ಸ್ವೀಡನ್ನ ಗೋಥೆನ್ಬರ್ಗ್ ವಿಶ್ವವಿದ್ಯಾಲಯದ ‘ವಿ-ಡೆಮ್’ ಸಂಸ್ಥೆ ಬಿಡುಗಡೆ ಮಾಡಿರುವ ‘ಡೆಮಾಕ್ರಸಿ ರಿಪೋರ್ಟ್ 2026’ರಲ್ಲಿ ಭಾರತದ ಚುನಾವಣಾ ಪ್ರಜಾಪ್ರಭುತ್ವದ ಸ್ಥಿತಿ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. 2025ರ ದತ್ತಾಂಶವನ್ನು ಆಧರಿಸಿದ ಈ ವರದಿಯ ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ (EDI) 179 ದೇಶಗಳ ಪೈಕಿ ಭಾರತ 0.38 ಅಂಕಗಳೊಂದಿಗೆ 106ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಭಾರತದ ಪ್ರಸ್ತುತ ಅಂಕವು 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ದಾಖಲಾಗಿದ್ದ 0.39 ಅಂಕಕ್ಕಿಂತಲೂ ಕಡಿಮೆಯಾಗಿದೆ ಎಂಬುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.
ಮುಕ್ತ ಚುನಾವಣೆ, ಸಾರ್ವತ್ರಿಕ ಮತದಾನದ ಹಕ್ಕು, ರಾಜಕೀಯ ಪಕ್ಷಗಳ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮಾನದಂಡಗಳನ್ನು ಆಧರಿಸಿ ಈ ಅಂಕಗಳನ್ನು (0 ಯಿಂದ 1ರವರೆಗೆ) ನೀಡಲಾಗುತ್ತದೆ. ಈ ಸೂಚ್ಯಂಕದಲ್ಲಿ ಡೆನ್ಮಾರ್ಕ್ 0.91 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಾರ್ವೆ, ಬೆಲ್ಜಿಯಂ ಮತ್ತು ಸ್ವೀಡನ್ ತಲಾ 0.89 ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಈ ಪಟ್ಟಿಯಲ್ಲಿ ಮೇಲುಗೈ ಸಾಧಿಸಿವೆ.
ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ನ್ಯೂಜಿಲೆಂಡ್ 14ನೇ, ಕೆನಡಾ 16ನೇ ಹಾಗೂ ಜರ್ಮನಿ 21ನೇ ಸ್ಥಾನದಲ್ಲಿವೆ. ಆದರೆ, ಜಾಗತಿಕ ದೊಡ್ಡಣ್ಣ ಅಮೆರಿಕದ ಸ್ಥಿತಿ ಕೂಡ ಈ ಬಾರಿ ಕುಸಿತ ಕಂಡಿದೆ. 0.74 ಅಂಕಗಳೊಂದಿಗೆ ಅಮೆರಿಕ 47ನೇ ಸ್ಥಾನಕ್ಕೆ ಇಳಿದಿದ್ದು, ಕಳೆದ 50 ವರ್ಷಗಳಲ್ಲಿಯೇ ಮೊದಲ ಬಾರಿಗೆ ‘ಲಿಬರಲ್ ಡೆಮಾಕ್ರಸಿ’ (ಉದಾರವಾದಿ ಪ್ರಜಾಪ್ರಭುತ್ವ) ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ವರದಿ ಬೆಟ್ಟುಮಾಡಿದೆ.
ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳ ಸಾಧನೆ ಭಾರತಕ್ಕಿಂತ ಉತ್ತಮವಾಗಿದೆ. 2020ರಿಂದ ಚುನಾವಣಾ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿಯಂತ್ರಣದಲ್ಲಿ ಸುಧಾರಣೆ ಕಂಡಿರುವ ಶ್ರೀಲಂಕಾ (33ನೇ ಸ್ಥಾನ) ಪ್ರಾದೇಶಿಕವಾಗಿ ಅತ್ಯುತ್ತಮ ಸ್ಥಾನದಲ್ಲಿದೆ. ನೇಪಾಳ (61), ಭೂತಾನ್ (76) ಮತ್ತು ಮಾಲ್ಡೀವ್ಸ್ (80) ಕೂಡ ಭಾರತವನ್ನು ಹಿಂದಿಕ್ಕಿವೆ. ಭಾರತ ಕೇವಲ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳಿಗಿಂತ ಮಾತ್ರ ಮುಂದಿದೆ.
ಪಟ್ಟಿಯ ಕೊನೆಯ ಸ್ಥಾನಗಳಲ್ಲಿ ನಿರಂಕುಶಾಧಿಕಾರ ಹೊಂದಿರುವ ದೇಶಗಳಿವೆ. ಸೌದಿ ಅರೇಬಿಯಾ 179ನೇ ಸ್ಥಾನದೊಂದಿಗೆ ಕೊನೆಯಲ್ಲಿದ್ದರೆ, ಕತಾರ್ (178), ಅಫ್ಗಾನಿಸ್ತಾನ (176), ಚೀನಾ (175) ಮತ್ತು ಮ್ಯಾನ್ಮಾರ್ (174) ತಳಮಟ್ಟದಲ್ಲಿವೆ. ರಷ್ಯಾ 152ನೇ ಸ್ಥಾನದಲ್ಲಿದೆ. ಭಾರತವು ಚೀನಾ, ರಷ್ಯಾ ಮತ್ತು ಪಾಕಿಸ್ತಾನಕ್ಕಿಂತ ಮೇಲಿದ್ದರೂ, ವಿಶ್ವದ ಮೊದಲ 100 ದೇಶಗಳ ಪಟ್ಟಿಯಿಂದ ಹೊರಗುಳಿದಿರುವುದು ಪ್ರಜಾಪ್ರಭುತ್ವದ ಹಿನ್ನಡೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ವಿ-ಡೆಮ್ನ ಪ್ರತ್ಯೇಕ ‘ಲಿಬರಲ್ ಡೆಮಾಕ್ರಸಿ’ (LDI) ಸೂಚ್ಯಂಕದಲ್ಲಿ ಭಾರತ 0.26 ಅಂಕ ಪಡೆದು 105ನೇ ಸ್ಥಾನದಲ್ಲಿದೆ. ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಪ್ರಹಾರ, ಪತ್ರಕರ್ತರಿಗೆ ಕಿರುಕುಳ, ನಾಗರಿಕ ಸಮಾಜದ ಮೇಲಿನ ದಾಳಿ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವುದೇ ಭಾರತದ ಈ ಕುಸಿತಕ್ಕೆ ಪ್ರಮುಖ ಕಾರಣಗಳು. 2017ರಿಂದಲೇ ಭಾರತವನ್ನು ‘ಚುನಾವಣಾ ಸರ್ವಾಧಿಕಾರ’ (Electoral Autocracy) ವ್ಯವಸ್ಥೆ ಎಂದು ವಿ-ಡೆಮ್ ವರ್ಗೀಕರಿಸಿದೆ.
ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವದ ಒಟ್ಟಾರೆ ಸ್ಥಿತಿಗತಿಯನ್ನು ಅವಲೋಕಿಸಿದಾಗ, 2025ರ ಅಂತ್ಯಕ್ಕೆ ವಿಶ್ವಾದ್ಯಂತ 92 ಸರ್ವಾಧಿಕಾರಿ ವ್ಯವಸ್ಥೆಗಳು ಮತ್ತು ಕೇವಲ 87 ಪ್ರಜಾಪ್ರಭುತ್ವ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ. ಜಗತ್ತಿನ ಶೇಕಡಾ 74ರಷ್ಟು ಜನರು ಸರ್ವಾಧಿಕಾರಿ ಆಡಳಿತದಡಿ ಬದುಕುತ್ತಿದ್ದರೆ, ಕೇವಲ ಶೇಕಡಾ 7ರಷ್ಟು ಜನರು ಮಾತ್ರ ಸಂಪೂರ್ಣ ಉದಾರವಾದಿ ಪ್ರಜಾಪ್ರಭುತ್ವದ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂದು ಈ ವರದಿಯು ವಿವರಿಸಿದೆ.




