಸಾಕಾರಗೊಳಿಸಲು ಸರ್ಕಾರ ಬದ್ದವಾಗಿದೆ. ದೇಶದಲ್ಲಿ ಮೆಟ್ರೋ ಜಾಲವು 1,000 ಕಿ.ಮೀ.ಗಳನ್ನು ದಾಟಿದೆ. ಶೀಘ್ರದಲ್ಲಿ ಭಾರತವು ವಿಶ್ವದ 3ನೇ ದೊಡ್ಡ ಆರ್ಥಿಕತೆಯನ್ನು ಹೊಂದಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಹೇಳಿದರು.
ಸಂಸತ್ತಿನಲ್ಲಿ ಆರಂಭವಾಗಿರುವ ಕೇಂದ್ರ ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಮುರ್ಮು ಮಾತನಾಡಿದರು. “ದೇಶದ ವಾಯುಯಾನ ವಲಯವು ಪ್ರಗತಿ ಸಾಧಿಸುತ್ತಿದೆ. ವಿಮಾನಯಾನ ಸೇವೆ ಒದಗಿಸುವ ಕಂಪನಿಗಳು ಸುಮಾರು 1,700 ಹೊಸ ವಿಮಾನಗಳ ಖರೀದಿಗೆ ಮುಂದಾಗಿವೆ. ರೈಲ್ವೇ ಜಾಲವೂ ವಿಸ್ತರಿಸುತ್ತಿದೆ” ಎಂದರು.
“ಭಾರತದಲ್ಲಿರುವ 70 ವರ್ಷ ಮೇಲ್ಪಟ್ಟ ಆರು ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವಿಮೆ ನೀಡಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಒತ್ತುಕೊಡಲಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಯಡಿ 91 ಲಕ್ಷ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ” ಎಂದು ತಿಳಿಸಿದರು.
“ಹೊಸ ಶಿಕ್ಷಣ ನೀತಿಯಿಂದಾಗಿ ಯುವ ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರನ್ನು ಆರ್ಥಿಕ ವ್ಯವಸ್ಥೆಯೊಳಗೆ ತರುವ ಕೆಲಸಗಳು ವೇಗವಾಗಿ ನಡೆದಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಾನಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ” ಎಂದರು.
“ವಕ್ಫ್ ಆಸ್ತಿ, ಒಂದು ದೇಶ – ಒಂದು ಚುನಾವಣೆ ವಿಷಯಗಳಲ್ಲಿ ಸರ್ಕಾರವು ದೃಢ ನಿರ್ಧಾರ ತೆಗೆದುಕೊಂಡಿದೆ. ವಿಶೇಷ ಸ್ಥಾನಮಾನ ರದ್ದತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ದಿಗೆ ಹೆಚ್ಚು ಒತ್ತುಕೊಡಲಾಗಿದೆ” ಎಂದು ವಿವರಿಸಿದರು.