ಐವರು ಕೊರಿಯನ್ ಮಹಿಳೆಯರ ಮೇಲೆ ವಿಕೃತವಾಗಿ ಅತ್ಯಾಚಾರ ಎಸಗಿದ ಅಪರಾಧದಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವ್ಯಕ್ತಿಗೆ ಸುಮಾರು 40 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಆಸ್ಟ್ರೇಲಿಯಾದ ನ್ಯಾಯಾಲಯವು ವಿಧಿಸಿದೆ. ಈ ವ್ಯಕ್ತಿಯು ಬಿಜೆಪಿಯ ಒಡನಾಡಿ ಎಂದು ಹೇಳಲಾಗಿದೆ.
ಬಾಳೇಶ್ ಧಂಖರ್ ಎಂಬ ಭಾರತೀಯ ವ್ಯಕ್ತಿ ನಕಲಿ ಉದ್ಯೋಗ ಜಾಹೀರಾತು ಮೂಲಕ 20ರ ಆಸುಪಾಸಿನ ಯುವತಿಯರನ್ನು ಸಿಡ್ನಿಯಲ್ಲಿರುವ ತನ್ನ ಮನೆಗರ ಅಥವಾ ಸಮೀಪದ ಪ್ರದೇಶಕ್ಕೆ ಕರೆಸಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಅತ್ಯಾಚಾರ ಕೃತ್ಯವನ್ನು ಚಿತ್ರೀಕರಿಸಿ ಬಳಿಕ ಯುವತಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಸಾಮೂಹಿಕ ಅತ್ಯಾಚಾರ ಪ್ರಕರಣ; ಹರಿಯಾಣ ಬಿಜೆಪಿ ಅಧ್ಯಕ್ಷ ಬಡೋಲಿ ರಾಜೀನಾಮೆಗೆ ವಿಪಕ್ಷಗಳ ಆಗ್ರಹ
ಬಾಳೇಶ್ ಧಂಖರ್ ಬಿಜೆಪಿಯ ಅಧಿಕೃತ ಬೆಂಬಲ ಗುಂಪಾದ ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿಯ ಆಸ್ಟ್ರೇಲಿಯಾ ವಿಭಾಗದ ಸ್ಥಾಪಕನಾಗಿದ್ದಾನೆ. ಈತನ ವಿರುದ್ಧ 13 ಅತ್ಯಾಚಾರದ ಆರೋಪಗಳಿವೆ. ಅತ್ಯಾಚಾರ ಮಾತ್ರವಲ್ಲದೇ ಮಾದಕ ದ್ರವ್ಯ ನೀಡಿದ, ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಸೇರಿದಂತೆ ಧಂಖರ್ ವಿರುದ್ಧದ ಒಟ್ಟು 39 ಅಪರಾಧಗಳು ಸಾಬೀತಾಗಿದೆ. ಈ ಎಲ್ಲಾ ಅಪರಾಧಗಳಿಗೆ ಶಿಕ್ಷೆ ಘೋಷಿಸಲಾಗಿದೆ.
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮೈಕೆಲ್ ಕಿಂಗ್ ಅವರು ಧಂಖರ್ ಅಪರಾಧಗಳನ್ನು ತೀವ್ರವಾಗಿ ಖಂಡಿಸಿದರು. “ಎಲ್ಲಾ ಕೃತ್ಯಗಳು ಪೂರ್ವಯೋಜಿತ, ಪರಭಕ್ಷಕ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಬಿಜೆಪಿ ಮುಖಂಡ; ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಆರೋಪಿ
ಈ ನಡುವೆ ಧಂಖರ್ ತಾನು ಯುವತಿಯರಿಗೆ ಮಾದಕ ದ್ರವ್ಯ ನೀಡಿರುವುದನ್ನು ಅಥವಾ ಬ್ಲ್ಯಾಕ್‌ಮೇಲ್ ಮಾಡಿರುವುದನ್ನು ನಿರಾಕರಿಸಿದ್ದಾರೆ. ತಾನು ಒತ್ತಾಯಪೂರ್ವಕವಾಗಿ ಯಾರ ಮೇಲೆಯೂ ಅತ್ಯಾಚಾರ ಎಸಗಿಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ.
2006ರಲ್ಲಿ ಆಸ್ಟ್ರೇಲಿಯಾಕ್ಕೆ ವಿದ್ಯಾರ್ಥಿಯಾಗಿ ಆಗಮಿಸಿದ ಧಂಖರ್, ಭಾರತೀಯ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು. ಆಸ್ಟ್ರೇಲಿಯಾದ ಹಿಂದೂ ಮಂಡಳಿಯ ವಕ್ತಾರರಾಗಿ ಸೇವೆ ಸಲ್ಲಿಸಿದರು.
ಇನ್ನು ಧಂಖರ್ ಪೆರೋಲ್ ರಹಿತ ಅವಧಿ 2053ರ ಏಪ್ರಿಲ್‌ನಲ್ಲಿ ಮುಕ್ತಾಯವಾಗಲಿದೆ. ಪೂರ್ಣ ಶಿಕ್ಷೆ ಮುಗಿಯುವಾಗ ಅವರಿಗೆ 83 ವರ್ಷ ವಯಸ್ಸಾಗಿರುತ್ತದೆ.
