ಬೆಂಗಳೂರಿನ ರಸ್ತೆ ಜಾಗದ ಶೇ.60ರಷ್ಟು ಭಾಗವನ್ನು ವಾಹನಗಳ ಪಾರ್ಕಿಂಗ್ಗೆ ಬಳಸಲಾಗುತ್ತಿದ್ದು, ಇದರಿಂದ ನಗರದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುತ್ತಿದೆ. ಪಾರ್ಕಿಂಗ್ ನಿಯಮಗಳನ್ನು ಜಾರಿಗೊಳಿಸಲು ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿ ಸಾಕಾಗುತ್ತಿಲ್ಲ. ಹೀಗಾಗಿ ನಗರದಾದ್ಯಂತ ಪಾರ್ಕಿಂಗ್ ನಿಯಂತ್ರಣ ಮತ್ತು ಜಾರಿ ಕಾರ್ಯಕ್ಕೆ ಮೀಸಲಾದ ಸಂಸ್ಥೆ ಅಗತ್ಯವಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಸೌಧದಲ್ಲಿ ಮಾಜಿ ಮೇಯರ್ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಂಚಾರ ಸಮಸ್ಯೆಗೆ ಕೇವಲ ಹೊಸ ರಸ್ತೆಗಳನ್ನು ನಿರ್ಮಿಸುವುದರಿಂದ ಪರಿಹಾರ ಸಿಗುವುದಿಲ್ಲ. ಈಗಿರುವ ರಸ್ತೆ ಜಾಗವನ್ನು ಸಮರ್ಪಕವಾಗಿ ಬಳಸುವುದು ಹಾಗೂ ವಾಹನ ನಿಲುಗಡೆಗೆ ಶಿಸ್ತು ತರುವುದು ಅತ್ಯಗತ್ಯ ಎಂದು ಹೇಳಿದರು.
ನಗರದ ಕಿರಿದಾದ ರಸ್ತೆಗಳ ಎರಡೂ ಬದಿಗಳಲ್ಲೂ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರಕ್ಕೆ ಲಭ್ಯವಿರುವ ರಸ್ತೆ ಜಾಗ ಕಡಿಮೆಯಾಗುತ್ತಿದ್ದು, ರಸ್ತೆಗಳ ನೈಜ ಸಾಮರ್ಥ್ಯ ಕುಸಿಯುತ್ತಿದೆ. ಹೀಗಾಗಿ ಪಾರ್ಕಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ. ಜನರು ಸ್ವಯಂ ಶಿಸ್ತು ಬೆಳೆಸಿಕೊಳ್ಳದಿದ್ದರೆ ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರಸ್ತೆಗಳನ್ನು ನಿರ್ಮಿಸುತ್ತಲೇ ಇದ್ದೇವೆ. ಆದರೂ ಸಾರ್ವಜನಿಕರಿಂದ ಟೀಕೆ ಎದುರಿಸುತ್ತಿದ್ದೇವೆ. ಕೇವಲ ರಸ್ತೆ ನಿರ್ಮಾಣದಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.
2 ಕಿ.ಮೀ.ವರೆಗಿನ ಸಣ್ಣ ದೂರದ ಪ್ರಯಾಣಗಳಿಗೆ ಮೈಕ್ರೊ ಮೊಬಿಲಿಟಿ ವ್ಯವಸ್ಥೆಯನ್ನು ಉತ್ತೇಜಿಸುವ ಅಗತ್ಯವಿದೆ. ಆದರೆ ಇದಕ್ಕೆ ಸುಗಮವಾಗಿ ಬಳಸಬಹುದಾದ ಪಾದಚಾರಿ ಮಾರ್ಗಗಳು ಹಾಗೂ ಪರಿಣಾಮಕಾರಿ ಪಾರ್ಕಿಂಗ್ ನಿಯಂತ್ರಣ ವ್ಯವಸ್ಥೆ ಇರಬೇಕು. ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ಪುನರ್ಸ್ಥಾಪಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ಆದರೆ ಪಾರ್ಕಿಂಗ್ ನಿಯಂತ್ರಣವಿಲ್ಲದೆ ಮೈಕ್ರೊ ಮೊಬಿಲಿಟಿ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಗರದಲ್ಲಿ ಕಟ್ಟಡ ಹಾಗೂ ನಾಗರಿಕ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಬಗ್ಗೆಯೂ ಬೈರೇಗೌಡ ಕಳವಳ ವ್ಯಕ್ತಪಡಿಸಿದರು. ನಿಯಮಗಳನ್ನು ಪಾಲಿಸದೆ ಒಳಚರಂಡಿ ಸಂಪರ್ಕಗಳಲ್ಲಿ ಬದಲಾವಣೆ ಮಾಡುವುದು, ಮನೆಗಳಲ್ಲಿ ವಾಹನ ನಿಲುಗಡೆಗೆ ಅಗತ್ಯ ಜಾಗವನ್ನು ಮೀಸಲಿಡದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳು ನಡೆಯುತ್ತಿವೆ. ಇಂತಹ ವರ್ತನೆಯನ್ನು ಎಷ್ಟು ಕಾಲ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ: ಅಕ್ಟೋಬರ್ 1ರಿಂದ ಪಿಒಪಿ ಶುಲ್ಕ ಪರಿಷ್ಕರಣೆ
ಬೆಂಗಳೂರು ಎದುರಿಸುತ್ತಿರುವ ದೀರ್ಘಕಾಲದ ನಾಗರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅನಿವಾರ್ಯ. ನಿರ್ಮಾಣ ಮತ್ತು ಕೆಡವಿಕೆ ತ್ಯಾಜ್ಯ (C&D Waste) ಸಾಗಿಸುವ ಎಲ್ಲ ವಾಹನಗಳ ನೋಂದಣಿ ಹಾಗೂ ಅವುಗಳಿಗೆ GPS ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ನಿರ್ಮಾಣ ತ್ಯಾಜ್ಯವನ್ನು ನಿಗದಿತ ಸ್ಥಳಗಳಲ್ಲೇ ವಿಲೇವಾರಿ ಮಾಡಬೇಕು. ಇದಕ್ಕಾಗಿ ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ನಿಯಮ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಮೇಯರ್ಗಳು ಬೆಂಗಳೂರಿನ ನಾಗರಿಕ ಮೂಲಸೌಕರ್ಯ ಮತ್ತು ದೈನಂದಿನ ಆಡಳಿತ ಸುಧಾರಣೆಗೆ ಹಲವು ಸಲಹೆಗಳನ್ನು ನೀಡಿದರು. ಸ್ಮಶಾನ ಅಭಿವೃದ್ಧಿ, ಗುಂಡಿಬಿದ್ದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಬದಲು ವೈಜ್ಞಾನಿಕ ಹಾಗೂ ದೀರ್ಘಕಾಲ ಬಾಳಿಕೆ ಬರುವ ವಿಧಾನದಲ್ಲಿ ದುರಸ್ತಿ ಮಾಡುವುದು ಹಾಗೂ ನಗರದ ಕಸ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವಂತೆ ಅವರು ಸಲಹೆ ನೀಡಿದರು.




