- ಭಾರತೀಯ ಸೇನೆಯಲ್ಲಿ ಧ್ರುವ ಹೆಲಿಕಾಪ್ಟರ್ ಸೇವೆ
- ಸೇನಾ ಹೆಲಿಕಾಪ್ಟರ್ ಪತನದ ನಂತರ ಸೇನೆ ಕ್ರಮ
ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಧ್ರುವ ಸರಣಿಯ ಹಾರಾಟವನ್ನು ಸ್ಥಗಿತಗೊಳಿಸಲು ಸೇನೆ ನಿರ್ಧರಿಸಿದೆ.
ಭಾರತೀಯ ಸೇನೆಯು ತನ್ನ ಸ್ವದೇಶಿ ನಿರ್ಮಿತ ಧ್ರುವ ಹೆಲಿಕಾಪ್ಟರ್ ಕಾರ್ಯಾಚರಣೆ ನಿಲ್ಲಿಸಿದೆ ಎಂದು ಶನಿವಾರ (ಮೇ 6) ಮಾಧ್ಯಮಗಳು ವರದಿ ಮಾಡಿವೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಬಳಿ ಸೇನಾ ಹೆಲಿಕಾಪ್ಟರ್‌ವೊಂದು ಪತನವಾದ ಎರಡು ದಿನಗಳ ನಂತರ ಎಎಲ್‌ಎಚ್ ಧ್ರುವ ಕಾರ್ಯಾಚರಣೆ ನಿಲ್ಲಿಸಲು ಸೇನೆ ತೀರ್ಮಾನ ಕೈಗೊಂಡಿದೆ ಎಂದು ವರದಿಯಾಗಿದೆ.
ಸೇನಾ ಹೆಲಿಕಾಪ್ಟರ್ ಪತನಗೊಂಡು ಒಬ್ಬ ತಾಂತ್ರಿಕ ಸಿಬ್ಬಂದಿ ಮೃತಪಟ್ಟು, ಇಬ್ಬರು ಪೈಲಟ್ ಗಾಯಗೊಂಡಿದ್ದರು.
ಮಾರ್ಚ್‌ನಲ್ಲಿ ಹೆಲಿಕಾಪ್ಟರ್ ಅಪಘಾತದ ಎರಡು ಘಟನೆಗಳ ನಂತರ ನೌಕಾದಳ ಮತ್ತು ಕರಾವಳಿ ಕಾವಲು ಪಡೆ ಇತ್ತೀಚೆಗೆ ಒಂದು ತಿಂಗಳಿಗೂ ಹೆಚ್ಚು ಅವಧಿಯವರೆಗೆ ಹೆಲಿಕಾಪ್ಟರ್ ಹಾರಾಟ ಸ್ಥಗಿತಗೊಳಿಸಿದ್ದವು.
ಆದರೆ ಕಾರ್ಯಾಚರಣೆಯ ಅಗತ್ಯದ ದೃಷ್ಟಿಯಿಂದ ಸೇನೆಯು ಕೆಲವು ಹೆಲಿಕಾಪ್ಟರ್‌ಗಳನ್ನು ಸಕ್ರಿಯಗೊಳಿಸಿತ್ತು.
ಧ್ರುವ ಹೆಲಿಕಾಪ್ಟರ್ ತನ್ನ ಕಾರ್ಯಾಚರಣೆಯನ್ನು ನೌಕಾದಳ ಮತ್ತು ಕರಾವಳಿ ಕಾವಲು ಪಡೆಯಲ್ಲಿ ಮತ್ತೆ ಕಾರ್ಯನಿರ್ವಹಿಸಲಿದೆಯೇ ಎಂಬುದನ್ನು ಸೇನೆ ಸ್ಪಷ್ಟಪಡಿಸಿಲ್ಲ.
ಧ್ರುವ ಹೆಲಿಕಾಪ್ಟರ್ ತನ್ನ ಕಾರ್ಯಾಚರಣೆ ಮತ್ತೆ ಆರಂಭಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ (ಎಚ್‌ಎಎಲ್) ದೋಷರಹಿತ ಪ್ರಮಾಣಪತ್ರ ಪಡೆಯಬೇಕು.
ಧ್ರುವ ಹೆಲಿಕಾಪ್ಟರ್ ಅನ್ನು ಎಚ್‌ಎಎಲ್ ತಯಾರು ಮಾಡುತ್ತದೆ. ಎಎಲ್‌ಎಚ್ ಧ್ರುವ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿರುವುದು ಎರಡು ತಿಂಗಳಲ್ಲಿ ಇದು ಮೂರನೇ ಘಟನೆ.
ಭಾರತೀಯ ನೌಕಾಪಡೆಯ ಧ್ರುವ ಹೆಲಿಕಾಪ್ಟರ್ ಅನ್ನು ಅರಬ್ಬೀ ಸಮುದ್ರದಲ್ಲಿ ಪೂರ್ವ ಯೋಜಿತವಾಗಿ ಇಳಿಸಲಾಗಿತ್ತು.
ಕೊಚ್ಚಿಯಿಂದ ಹಾರಾಟ ಪ್ರಾರಂಭಿಸಿದ ನಂತರ ಕರಾವಳಿ ಕಾವಲು ಪಡೆಯ ಧ್ರುವ ಹೆಲಿಕಾಪ್ಟರ್ ಅನ್ನು ಕೆಲವು ಕ್ಷಣಗಳ ನಂತರ ಬಲವಂತದ ಭೂಸ್ಪರ್ಶ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಮಂದಿಯ ಹತ್ಯೆ
ಎಎಲ್‌ಎಚ್ ಧ್ರುವ, ಭಾರತೀಯ ಸಶಸ್ತ್ರ ಪಡೆಗಳಿಗೆ ಒಂದು ಬಹುಪಯೋಗಿ ಯುದ್ಧ ಹೆಲಿಕಾಪ್ಟರ್. ಇದು ಸಿಯಾಚಿನ್ ಮತ್ತು ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಹಾರುವ ಮೂಲಕ ಸೈನಿಕರಿಗೆ ನೆರವಾಗುತ್ತದೆ.
ಇತ್ತೀಚೆಗೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ ಎನ್ನಲಾಗಿದೆ.