ಭಾರತೀಯ ಯುದ್ಧನೌಕೆ ಅರಬ್ಬಿ ಸಮುದ್ರದಲ್ಲಿ ಎರಡನೇ ಯಶಸ್ವಿ ಕಡಲ್ಗಳ್ಳರ ವಿರೋಧಿ ಕಾರ್ಯಾಚರಣೆ ನಡೆಸಿ ಶಸ್ತ್ರಸಜ್ಜಿತ ಸೊಮಾಲಿ ಕಡಲ್ಗಳ್ಳರಿಂದ 19 ಪಾಕಿಸ್ತಾನ ಪ್ರಜೆಗಳನ್ನು ರಕ್ಷಿಸಿದೆ.
ಐಎನ್‌ಎಸ್ ಸುಮಿತ್ರ ನೌಕಾ ಪಡೆ ಪಾಕ್‌ನ ಮೀನುಗಾರಿಕಾ ಹಡಗನ್ನು ಅಪಹರಿಸಲು ಯತ್ನಿಸಿದ್ದ ಸೊಮಾಲಿ ಕಡಲ್ಗಳ್ಳರಿಂದ 19 ಪಾಕಿಸ್ತಾನ ಪ್ರಜೆಗಳನ್ನು ರಕ್ಷಿಸಿ 11 ಕಡಲ್ಗಳ್ಳರನ್ನು ಬಂಧಿಸಿದೆ.
ಇರಾನಿ ಧ್ವಜ ಹೊಂದಿದ್ದ ಮೀನುಗಾರಿಕಾ ಹಡಗಿನ ಮೂಲಕ ಸೊಮಾಲಿ ಕಡಲ್ಗಳ್ಳರು ಸೊಮಾಲಿಯಾ ಪೂರ್ವ ಕರಾವಳಿ ಹಾಗೂ ಏಡನ್ ಕೊಲ್ಲಿಯಲ್ಲಿ ಪಾಕ್‌ನ ಇಮಾನ್ ಹಡಗನ್ನು ಭಾನುವಾರ ರಾತ್ರಿ ಅಪಹರಿಸಲು ಯತ್ನಿಸಿದ್ದರು. ಭಾರತದ ಐಎನ್‌ಎಸ್ ಸುಮಿತ್ರ ನೌಕಾ ಪಡೆ ಕಡಲ್ಗಳ್ಳರ ದುಷ್ಕೃತ್ಯಕ್ಕೆ ತಡೆಯೊಡ್ಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
“ಇರಾನಿ ಧ್ವಜದಾರಿ ಹಡಗಿನಲ್ಲಿ ಆಗಮಿಸಿದ್ದ ಕಡಲ್ಗಳ್ಳರು ಪಾಕ್‌ನ ಎಂವಿ ಇಮಾನ್ ಹಡಗನ್ನು ಅಪಹರಿಸುವ ಯತ್ನವನ್ನು ಐಎನ್‌ಎಸ್ ಸುಮಿತ್ರ ತಡೆಯೊಡ್ಡಿದೆ. ಮತ್ತೊಂದು ಅಪಹರಣ ಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 24ರಂದು ಪಿಎಂ 29ರ ಎಫ್‌ವಿ ಹಡಗನ್ನು ಇದೇ ರೀತಿ ಅಪಹರಿಸಲು ಯತ್ನಿಸಿದಾಗ ಐಎನ್‌ಎಸ್ ಸುಮಿತ್ರ ಸಿಬ್ಬಂದಿ ಅಪಹರಣ ಯತ್ನವನ್ನು ತಡೆದು ಹಡಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದರು. ಜನವರಿ 5 ಹಾಗೂ ಕಳೆದ ವರ್ಷದ ಡಿಸೆಂಬರ್ 23 ರಂದು ಅರಬ್ಬಿ ಸಮುದ್ರ ಕರಾವಳಿಯಲ್ಲಿ ಇದೇ ರೀತಿ ಕಡಲ್ಗಳ್ಳರು ಅಪಹರಣಕ್ಕೆ ಯತ್ನಿಸಿದಾಗ ಭಾರತೀಯ ನೌಕಾಪಡೆ ತಡೆಯೊಡ್ಡಿತ್ತು.