ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಸಲ್ ಖೈಮಾದಲ್ಲಿ ಇತ್ತೀಚೆಗೆ ನಡೆದ ಲಘು ವಿಮಾನ ದುರಂತದಲ್ಲಿ ಪೈಲಟ್ ಹಾಗೂ ಭಾರತ ಮೂಲದ ವೈದ್ಯರೊಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.
ವೈಮಾನಿಕ ಕ್ಲಬ್ ನಲ್ಲಿ ತಾಣಗಳ ವೀಕ್ಷಣೆಗಾಗಿ ವಿಮಾನವನ್ನು ಬಾಡಿಗೆಗೆ ಪಡೆದಿದ್ದ ಡಾ ಸುಲೈಮಾನ್ ಅವರ ಕುಟುಂಬದವರ ಕಣ್ಣೆದುರೇ ಈ ದುರಂತ ಸಂಭವಿಸಿದೆ.
ಡಾ.ಸುಲೈಮಾನ್ ಅವರ ಕಿರಿಯ ಸಹೋದರ ಆ ಬಳಿಕ ವಿಮಾನಯಾನ ಕೈಗೊಳ್ಳುವವರಿದ್ದರು. 26 ವರ್ಷ ವಯಸ್ಸಿನ ಸುಲೈಮಾನ್ ಅಲ್ ಮಜೀದ್ ಯುಎಇಯಲ್ಲೇ ಹುಟ್ಟಿ ಬೆಳೆದವರು. ಕೋವ್ ರೊಟಾನಾ ಹೋಟೆಲ್ ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ದುರಂತ ಸಂಭವಿಸಿತು ಎಂದು ತಂದೆ ಮಜೀದ್ ಮುಕ್ರಮ್ ಹೇಳಿದ್ದಾರೆ.
ದುರಂತದಲ್ಲಿ 26 ವರ್ಷ ವಯಸ್ಸಿನ ಪಾಕಿಸ್ತಾನಿ ಮಹಿಳಾ ಪೈಲಟ್ ಕೂಡಾ ಅಸು ನೀಗಿದ್ದಾರೆ. ಈ ಅಪಘಾತವನ್ನು ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ ದೃಢಪಡಿಸಿದ್ದು, ದುರಂತಕ್ಕೆ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ ಎಂದು ಪ್ರಕಟಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ…
ದುರಂತಕ್ಕೀಡಾದ ವಿಮಾನ ಜಝೀರಾ ಏವಿಯೇಷನ್ ಕ್ಲಬ್ ಗೆ ಸೇರಿದ್ದು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.ಡಾ.ಸುಲೈಮಾನ್ ತಾಣಗಳ ವೀಕ್ಷಣೆಗಾಗಿ ಲಘುವಿಮಾನವನ್ನು ಬಾಡಿಗೆಗೆ ಪಡೆದಿದ್ದರು. ಏವಿಯೇಷನ್ ಕ್ಲಬ್ ನಲ್ಲಿ ಈ ವಿಶೇಷ ಅನುಭವವನ್ನು ವೀಕ್ಷಿಸಲು ತಂದೆ, ತಾಯಿ ಹಾಗೂ ತಮ್ಮ ಹಾಜರಿದ್ದರು.ಮುಂದಿನ ಬಾರಿ ವಿಮಾನ ಏರಲು ತಮ್ಮ ಸಜ್ಜಾಗಿದ್ದರು.
“ಲಘು ವಿಮಾನ ರೇಡಿಯೊ ಸಂಪರ್ಕ ಕಳೆದುಕೊಂಡಿದೆ ಎಂಬ ಮಾಹಿತಿ ಮೊದಲು ಲಭ್ಯವಾಯಿತು. ಬಳಿಕ ವಿಮಾನ ತುರ್ತುಭೂಸ್ಪರ್ಷ ಮಾಡಿದ್ದು, ವಿಮಾನದಲ್ಲಿದ್ದವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದರು.
ನಾವು ಆಸ್ಪತ್ರೆ ತಲುಪಿದಾಗ, ಇಬ್ಬರೂ ತೀವ್ರ ಗಾಯಗೊಂಡಿರುವುದಾಗಿ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ನಾವು ನೋಡುವ ಮುನ್ನವೇ ಸುಲೈಮಾನ್ ಕೊನೆಯುಸಿರೆಳೆದಿದ್ದ. ಸಂಜೆ 4.30ರ ವೇಳೆಗೆ ಆತ ಮೃತಪಟ್ಟಿದ್ದಾಗಿ ದಾಖಲಿಸಲಾಗಿದೆ” ಎಂದು ಮಜೀದ್ ಮುಕ್ರಂ ವಿವರಿಸಿದರು.
ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿದ್ದ ಪ್ರತಿಭಾವಂತ ಯುವ ವೈದ್ಯ ಸುಲೈಮಾನ್ ಕುಟುಂಬ ಇದೀಗ ದುಃಖತಪ್ತವಾಗಿದೆ.ತಮ್ಮ ಬಾಳಿಗೆ ಬೆಳಕಾಗಿದ್ದ ಸುಲೈಮಾನ್ ಇಲ್ಲದೇ ಭವಿಷ್ಯ ಕತ್ತಲಾಗಿದೆ ಎಂದು ಕುಟುಂಬದವರು ಶೋಕಿಸುತ್ತಿದ್ದಾರೆ.
