ಚಂದ್ರಯಾನ-2 ಉಪಗ್ರಹದ ರಾಡಾರ್ ಡೇಟಾವನ್ನು ಬಳಸಿಕೊಂಡು, ಅಹಮದಾಬಾದ್ನಲ್ಲಿರುವ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (PRL) ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದ ನಾಲ್ಕು “ದ್ವಿ-ಛಾಯಾ ಕುಳಿಗಳ” (doubly shadowed craters) ತಳಭಾಗದಲ್ಲಿ ಅಂತರ್ಜಲ ಹಿಮ (subsurface ice) ಇರುವ ಸಾಧ್ಯತೆಯನ್ನು ಪತ್ತೆಹಚ್ಚಿದ್ದಾರೆ. ಇದು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಇಸ್ರೋದ ಚಂದ್ರಯಾನ-2 ಆರ್ಬಿಟರ್ನಲ್ಲಿ ಅಳವಡಿಸಲಾಗಿರುವ ‘ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್’ (DFSAR) ಉಪಕರಣದ ಮೂಲಕ ಈ ನಿರ್ದಿಷ್ಟ ಅಂಶಗಳನ್ನು ಗುರುತಿಸಲಾಗಿದೆ. ಡಿಎಫ್ಎಸ್ಎಆರ್ (DFSAR) ಎಂದರೆ ಎಲ್ (L) ಮತ್ತು ಎಸ್ (S) ಬ್ಯಾಂಡ್ ಫ್ರೀಕ್ವೆನ್ಸಿಗಳಲ್ಲಿ ಕೆಲಸ ಮಾಡುವ ಮೈಕ್ರೋವೇವ್ ಇಮೇಜಿಂಗ್ ಉಪಕರಣ ಹಾಗೂ ಚಂದ್ರನನ್ನು ಅಧ್ಯಯನ ಮಾಡಲು ಬಳಸಿರುವ ಮೊದಲ ಸಂಪೂರ್ಣ-ಪೋಲಾರಿಮೆಟ್ರಿಕ್ (fully-polarimetric) ರಾಡಾರ್ ಆಗಿದೆ. ಈ ದ್ವಿ-ಛಾಯಾ ಕುಳಿಗಳು ಚಂದ್ರನ ಖಾಯಂ ಛಾಯಾ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಪ್ರದೇಶಗಳಿಗೆ ಸೂರ್ಯನ ಬೆಳಕು ಮತ್ತು ಉಷ್ಣತೆ ಬೀಳದಿರುವುದರಿಂದ, ಇಲ್ಲಿ ಅತ್ಯಂತ ಶೀತ ವಾತಾವರಣ (ಸುಮಾರು 25 ಕೆಲ್ವಿನ್) ಇರುತ್ತದೆ. ಇದು ದೀರ್ಘಕಾಲದವರೆಗೆ ನೀರಿನ ಹಿಮವನ್ನು ಸುರಕ್ಷಿತವಾಗಿ ಕಾಪಾಡಲು ಹೇಳಿಮಾಡಿದ ಸ್ಥಳವಾಗಿದೆ.
ನೇಚರ್ ಪೋರ್ಟ್ಫೋಲಿಯೋ ಜರ್ನಲ್ ‘njp ಸ್ಪೇಸ್ ಎಕ್ಸ್ಪ್ಲೋರೇಷನ್’ ನಲ್ಲಿ ಈ ಅಧ್ಯಯನ ವರದಿಯಾಗಿದೆ. ಈ ಅಧ್ಯಯನವು ಅಂತರ್ಜಲ ಹಿಮವನ್ನು ಕರಾರುವಕ್ಕಾಗಿ ಗುರುತಿಸಲು ರಾಡಾರ್-ಆಧಾರಿತ ಹೊಸ ಮಾಪನಗಳನ್ನು ಅಭಿವೃದ್ಧಿಪಡಿಸಿದೆ. ಇದು ‘ಸರ್ಕ್ಯುಲರ್ ಪೋಲರೈಸೇಶನ್ ರೇಶಿಯೋ’ (CPR) ಮತ್ತು ‘ಡಿಗ್ರಿ ಆಫ್ ಪೋಲರೈಸೇಶನ್’ (DOP) ಅಂಶಗಳನ್ನು ಜೊತೆಗೂಡಿಸಿ ವಿಶ್ಲೇಷಣೆ ನಡೆಸಿದ್ದು, ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶ ಹಾಗೂ ನಿಜವಾದ ಹಿಮದ ಸಿಗ್ನಲ್ ಗಳನ್ನು ನಿಖರವಾಗಿ ಪ್ರತ್ಯೇಕಿಸುತ್ತದೆ. ಸಿಪಿಆರ್ ಮೌಲ್ಯ 1 ಕ್ಕಿಂತ ಹೆಚ್ಚು (CPR > 1) ಮತ್ತು ಡಿಒಪಿ ಮೌಲ್ಯ 0.13 ಕ್ಕಿಂತ ಕಡಿಮೆ (DOP < 0.13) ಇದ್ದಲ್ಲಿ ಅದು ‘ವಾಲ್ಯೂಮೆಟ್ರಿಕ್ ಸ್ಕ್ಯಾಟರಿಂಗ್’ ಅನ್ನು ಸೂಚಿಸುತ್ತದೆ, ಇದು ಅಂತರ್ಜಲ ಹಿಮ ಇರುವುದರ ಪ್ರಬಲ ಸಾಕ್ಷಿಯಾಗಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ಅಧ್ಯಯನಕ್ಕೊಳಪಟ್ಟ ಕುಳಿಗಳಲ್ಲಿ, ಫೌಸ್ಟಿನಿ (Faustini) ಕುಳಿಯ ಒಳಗೆ ಇರುವ 1.1 ಕಿಲೋಮೀಟರ್ ಅಗಲದ ಕುಳಿಯು ಅಂತರ್ಜಲ ಹಿಮದ ಅತ್ಯಂತ ಪ್ರಬಲ ಸೂಚನೆಗಳನ್ನು ತೋರಿಸಿದೆ ಎಂದು ಪಿಆರ್ಎಲ್ ಸಂಶೋಧಕರು ತಿಳಿಸಿದ್ದಾರೆ. ರಾಡಾರ್ ಡೇಟಾ ಮತ್ತು ಕುಳಿಯ ವಿಶೇಷ ‘ಲೋಬೇಟ್-ರಿಮ್ ಮಾರ್ಫಾಲಜಿ’ (Lobate-rim morphology – ಪ್ರವಾಹದ ರೀತಿಯಲ್ಲಿರುವ ಭೌಗೋಳಿಕ ಆಕಾರ) ರೂಪವು ಈ ನಿರ್ಧಾರವನ್ನು ಪುಷ್ಟಿಗೊಳಿಸಿದೆ. ಉಲ್ಕಾಶಿಲೆಗಳು ಅಪ್ಪಳಿಸಿದ (impact) ಪರಿಣಾಮವಾಗಿ ಅಂತರ್ಜಲ ಹಿಮವನ್ನು ತಲುಪಿ ಈ ವಿಶೇಷ ಆಕಾರ ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ.
ಈ ಮಹತ್ವದ ಶೋಧಗಳು ಚಂದ್ರನ ಧ್ರುವ ಪ್ರದೇಶಗಳಲ್ಲಿ ಆವಿಯಾಗುವ ಅಂಶಗಳ (polar volatiles) ವಿತರಣೆಯ ಬಗ್ಗೆ ಹೊಸ ಮಾಹಿತಿಯನ್ನು ನೀಡುತ್ತವೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲಿನ ಅನ್ವೇಷಣೆ, ಹಿಮ ಇರುವ ಪ್ರದೇಶಗಳಲ್ಲಿ ರೋವರ್ ಲ್ಯಾಂಡಿಂಗ್ ಮಾಡುವುದು ಮತ್ತು ಭವಿಷ್ಯದಲ್ಲಿ ಚಂದ್ರನ ಮೇಲೆಯೇ ಸಂಪನ್ಮೂಲಗಳ ಬಳಕೆ ಮಾಡುವ ಮಹತ್ವಾಕಾಂಕ್ಷಿ ಚಟುವಟಿಕೆಗಳಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.




