ಲಂಡನ್‌ನಲ್ಲಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಬೂಕರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಕರ್ನಾಟಕದಲ್ಲಿ ಸಾಹಿತ್ಯ ವಲಯ ಮಾತ್ರವಲ್ಲ ಸಾಮಾನ್ಯ ಕನ್ನಡಿಗರೂ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣ ತುಂಬ ಬೂಕರ್ ಪ್ರಶಸ್ತಿ ಪುರಸ್ಕೃತರಿಗೆ ಅಭಿಮಾನದಿಂದ ಶುಭಾಶಯ ಕೋರಿದ್ದಾರೆ. ಕನ್ನಡದ ಹಲವು ಲೇಖಕಿಯರು ಈ ಬಗ್ಗೆ ʼಈದಿನʼದೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
2025ರ ಮೇ 21ರ ಮುಂಜಾನೆ ವಿಶ್ವ ಭೂಪಟದಲ್ಲಿ ಕನ್ನಡದ ಕಂಪು ಪಸರಿಸಿದ ದಿನ. ಕನ್ನಡ ಭಾಷೆಗೆ ಗರ್ವ ತುಂಬಿದ ದಿನ. ಕರ್ನಾಟಕದ ಹೆಮ್ಮೆಯ ಮಗಳು ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ 2025ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಘೋಷಿಸಲಾಯಿತು. ಈ ಮೂಲಕ ಬೂಕರ್ ಪ್ರಶಸ್ತಿ ಪಡೆದ ಮೊದಲ ಕೃತಿ ಎಂಬ ದಾಖಲೆ ಬಾನು ಅವರದಾಗಿದೆ. ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್ (ಅಂದಾಜು 57.28 ಲಕ್ಷ ರೂ.) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು. ಮೇ 21ರಂದು ಲಂಡನ್‌ನಲ್ಲಿ ಟೇಟ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಅಂತಿಮ ಸುತ್ತಿಗೆ ಆಯ್ಕೆಯಾದ ಆರು ಕೃತಿಗಳಲ್ಲಿ ಹಾರ್ಟ್ ಲ್ಯಾಂಪ್ ಕೂಡ ಇದ್ದ ಕಾರಣ ಲೇಖಕಿ ಮತ್ತು ಅನುವಾದಕಿ ಮುಂಚಿತವಾಗಿ ಲಂಡನ್‌ಗೆ ಪ್ರಯಾಣಿಸಿದ್ದರು. ಕನ್ನಡಿಗರು ಕುತೂಹಲದಿಂದ ಕಾಯುವಂತೆ ಮಾಡಿದ್ದರು.
ಬಾನು ಮುಷ್ತಾಕ್ ಅವರಿಗೆ ಸಂದ ಪ್ರಶಸ್ತಿಯನ್ನು ಕನ್ನಡಿಗರು ತಮಗೇ ಸಂದಿದೆ ಎಂದುಕೊಂಡು ಸಂಭ್ರಮಪಡುತ್ತಿದ್ದಾರೆ. ಬೆಳಕು ಹರಿಯುವ ಮುನ್ನವೇ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯ ಸಾಧಕರಲ್ಲಿ ಒಬ್ಬರೂ ಮಹಿಳೆ ಇಲ್ಲ ಎಂಬುದು ಬಹುದಿನದ ಕೊರಗು. ಅದನ್ನು ಮೀರಿ ಮಹಿಳೆಯೊಬ್ಬರು ಬರೆದ ಕೃತಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿರುವುದು ಮಹಿಳಾ ಸಾಹಿತ್ಯ ಎಂದು ಮೂಗು ಮುರಿಯುವವರಿಗೆ ಉತ್ತರವಾಗಿದೆ. ಪುರುಷಪ್ರಧಾನ ಸಮಾಜದಲ್ಲಿ ಸೃಜನಶೀಲ ಕೃತಿಗಳನ್ನೂ ಪುರುಷ ಕನ್ನಡಿಯಿಂದ ನೋಡಿ ವಿಮರ್ಶಿಸುವ ಪ್ರವೃತ್ತಿ ಹಿಂದಿನಿಂದಲೂ ಇದೆ. ಮಹಿಳಾ ಸಾಹಿತ್ಯವನ್ನು ಅಡುಗೆಮನೆ ಸಾಹಿತ್ಯ ಎಂದು ಶತಮಾನಗಳ ಕಾಲ ಹಳಿಯುತ್ತ ಬರಲಾಗಿತ್ತು. ಅಂತಹ ಅಡುಗೆ ಮನೆಯಿಂದ ಬೂಕರ್ ಪ್ರಶಸ್ತಿ ಪಡೆಯುವ ಕೃತಿ ತಯಾರಾಗಿದೆ. ಈ ಕುರಿತು ಕನ್ನಡದ ಹೆಸರಾಂತ ಲೇಖಕಿಯರು ಕಂ ಹೋರಾಟಗಾರ್ತಿಯರು ಈ ದಿನ.ಕಾಮ್ ಜೊತೆಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾರತದ ʼಬಾನುʼ ಬೆಳಗಿತು! ಕನ್ನಡದ ಹೃದಯ ʼದೀಪʼ ಬೆಳಗಿತು!
ಇಡೀ ಬಾನು-ಭುವಿ ಸಂಭ್ರಮಿಸುತ್ತಿರುವ ಕಥೆಗಾರ್ತಿ ಕವಿ ಬಾನು ಮುಷ್ತಾಕ್ ಅವರಿಗೆ ಸಂದಿರುವ ಈ ಅಂತಾರಾಷ್ಟ್ರೀಯ ಪ್ರಶಸ್ತಿ, ದ್ರಾವಿಡ ಭಾರತದ ಅದರಲ್ಲೂ ಕನ್ನಡದ ಸತ್ವಶಾಲಿ ಸಾಹಿತಿ ಬಳಗಕ್ಕೆ ಸಂದ ಗೌರವ ಎಂದು ಭಾವಿಸುತ್ತೇನೆ.
ಮಹಿಳಾ ಬರಹವನ್ನು, ಕಾಣುವ ಕನಸನ್ನು, ಆಡುವ ಮಾತನ್ನು ಜರಡಿಯಾಡಿ, ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ, ಹೀಗೆಳೆಯುವ, ಟ್ರೋಲ್ ಮಾಡುವ ಪರಮ ಪುರುಷಾಧಿಕಾರಕ್ಕೆ ಬಾನು ಉತ್ತರ ಕೊಟ್ಟಿದ್ದಾರೆ. ಪ್ರತಿಭೆ ಎಂಬುದು ಯಾವುದೇ ನೆಲದಿಂದ ಹುಟ್ಟಬಹುದು ಎಂಬ ಆಶಾಕಿರಣ ಮತ್ತು ಎಲ್ಲೋ ಕುಳಿತು ಅಕ್ಷರದ ಒಡನಾಟದಲ್ಲಿರುವವರ ಬರೆಯುವ ಆಕಾಂಕ್ಷೆಗೆ ಈ ಪ್ರಶಸ್ತಿ ಪುಟಕೊಡುವಂತಿದೆ.

ʼಕುವೆಂಪು ಅವರ ಕೃತಿಗಳು ಭಾಷಾಂತರವಾಗಿದ್ದರೆ ಅವರಿಗೆ ನೊಬೆಲ್ ದೊರಕುತ್ತಿತ್ತುʼ ಎಂದು ಅನೇಕ ಹಿರಿಯ ಸಾಹಿತಿಗಳು ಹೇಳುತ್ತಾರೆ. ದೀಪ ಭಾಸ್ತಿ ಆ ಕೆಲಸ ಮಾಡಿ ಕನ್ನಡಕ್ಕೆ ಬೂಕರ್ ಕಿರೀಟ ತೊಡಿಸಿದ್ದಾರೆ. ಇನ್ನು ಮುಂದೆ ಅನುವಾದದ ಜರೂರು ಮತ್ತು ಮಹತ್ವದ ಕುರಿತು ಇನ್ನು ಬಹಳ ಚರ್ಚೆಗಳಾಗಲಿವೆ. ಬಾನು ಮುಷ್ತಾಕ್ ಆಡಿರುವ ಮಾತುಗಳಲ್ಲಿನ “ಒಳಗೊಳ್ಳುವಿಕೆ ಮತ್ತು ವೈವಿಧ್ಯತೆ” ಯಾವುದೇ ಮನಸ್ಸಿನ ಅಂತಃಸತ್ವಗಳಾಗಬೇಕು ಎಂಬುದು ನಮ್ಮೆಲ್ಲರ ಆಶಯ.
ಜಗತ್ತಿನ ಯಾವ ಯಾವ ಮೂಲೆಗಳಲ್ಲಿ ಈ ರೀತಿಯ ಅನರ್ಘ್ಯ ರತ್ನಗಳು ಬೆಳಕಿಗೆ ಬಾರದೆ ಅಡಗಿಕೊಂಡಿವೆಯೋ!? ಮಹಿಳೆಯ ಮೃದು ವಾತ್ಸಲ್ಯದಲ್ಲಿ ಮಿನುಗುವ ಜೀವ ದ್ರವ್ಯವೇ ಇಡೀ ಜಗತ್ತನ್ನು ಪಾಲಿಸುತ್ತಿರುವುದು ಎಂಬುದು ಬಾನು ಮುಷ್ತಾಕ್ ಅವರ ನಂಬಿಕೆ. ನಮಗೆ ಅನಿಸಿದ್ದನ್ನು ಮುಕ್ತವಾಗಿ ಯಾವುದೇ ಹಿಂಜರಿಕೆಯಿಲ್ಲದೆ ವ್ಯಕ್ತಪಡಿಸುವ ವಾತಾವರಣವೊಂದು ಮಹಿಳೆಗೆ ಸಿಗಬೇಕು ಎಂಬುದೇ ಎಲ್ಲ ಲೇಖಕಿಯರ ಹೃದಯದ ಹಂಬಲ. ಅದನ್ನು ಬಾನು ಮುಷ್ತಾಕ್ ಮಾಡುತ್ತಲೇ ಬಂದಿದ್ದಾರೆ. ಅವರ ನುಡಿಗಳಲ್ಲೇ ಹೇಳುವುದಾದರೆ (ಈ ಸುದ್ದಿ ಕೇಳಿ) “ಆಕಾಶ ಭೂಮಿ ಮತ್ತು ಸಮಸ್ತವೂ ಗಲಗಲ ಅಂತ ಖುಷಿಯಿಂದ ಚಿಮ್ಮುತ್ತಿದ್ದವು”.
– ಆರತಿ ಎಚ್ ಎನ್, ಕವಯತ್ರಿ, ಚಂದನ ವಾಹಿನಿ ಕಾರ್ಯಕ್ರಮ ಮುಖ್ಯಸ್ಥೆ
ಬಾನು ಮುಷ್ತಾಕ್ ಅದ್ವಿತಿಯ ಸಾಧಕಿ
ಬಾನು ಮುಷ್ತಾಕ್- ಕನ್ನಡಿಗರೆಲ್ಲ ಹೆಮ್ಮೆ ಸಂಭ್ರವಿಸಬೇಕಾದ ಸಂದರ್ಭ. ಹಾಸನದವರಾಗಿ ನಾವೆಲ್ಲ ಖುಷಿ ಪಡ್ತಿದ್ದೇನೆ. ಲೇಖಕಿಯಾಗಿ ನಾನು ಇನ್ನಷ್ಟು ಸಂಭ್ರಮಿಸುತ್ತಿದ್ದೇನೆ. ಒಬ್ಬ ಹೆಣ್ಣುಮಗಳ ಕೃತಿ ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪಡೆಯುವ ಹಂತಕ್ಕೆ ತಲುಪಿದ್ದಕ್ಕಲ್ಲ, ಅಲ್ಲಿ ಗುರುತಿಸುವಿಕೆ ಸಾಧ್ಯವಾಗಿದೆಯಲ್ವಾ ಅದಕ್ಕೆ ಸಂತೋಷವಾಗುತ್ತಿದೆ. ನಮ್ಮ ಹೆಣ್ಣುಮಕ್ಕಳ ಬರಹಗಳ ಸತ್ವ ಅಳೆಯಲು ಅಂತಾರಾಷ್ಟ್ರೀಯ ಪ್ರಶಸ್ತಿಯೇ ಬೇಕಾಯ್ತಾ! ಅಂತ ಸಣ್ಣ ವಿಷಾದ ಕೂಡ ಇದೆ. ದೀಪಾ ಭಾಸ್ತಿ ಅವರಂಥ ಅನುವಾದಕಿ ಬಂದು ಅನುವಾದಿಸಿದ ನಂತರ ಅದು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಪ್ರಶಸ್ತಿ ಲೇಖಕಿಯರ ಸಾಮರ್ಥ್ಯದ ಮಾನದಂಡ ಅಲ್ಲ. ಭಾನು ಮುಷ್ತಾಕ್ ಅವರು ಜೀವನಪರ್ಯಂತ ಹೋರಾಟ, ಬರವಣಿಗೆ, ವಕೀಲಿಕೆ ಈ ಎಲ್ಲ ಆಯಾಮಗಳಲ್ಲಿ ಅವರ ವ್ಯಕ್ತಿತ್ವ ನೋಡಿದರೆ ಅವರು ಅದ್ವಿತಿಯ ಸಾಧಕಿ ಆಗಿ ಹೋಗಿದ್ದಾರೆ. ಆದರೆ ಈ ಪ್ರಶಸ್ತಿಯ ಮೂಲಕ ಇಡೀ ಪುರುಷ ಸಮಾಜಕ್ಕೆ ತಿಳಿಯಪಡಿಸಲು ಸಾಧ್ಯವಾಯಿತು, ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಇನ್ನಾದರೂ ನಿಮ್ಮ ಒಳಗಣ್ಣು ತೆರೆದು ನೋಡಲು ಸಾಧ್ಯವಾಗಲಿ. ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು.
-ರೂಪ ಹಾಸನ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ
ಚರಿತ್ರಾರ್ಹ ಸಾಧನೆ
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಅವರಿಗೆ ಗೌರವದ ಅಭಿನಂದನೆಗಳು. ಮಹಿಳಾ ಅಸ್ಮಿತೆಗೆ ಸಂದ ಗೌರವವಿದು. ನಮ್ಮ ದೇಶದ ಬಹುತ್ವ ಸಂಸ್ಕೃತಿ ಅಪಾಯವನ್ನೆದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಸಂದಿರುವ ಬೂಕರ್ ಪ್ರಶಸ್ತಿ ಅತ್ಯಂತ ಮಹತ್ವದ್ದು. ಈ ಮೂಲಕ ಜಗತ್ತಿನ ಎಲ್ಲ ದೇಶಗಳಿಗೂ ಸಾಮರಸ್ಯದ, ಸೌಹಾರ್ದತೆಯ ಸಂದೇಶ ಸಾರುತ್ತಿದೆ. ಇದೊಂದು ಚರಿತ್ರಾರ್ಹ ಸಾಧನೆ.
-ಡಾ ವಸುಂಧರಾ ಭೂಪತಿ, ಸಾಹಿತಿ, ಕಲೇಸಂ ಮಾಜಿ ಅಧ್ಯಕ್ಷೆ
ಕನ್ನಡಿಗರೆಲ್ಲರಿಗೂ ಸಂತಸದ ಕ್ಷಣ
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದೆವೆಂದು ಹೆಮ್ಮೆ ಪಡುವ ಕನ್ನಡಿಗರ ಗುಂಪಿನಲ್ಲಿ ಒಬ್ಬ ಲೇಖಕಿಯೂ ಇಲ್ಲವೆಂಬ ಕೊರತೆಯಿತ್ತು. ಬಾನು ಮುಷ್ತಾಕ್ ಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು ಕನ್ನಡಿಗರೆಲ್ಲರಿಗೂ ಸಂತಸದ ಕ್ಷಣ. ಹಾಗೆಯೇ ಲೇಖಕಿಯಾಗಿ ವಿಶೇಷ ಹೆಮ್ಮೆ! ಕನ್ನಡಕ್ಕೆ ಬೂಕರ್ ಗರಿ ತೊಡಿಸಿದ ಬಾನು ಮತ್ತು ದೀಪಾ – ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು
-ಡಾ ಎನ್ ಗಾಯತ್ರಿ, ಹಿರಿಯ ಲೇಖಕಿ
ಸಾರಾ ಹೇಗೆ ಪ್ರಶ್ನೆ ಕೇಳುತ್ತಿದ್ದರೋ ಅದನ್ನೇ ಈಗ ಬಾನು ಕೇಳುತ್ತಿದ್ದಾರೆ
ಕನ್ನಡಕ್ಕೆ ಬೂಕರ್ ಬಂದಿರೋದು ಮತ್ತು ಬಾನು ಮೇಡಂಗೆ ಬಂದಿರೋದು ಎರಡೂ ಮಹತ್ವದ ಸಂಗತಿನೇ. ಮೊದಲು ಬಂದ ಪ್ರಶಸ್ತಿಗಳಿಗೆ ಬಹಳ ಮಹತ್ವ ಇರುತ್ತೆ. ಯಾಕೆಂದರೆ ಇಡೀ ನಾಡು ಸಂಭ್ರಮಿಸುತ್ತೆ. ನನ್ನ ಅಭಿಪ್ರಾಯದಲ್ಲಿ ಭಾನು ಮೇಡಂ ಯಾವತ್ತೂ ಪ್ರಶಸ್ತಿಯ ಹಿಂದೆ ಹೋದವರದಲ್ಲ. ಅವರನ್ನು ಹುಡುಕಿಕೊಂಡು ಪ್ರಶಸ್ತಿ ಬಂದಿದೆ. ಲಂಕೇಶ್ ಪತ್ರಿಕೆಯ ಆರಂಭದ ದಿನಗಳಿಂದಲೂ ಬರೆಯುತ್ತಿದ್ದರು. ಇದುವರೆಗೂ ಅವರು ನೇರವಾಗಿ ತನಗೆ ಕಂಡ ಸತ್ಯವನ್ನು, ಅನ್ಯಾಯಕ್ಕೆ ಒಳಗಾದ ಜನರ ದನಿಯಾಗಿ ಮಾತಾಡುತ್ತಾರೆ. ಈಗಲೂ ದಿಟ್ಟವಾಗಿ ಸ್ಪಷ್ಟವಾಗಿ ಸಾರಾ ಹೇಗೆ ಪ್ರಶ್ನೆ ಕೇಳುತ್ತಿದ್ದರೋ ಅದನ್ನೇ ಈಗಿನ ಕಠಿಣ ಸ್ಥಿತಿಯಲ್ಲಿಯೂ ಕೇಳುತ್ತಿದ್ದಾರೆ. ಅವರ ಕತೆಗಳನ್ನು ಆರಂಭದಿಂದ ಇಂದಿನವರೆಗೆ ನೋಡಿದರೆ ಹೆಣ್ಣಿನ ಶೋಷಣೆಯನ್ನು ಪ್ರತಿಭಟಿಸುತ್ತಾ ಬಂದ್ರು. ಮುಸ್ಲಿಂ ಹೆಣ್ಣುಮಕ್ಕಳ ದಾರುಣ ಸ್ಥಿತಿಯನ್ನು ಆ ಹೆಣ್ಣುಮಕ್ಕಳ ಅಸಹಾಯಕತೆ ಅಭದ್ರತೆ, ಅವರ ಮೇಲಾಗುವ ದಾಳಿಯನ್ನು, ಮನೆಯೊಳಗಿನ ದಾಳಿ, ಮನೆ ಹೊರಗಿನ ದಾಳಿಯನ್ನು ಸಂಕಟದಿಂದ ಮಾತ್ರ ಬರೆಯುತ್ತಿರಲಿಲ್ಲ. ಪ್ರತಿಭಟನೆಯ ತೀವ್ರತೆಯಲ್ಲಿ ಬರೆಯುತ್ತಿದ್ದರು. ಆ ಪಾತ್ರಗಳು ಅಸಹಾಯಕವಾಗಿರಬಹುದು. ಅಂತಹ ಪಾತ್ರಗಳಿಗೆ ನಾಗರಿಕ ಸಮಾಜವಾಗಿ ನಾವು ನ್ಯಾಯ ಒದಗಿಸಬೇಕು ಮತ್ತು ಅದಕ್ಕೆ ಕಣ್ಣೀರು ಹಾಕುತ್ತ ಕೂತುಕೊಳ್ಳದೇ ಅದನ್ನು ಪ್ರತಿಭಟಿಸುವುದು ಮಾತ್ರವಲ್ಲ ಬದುಕಿನ ಭರವಸೆಯನ್ನು ಕಳೆದುಕೊಳ್ಳದೇ ಮುನ್ನುಗ್ಗಬೇಕು. ಬೆನ್ನು ತಿರುಗಿಸದೇ ಬದುಕ ಎದುರಿಸಬೇಕು ಎಂಬ ಆಶಾದಾಯಕ ನೆಲೆಯಿಂದ ಬಾನು ಬರೆಯುತ್ತಾರೆ. ವಿಮರ್ಶೆಗೆ ತಲೆ ಕೆಡಿಸಿಕೊಳ್ಳಲಿಲ್ಲ, ಯಾರು ಏನು ಹೇಳುತ್ತಾರೆ ಎಂಬ ಟೀಕೆಗೆ ಗಮನ ಕೊಡಲಿಲ್ಲ. ಅವರಿಗೆ ಪ್ರೋತ್ಸಾಹದ ವಾತಾವರಣ ಇತ್ತು ಎಂದು ಹೇಳಿದ್ದಾರೆ. ಅನೇಕರಿಗೆ ಶಿಕ್ಷಣ ಪ್ರೋತ್ಸಾಹ ಸಿಕ್ಕಿರುತ್ತದೆ. ಆದರೆ ಅವರು ಕತೆಗೆ ಆಯ್ದುಕೊಂಡ ವಸ್ತು, ಯಾರ ಜೊತೆಗೆ ನಿಂತರು ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಅವರ ಬರವಣಿಗೆ ಮುಖ್ಯವಾಗುತ್ತದೆ.
-ಸಬಿತಾ ಬನ್ನಾಡಿ, ಲೇಖಕಿ
ಮಾತಿಗೆ ಮೀರಿದ ಹಿಗ್ಗನ್ನು ತಂದಿದೆ
ಬಹು ನಿರೀಕ್ಷೆಯಲ್ಲಿದ್ದ ಈ ಪ್ರಶಸ್ತಿ ಆಪ್ತ ಗೆಳತಿ ಬಾನು ಅವರಿಗೇ ಸಿಕ್ಕಿದ್ದು ಮಾತಿಗೆ ಮೀರಿದ ಹಿಗ್ಗನ್ನು ತಂದಿದೆ. ಮೆಚ್ಚಿನ ಬರಹಗಾರ್ತಿ, ನಿಗರ್ವಿ, ವಿನಯಕ್ಕೆ ಮತ್ತೊಂದು ಹೆಸರು ಎನ್ನುವಂತಿರುವ, ಎಲ್ಲಿ ಯಾರಿಗೆ ಅನ್ಯಾಯವಾದರೂ ಸಿಡಿದೇಳುವ ಅಪ್ಪಟ ನ್ಯಾಯವಾದಿ ಬಾನು ನಮ್ಮ ಭಾಷೆಗೆ, ನಾಡಿಗೆ ಹೆಮ್ಮೆಯನ್ನು ತಂದುಕೊಟ್ಟಿದಾರೆ. ಆಕೆಗೆ ನಮ್ಮ ನಾಡಿಗೆ ನಾಡೇ ಪ್ರೀತಿಯಿಂದ ನಮಿಸುತ್ತದೆ.
-ಡಾ ವಿಜಯಾ, ಹಿರಿಯ ಪತ್ರಕರ್ತೆ
ಇವತ್ತು ʼಬಾನು ದಿನʼ
ಮೊದಲ ಬಾರಿಗೆ ಕನ್ನಡದ ಸಣ್ಣ ಕತೆಗಳ ಸಂಕಲನವೊಂದಕ್ಕೆ ಅಂತಾರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು ಸಮಸ್ತ ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ. ಕನ್ನಡದ ಕೋಟ್ಯಾಂತರ ಜನ, ಸಾಹಿತ್ಯ ಲೋಕ ಈ ಒಂದು ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿತ್ತು. ಇವತ್ತು ಬಾನು ದಿನ, ಕನ್ನಡಿಗರ ದಿನ. ಇಡೀ ಸಾಮಾಜಿಕ ಜಾಲತಾಣ ಹಾಗೂ ಹಲವಾರು ಪತ್ರಿಕೆಗಳಲ್ಲಿ ಬೂಕರ್ ಪ್ರಶಸ್ತಿಯನ್ನು ಪಡೆದ ಬಾನು ಮುಷ್ತಾಕ್ ಅವರದೇ ಸುದ್ದಿ. 2022 ರಲ್ಲಿ ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಅವರ
“ರೇತ್ ಸಮಾಧಿ” Tomb of Sand ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿತ್ತು. ಈ ಸಲ ಕನ್ನಡಕ್ಕೆ. ಭಾರತೀಯ ಭಾಷೆಗಳ ಸಾಹಿತ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪುವುದೇ ಅನುವಾದದ ಮಾಧ್ಯಮದಿಂದ. ಇಲ್ಲಿ ಲೇಖಕರಷ್ಟೇ ಅನುವಾದಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ನನ್ನ ಅನಿಸಿಕೆ. ಈ ಪುಸ್ತಕದ ಅನುವಾದಕಿ ದೀಪಾ ಭಾಸ್ತಿ ಅವರಿಗೂ ಅವರ ಆಯ್ಕೆ ಮತ್ತು ಅನುವಾದಕ್ಕಾಗಿ ತುಂಬು ಹೃದಯದ ಧನ್ಯವಾದಗಳು.
ಹಿಂದಿ ಸಾಹಿತ್ಯ ಪತ್ರಿಕೆಯೊಂದು ಇನ್ನೂ ಮುಂದುವರಿದು – ಭಾರತದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಪ್ರತಿ ನಿತ್ಯವೂ ತಮ್ಮ ಭಾರತೀಯತೆ, ದೇಶಪ್ರೇಮ, ದೇಶದ ಬಗೆಗಿರುವ ನಿಷ್ಠೆಯನ್ನು ಪ್ರಮಾಣಿಕರಿಸುತ್ತಲೇ ಬದುಕಬೇಕಾದಂತಹ ವಾತಾವರಣ ಸೃಷ್ಟಿಯಾಗಿರುವಂತಹ ಬಿಕ್ಕಟ್ಟಿನ ಕಾಲದಲ್ಲಿ ಬಾನು ಮುಷ್ತಾಕರಿಗೆ ಅಂತಾರಾಷ್ಟ್ರೀಯ ಬೂಕರ್ ಪುರಸ್ಕಾರ ಬಂದಿದ್ದು ಸಮಸ್ತ ಭಾರತೀಯರಿಗೆ ಅತ್ಯಂತ ಸಂತಸದ ಸಂಗತಿಯಾಗಿದೆ” ಎಂದು ಅಭಿಪ್ರಾಯಪಟ್ಟಿದೆ. ಮತ್ತೊಮ್ಮೆ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ರೇಣುಕಾ ನಿಡಗುಂದಿ, ಹಿರಿಯ ಲೇಖಕಿ, ಅನುವಾದಕಿ
ಮಹಿಳಾ ಬರವಣಿಗೆಗೆ ಸಂದ ಬಹು ದೊಡ್ಡ ಗೌರವ
ಮಹಿಳಾ ಸಾಹಿತ್ಯದ ವಿಶೇಷತೆ ಇರುವುದೇ ತಮ್ಮ ಅನುಭವ ಲೋಕವನ್ನು ಅವರು ಅನಾವರಣಗೊಳಿಸುವ ರೀತಿಯಲ್ಲಿ. ಸಾರಾ ಅಬೂಬಕರ್ ನಂತರ ಬಾನು ಅವರ ಕಥೆಗಳು ಮುಖ್ಯವಾಗಿ ವಿವಿಧ ವರ್ಗದ ಮುಸ್ಲಿಂ ಮಹಿಳೆಯರ ಬದುಕಿನ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿವೆ. ಇದಲ್ಲದೆ ಒಬ್ಬ ಸೂಕ್ಷ್ಮಸಂವೇದನೆಯ ಹೆಣ್ಣಾಗಿ ಅವರು ಅನುಭವಿಸಿದ ಸಂಗತಿಗಳನ್ನು ಸಹ ಅವರ ಕಥೆ ಮತ್ತು ಕವಿತೆಗಳು ಅನಾವರಣಗೊಳಿಸಿವೆ. ಯಾವುದೇ ಸಾಹಿತ್ಯದ ಮಹತ್ವ ಇರುವುದು ಅದರ ತಂತ್ರಗಾರಿಕೆ ಮತ್ತು ನೈಪುಣ್ಯತೆಗಿಂತ ಅದು ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತ ಓದುಗರ ಹೃದಯವನ್ನು ಪ್ರವೇಶಿಸುವುದರಲ್ಲಿದೆ. ಈ ದೃಷ್ಟಿಯಿಂದ ಬಾನು ಅವರಿಗೆ ಬೂಕರ್ ಪ್ರಶಸ್ತಿ ಸಂದಿರುವುದು ಅವರಿಗೆ ಮಾತ್ರವಲ್ಲ ಕನ್ನಡ ಸಾಹಿತ್ಯಕ್ಕೆ, ಅದರಲ್ಲೂ ಮಹಿಳಾ ಬರವಣಿಗೆಗೆ ಸಂದ ಬಹು ದೊಡ್ಡ ಗೌರವ ಎಂದು ಭಾವಿಸುತ್ತೇನೆ.
-ಡಾ ಸಂಧ್ಯಾರೆಡ್ಡಿ, ಹಿರಿಯ ಲೇಖಕಿ, ಕಲೇಸಂ ಮಾಜಿ ಅಧ್ಯಕ್ಷೆ

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.