ಮೇ 1ರ ಆರಂಭವು ಪ್ರತಿ ಭಾರತೀಯ ಕುಟುಂಬದ ಮೇಲೆ ಪರಿಣಾಮ ಬೀರುವ ಆರ್ಥಿಕ ಬದಲಾವಣೆಗಳ ಸರಣಿಯನ್ನು ತಂದಿದೆ. ಈ ಬದಲಾವಣೆಗಳ ಬಗ್ಗೆ ತಿಳಿದಿರುವುದು, ಜಾಗರೂಕರಾಗಿರುವುದು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಹಣಕಾಸಿನ ನಿರ್ವಹಣೆಯನ್ನು ಸರಿಹೊಂದಿಸಿಕೊಳ್ಳುವುದು ಅನಿವಾರ್ಯವಾಗಿದೆ.
2025ರ ಮೇ 1ರಿಂದ ದೇಶಾದ್ಯಂತ ಹಲವಾರು ಪ್ರಮುಖ ಹಣಕಾಸು ಮತ್ತು ನಿಯಂತ್ರಕ ಬದಲಾವಣೆಗಳು ಜಾರಿಗೆ ಬಂದಿವೆ. ಈ ನವೀಕರಣಗಳು ದೈನಂದಿನ ಎಟಿಎಂ ಶುಲ್ಕ ಹೆಚ್ಚಳ, ಬ್ಯಾಂಕಿಂಗ್, ಹೂಡಿಕೆಗಳು, ತೆರಿಗೆಗಳು ಮತ್ತು ರೈಲ್ವೆ ಹಾಗೂ ಎಲ್‌ಪಿಜಿಯಂತಹ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತವೆ. ನೀವು ಸಂಬಳ ಪಡೆಯುವ ಉದ್ಯೋಗಿ, ನಿವೃತ್ತ ನೌಕರ, ವಿದ್ಯಾರ್ಥಿ ಅಥವಾ ವ್ಯಾಪಾರಿ ಸೇರಿದಂತೆ ಯಾರೇ ಆಗಿರಲಿ ಈ ಬದಲಾವಣೆಗಳಿಂದ ನಿಮ್ಮ ದೈನಂದಿನ ವೆಚ್ಚಗಳು ಮತ್ತು ಹಣಕಾಸು ಯೋಜನೆಯ ಮೇಲೆ ಹೊಡೆತ ಉಂಟಾಗಬಹುದು.
ಮೇ 1ರ ಆರಂಭವು ಪ್ರತಿ ಭಾರತೀಯ ಕುಟುಂಬದ ಮೇಲೆ ಪರಿಣಾಮ ಬೀರುವ ಆರ್ಥಿಕ ಬದಲಾವಣೆಗಳ ಸರಣಿಯನ್ನು ತಂದಿದೆ. ಹೆಚ್ಚಿನ ಎಟಿಎಂ ಶುಲ್ಕ, ಪರಿಷ್ಕೃತ ಸ್ಥಿರ ಠೇವಣಿ ದರಗಳು(ಎಫ್‌ಡಿ), ಬದಲಾದ ರೈಲ್ವೆ ಬುಕಿಂಗ್ ನೀತಿಗಳು, ನವೀಕರಿಸಿದ ತೆರಿಗೆ ಫೈಲಿಂಗ್ ಫಾರ್ಮ್‌ಗಳವರೆಗೆ, ಇ-ಶಿಪ್ಪಿಂಗ್(ಸರಕು ಸಾಗಾಣೆ)ಗಳನ್ನು ಮತ್ತು ಅದರ ದಕ್ಷತೆಯನ್ನು ಸುಧಾರಿಸಲು ಹಾಗೂ ಡಿಜಿಟಲ್ ಕ್ಷೇತ್ರಗಳನ್ನು ವಿಸ್ತರಿಸುವ ಗುರಿಗಳೊಂದಿಗೆ ಈ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಬದಲಾವಣೆಗಳ ಬಗ್ಗೆ ತಿಳಿದಿರುವುದು, ಜಾಗರೂಕರಾಗಿರುವುದು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಹಣಕಾಸಿನ ನಿರ್ವಹಣೆಯನ್ನು ಸರಿಹೊಂದಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ : ಮೇ 1ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಎಟಿಎಂ ವಹಿವಾಟು ಶುಲ್ಕವನ್ನು ಪರಿಷ್ಕರಿಸಿದೆ.
ಸ್ವಂತ ಬ್ಯಾಂಕ್ ಎಟಿಎಂಗಳು: ಉಳಿತಾಯ ಖಾತೆಗಳ ಎಟಿಎಂನ ಮೊದಲ 5 ವಹಿವಾಟುಗಳು(ಹಣಕಾಸು + ಆರ್ಥಿಕೇತರ) ಉಚಿತವಾಗಿರುತ್ತವೆ.
ಇತರ ಬ್ಯಾಂಕ್ ಎಟಿಎಂಗಳು:
ಮೆಟ್ರೋ ನಗರಗಳು: 3 ಬಾರಿ ವಹಿವಾಟು ನಡೆಸಲು ಉಚಿತವಾಗಿರುತ್ತದೆ.
ಮೆಟ್ರೋ ಅಲ್ಲದ ಪ್ರದೇಶಗಳು: 5 ಬಾರಿ ವಹಿವಾಟುಗಳನ್ನು ನಡೆಸಲು ಉಚಿತವಾಗಿರುತ್ತದೆ.
ಉಚಿತ ಮಿತಿಗಳ ನಂತರ: ಆಯಾ ಪ್ರದೇಶಗಳಿಗೆ ತಕ್ಕಂತೆ 3 ಮತ್ತು 5 ಬಾರಿ ಎಟಿಎಂ ವ್ಯವಹಾರ ನಡೆಸಿದ ಬಳಿಕವೂ ಎಟಿಎಂನಿಂದ ಹೆಚ್ಚಿನ ವಹಿವಾಟು ನಡೆಸಿದರೆ ಪ್ರತಿ ವಹಿವಾಟಿಗೆ 2 ರೂಪಾಯಿ ಹೆಚ್ಚಳದೊಂದಿಗೆ ₹23 ಶುಲ್ಕ ವಿಧಿಸಲಾಗುತ್ತದೆ(₹21 ರಿಂದ ₹23ಕ್ಕೆ ಹೆಚ್ಚಿಸಲಾಗಿದೆ).
ನಗದು ಮರುಬಳಕೆ ಯಂತ್ರಗಳು(ಸಿಆರ್‌ಎಂ) ಸೇರಿದಂತೆ ಎಟಿಎಂಗಳಲ್ಲಿ ಈ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಈ ಬದಲಾವಣೆಯು ಎಟಿಎಂ ಬಳಕೆದಾರರನ್ನು ಡಿಜಿಟಲ್ ಪಾವತಿಗಳತ್ತ ಹೊರಳಲು ಪ್ರೋತ್ಸಾಹಿಸುತ್ತದೆಯಾದರೂ ಎಟಿಎಂ ನಿರ್ವಹಣಾ ವೆಚ್ಚಗಳನ್ನು ತೆರಬೇಕಾಗುತ್ತದೆ. ಇದರಿಂದ ಬ್ಯಾಂಕುಗಳಿಗೆ ಲಾಭವಾಗುತ್ತದೆಯೇ ಹೊರತು ಗ್ರಾಹಕರಿಗಲ್ಲ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು: ಮೇ 1ರಿಂದ ದೇಶಾದ್ಯಂತ ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೀತಿ ಜಾರಿಗೆ ಬಂದಿದ್ದು, ಇದರಿಂದ, ಪ್ರಸ್ತುತ 43 ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. 11 ರಾಜ್ಯಗಳ 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ವಿಲೀನಗೊಂಡಿವೆ.
ಈ ಅಧಿಸೂಚನೆಯ ಮೇರೆಗೆ ರಾಜ್ಯಕ್ಕೀಗ ಒಂದೇ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದ್ದು, ನೂತನ ಬ್ಯಾಂಕಿನ ಪ್ರಧಾನ ಕಚೇರಿ ಬಳ್ಳಾರಿಯಲ್ಲಿ ಇರಲಿದೆ.
ನೂತನವಾಗಿ ಜಾರಿಯಾಗಿರುವ ಈ ಬ್ಯಾಂಕ್, ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರಿಯಲಿದ್ದು, ಕೇಂದ್ರ ಸರ್ಕಾರ ಶೇ.50ರಷ್ಟು, ರಾಜ್ಯ ಸರ್ಕಾರ ಶೇ.15ರಷ್ಟು ಮತ್ತು ಕೆನರಾ ಬ್ಯಾಂಕ್ ಶೇ.35ರಷ್ಟು ತಮ್ಮ ಪಾಲುದಾರಿಕೆಯನ್ನು ಮುಂದುವರಿಸಲಿವೆ. ಇನ್ನಮುಂದೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸೇವೆ ಸಮಗ್ರ ಕರ್ನಾಟಕಕ್ಕೆ ದೊರೆಯಲಿದೆ.
ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಬ್ಯಾಂಕಿಂಗ್ ರಂಗದಲ್ಲಿ 31 ವರ್ಷಗಳ ಅನುಭವ ಹೊಂದಿರುವ, ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ ಬಂಡಿವಾಡ ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಾರಥ್ಯ ವಹಿಸಲಿದ್ದಾರೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 9 ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 629 ಶಾಖೆಗಳೊಂದಿಗೆ ₹38,714 ಕೋಟಿ ವಹಿವಾಟು ನಡೆಸುತ್ತಿತ್ತು. ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ 22 ಜಿಲ್ಲೆಗಳಲ್ಲಿ 1,122 ಶಾಖೆಗಳೊಂದಿಗೆ ₹66,137 ಕೋಟಿ ವಹಿವಾಟು ನಡೆಸುತ್ತಿತ್ತು. ಸರ್ಕಾರಿ ಸ್ವಾಮ್ಯದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಇದಾಗಿರುವುದರಿಂದ ಗ್ರಾಹಕ ವರ್ಗ ಇನ್ನಷ್ಟು ಉತ್ತಮ ಸೇವೆ ಪಡೆಯಲಿದೆ.
“ಕೇಂದ್ರ ಸರ್ಕಾರವು ಈ ಮೂಲಕ ಸದರಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಒಂದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಆಗಿ ವಿಲೀನಗೊಳಿಸಲು ಅವಕಾಶ ನೀಡುತ್ತದೆ. ಇದು ಅಂತಹ ಸಂವಿಧಾನ, ಆಸ್ತಿ, ಅಧಿಕಾರಗಳು, ಹಕ್ಕುಗಳು, ಆಸಕ್ತಿಗಳು, ಪ್ರಾಧಿಕಾರಗಳು ಮತ್ತು ಸವಲತ್ತುಗಳೊಂದಿಗೆ 2025 ರ ಮೇ 1 ರಂದು ಮತ್ತು ನಂತರ ಜಾರಿಗೆ ಬರಲಿದ್ದು, ಅಂತಹ ಹೊಣೆಗಾರಿಕೆಗಳು, ಕರ್ತವ್ಯಗಳು ಮತ್ತು ಬಾದ್ಯತೆಗಳೊಂದಿಗೆ ನಿರ್ವಹಿಸಲಿದೆ” ಎಂದು ಕೇಂದ್ರ ಬ್ಯಾಂಕ್ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
1975ರಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸ್ಥಾಪನೆ: ಗ್ರಾಮೀಣ ಭಾಗದ ಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1975ರಲ್ಲಿ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿತು. ಆ ಸಮಯದಲ್ಲಿ ದೇಶಾದ್ಯಂತ 196 ಗ್ರಾಮೀಣ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 13 ಗ್ರಾಮೀಣ ಬ್ಯಾಂಕುಗಳಿದ್ದವು. ಗ್ರಾಮೀಣ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ 2005ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪ್ರಾರಂಭಿಸಿತು.
ಇದರನ್ವಯ ಮತ್ತು ತದನಂತರದ ವಿಲೀನ ಪ್ರಕ್ರಿಯೆಯ ಪರಿಣಾಮವಾಗಿ ರಾಜ್ಯದ ಕೆವಿಜಿ ಬ್ಯಾಂಕ್ ಸೇರಿ ಪ್ರಸ್ತುತ ದೇಶದಲ್ಲಿ 43 ಗ್ರಾಮೀಣ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದವು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಎಲ್ಲ ಬ್ಯಾಂಕುಗಳು, ಹಣಕಾಸು ಕಂಪನಿಗಳು ಮತ್ತು ಇತರ ನಿಯಂತ್ರಿತ ಘಟಕಗಳಿಗೆ ಮೇ 1ರಿಂದ ಪ್ರವಾಹ್ ಪೋರ್ಟಲ್ ಬಳಸಲು ಸೂಚನೆ ನೀಡಿದ್ದು, ಅಧಿಕಾರಗಳು, ಪರವಾನಗಿಗಳು ಮತ್ತು ಅನುಮೋದನೆಗಳಿಗಾಗಿ ಯಾವುದೇ ಅರ್ಜಿಗಳನ್ನು ಸಲ್ಲಿಸಲು ಪ್ರವಾಹ್ ಪೋರ್ಟಲ್(PRAVAAH portal) ಬಳಸಬೇಕು ಎಂದು ತಿಳಿಸಿದೆ.
ಶ್ರೀರಾಮ್ ಫೈನಾನ್ಸ್ ನಿಂದ ಎಫ್‌ಡಿ ಬಡ್ಡಿದರಗಳ ಪರಿಷ್ಕರಣೆ
ಶ್ರೀರಾಮ್ ಫೈನಾನ್ಸ್ ನಿಂದ ಎಫ್‌ಡಿ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.
ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ 8.40% ವರೆಗೆ ಹೆಚ್ಚಳ ಮಾಡಿದ್ದೆ. ಹಿರಿಯ ನಾಗರಿಕರಿಗೆ 8.90%ಗೆ ಹೆಚ್ಚಳ ಮಾಡಿದ್ದು, ಸಾಮಾನ್ಯ ಗ್ರಾಹಕರಿಗಿಂತ 0.50% ಹೆಚ್ಚುವರಿಯಾಗಿದೆ. ಮಹಿಳಾ ಠೇವಣಿದಾರರಿಗೆ 8.50%ಗೆ ಹೆಚ್ಚಳ ಮಾಡಿದ್ದು, 0.10% ಹೆಚ್ಚುವರಿಯಾಗಿದೆ.
ಇವು ಎನ್‌ಬಿಎಫ್‌ಸಿ ವಲಯದಲ್ಲಿ ಅತ್ಯಧಿಕ ಎಫ್‌ಡಿ ದರಗಳಲ್ಲಿ ಒಂದಾಗಿದ್ದು, ಸುರಕ್ಷಿತ, ಸ್ಥಿರ-ಆದಾಯದ ಲಾಭವನ್ನು ನಿರೀಕ್ಷಿಸುವ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.
ಉಳಿತಾಯ ಖಾತೆಗಳ ಮೇಲೆ ಮಾಸಿಕ ಬಡ್ಡಿ ಜಮಾ
ಆರ್‌ಬಿಎಲ್ ಬ್ಯಾಂಕ್ ಈಗ ಗ್ರಾಹಕರ ಉಳಿತಾಯ ಖಾತೆಗಳ ಮೇಲಿನ ಮಾಸಿಕ ಬಡ್ಡಿಯನ್ನು ಜಮಾ ಮಾಡುತ್ತಿದ್ದು, ಖಾತೆಯಲ್ಲಿ ಇರುವ ಬ್ಯಾಲೆನ್ಸ್‌ಗೆ ಅನುಗುಣವಾಗಿ ಗ್ರಾಹಕರು 7% ವರೆಗೆ ಮಾಸಿಕ ಬಡ್ಡಿಯನ್ನು ಗಳಿಸಬಹುದು. ಈ ಬದಲಾವಣೆಯು ಗ್ರಾಹಕರಿಗೆ ಅನುಕೂಲವಾಗಲಿದ್ದು, ವಿಶೇಷವಾಗಿ ಮಾಸಿಕ ವೆಚ್ಚಗಳಿಗಾಗಿ ಬಡ್ಡಿ ಆದಾಯವನ್ನು ಅವಲಂಬಿಸಿರುವವರಿಗೆ ಉಪಯುಕ್ತವಾಗಿದೆ.
ಆರ್‌ಬಿಐ ಇತ್ತೀಚೆಗೆ ರೆಪೋ ದರವನ್ನು ಶೇ.0.25ರಷ್ಟು ಇಳಿಸಿತ್ತು. ಇದರ ಪರಿಣಾಮ ಬ್ಯಾಂಕ್‌ಗಳು ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿವೆ. ಇದೂ ಕೂಡ ಮೇ 1ರಿಂದ ಜಾರಿಗೆ ಬರಲಿದೆ.
ಐಟಿಆರ್-1 ಮತ್ತು ಐಟಿಆರ್-4 ಫಾರ್ಮ್‌ಗಳಿಗೆ ಅಧಿಸೂಚನೆ
ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) 2024-25ರ ಹಣಕಾಸು ವರ್ಷ ಮತ್ತು 2025-26ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳಾದ ಐಟಿಆರ್ -1 ಮತ್ತು ಐಟಿಆರ್ -4 ಅನ್ನು ಬಿಡುಗಡೆ ಮಾಡಿ ಅಧಿಸೂಚನೆ ಹೊರಡಿಸಿದೆ.
2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗಿನ ಹಣಕಾಸು ವರ್ಷದಲ್ಲಿ ಗಳಿಸಿದ ಐಟಿಆರ್ ವಿವರಗಳನ್ನು ಈ ಹೊಸ ಫಾರ್ಮ್‌ಗಳ ಮೂಲಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ.
ಇದು 50 ಲಕ್ಷ ರೂಪಾಯಿವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. 1.25 ಲಕ್ಷ ರೂ.ವರೆಗಿನ ಎಲ್‌ಟಿಸಿಜಿ(ದೀರ್ಘಾವಧಿಯ ಬಂಡವಾಳ ಲಾಭ)ಯನ್ನು ಹೊಂದಿರುವ ತೆರಿಗೆದಾರರಿಗೆ ಈಗ ಈ ಫಾರ್ಮ್‌ಗಳನ್ನು ಅನುಮತಿಸಲಾಗಿದೆ. ತೆರಿಗೆದಾರರಿಗೆ ತಮ್ಮ ರಿಟರ್ನ್ ಸಲ್ಲಿಸಲು ಶೀಘ್ರದಲ್ಲೇ ಇ-ಫೈಲಿಂಗ್ ಪೋರ್ಟಲ್ ತೆರೆಯುತ್ತದೆ. ಇದರಿಂದ ತೆರಿಗೆದಾರರು ಬೇಗನೆ ಫೈಲ್ ಮಾಡಲು ಪ್ರೋತ್ಸಾಹಿಸಲಾಗುತ್ತದೆ.
ಗ್ರಾಹಕರಿಗೆ ಸಾಲದ ಬಡ್ಡಿ ಇಳಿಕೆಯ ಖುಷಿ, ವಾಹನ ತೆರಿಗೆ ಏರಿಕೆಯ ಬಿಸಿ
ಠೇವಣಿ, ಸಾಲದ ಬಡ್ಡಿ ಇಳಿಕೆ : ಆರ್‌ಬಿಐ ಇತ್ತೀಚೆಗೆ ರೆಪೋದರವನ್ನು ಶೇ.0.25 ಇಳಿಸಿತ್ತು. ಪರಿಣಾಮ ಬ್ಯಾಂಕ್‌ಗಳು ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿವೆ. ಇದೂ ಕೂಡ ಮೇ 1ರಿಂದ ಜಾರಿಗೆ ಬಂದಿದೆ.
ವಾಣಿಜ್ಯ ವಾಹನ ಬೆಲೆ ಏರಿಕೆ : 10 ಲಕ್ಷ ರೂಪಾಯಿ ಒಳಗಿನ ವಾಣಿಜ್ಯ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇ.5ರ ಜೀವಿತಾವಧಿ ತೆರಿಗೆ ಹಾಕಿದೆ. 25 ಲಕ್ಷ ರೂಗಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್ ವಾಣಿಜ್ಯ ವಾಹನಕ್ಕೆ ಶೇ.10ರಷ್ಟು ತೆರಿಗೆ ಇರಲಿದೆ.
ವಿಮಾನ ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಬಿಲ್ ಪ್ರಕ್ರಿಯೆ
ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು ಮೇ 1ರಿಂದ ನಿರ್ದಿಷ್ಟ ವಿಮಾನ ನಿಲ್ದಾಣಗಳಲ್ಲಿ ವಿಮಾನ ಪ್ರಯಾಣಿಕರ ವೈಯಕ್ತಿಕ ಸಾಗಣೆಯ ಮೂಲಕ ರತ್ನಗಳು ಮತ್ತು ಆಭರಣಗಳು ಅಥವಾ ಆಭರಣಗಳ ಮೂಲ ಮಾದರಿಗಳಿಗೆ ಸಂಬಂಧಿಸಿದ ಸಾಗಾಟಕ್ಕೆ ಎಲೆಕ್ಟ್ರಾನಿಕ್ ಬಿಲ್ ಪ್ರಕ್ರಿಯೆ ಪರಿಚಯಿಸಿದೆ.
ವೈಯಕ್ತಿಕ ಸಾಗಣೆ ಮೂಲಕ ರಫ್ತು ಅಥವಾ ಆಮದು ವಿದೇಶಿ ವ್ಯಾಪಾರ ನೀತಿ(ಎಫ್‌ಟಿಪಿ) 2023 ಮತ್ತು ಕಾರ್ಯವಿಧಾನಗಳ ಕೈಪಿಡಿ(ಎಚ್‌ಬಿಪಿ), 2023ರ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಭಾರತೀಯ ರೈಲ್ವೆಯ ಪ್ರಮುಖ ನವೀಕರಣಗಳು
ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿ: ದೂರದ ಊರುಗಳಿಗೆ ತೆರಳಲು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಹಿಂದೆ 120 ದಿನಗಳಿಗೆ ಮೊದಲೇ ಮುಂಗಡ ಟಿಕೆಟ್ ಕಾಯ್ದಿರಿಸಬೇಕಾಗಿತ್ತು. ಭಾರತೀಯ ರೈಲ್ವೆ ಇದೀಗ ಮುಂಗಡ ಬುಕಿಂಗ್ ಅವಧಿಯನ್ನು 60 ದಿನಗಳಿಗೆ ಇಳಿಸಿದೆ.
ವೇಯಿಟಿಂಗ್ ಲಿಸ್ಟ್ ಟಿಕೆಟ್‌ಗಳು: ವೇಯಿಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಇನ್ನುಮುಂದೆ ಸ್ಲೀಪರ್ ಅಥವಾ ಎಸಿ ಬೋಗಿಗಳನ್ನು ಹತ್ತಲು ಅವಕಾಶವಿರುವುದಿಲ್ಲ. ಅಂತಹ ಪ್ರಯಾಣಿಕರನ್ನು ಸಾಮಾನ್ಯ ವರ್ಗಕ್ಕೆ ಸೀಮಿತಗೊಳಿಸಲಾಗುವುದು. ಮಾನ್ಯ ಟಿಕೆಟ್ ಹೊಂದಿರುವ ಸಾಮಾನ್ಯ ವರ್ಗದ ಪ್ರಯಾಣಿಕರು ಮಾತ್ರ ಹತ್ತಬಹುದು ಮತ್ತು ಟಿಕೆಟ್ ರದ್ದತಿ ಮರುಪಾವತಿಯನ್ನು ಈಗ ಕೇವಲ ಎರಡು ದಿನಗಳಲ್ಲಿ ಪ್ರಕ್ರಿಯೆಗೊಳಿಸಲಾಗುವುದು ಎನ್ನಲಾಗಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ
ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಮತ್ತೆ ಏರಿಕೆಯಾಗಿದ್ದು, 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ ₹853ಕ್ಕೆ ಏರಿಕೆಯಾಗಿದೆ. ಸರ್ಕಾರವು ಜಾಗತಿಕ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ. ಆದರೆ ಇತ್ತೀಚಿನ ಏರಿಕೆಯನ್ನು ಸರಿದೂಗಿಸಲು ಯಾವುದೇ ಸಬ್ಸಿಡಿಗಳನ್ನು ಘೋಷಿಸಿಲ್ಲ.
ವಾಣಿಜ್ಯ ಅನಿಲ ಸಿಲಿಂಡರ್ ದರ ಇಳಿಕೆ
19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ದರವನ್ನು ₹14.5ರಷ್ಟು ಕಡಿಮೆ ಮಾಡಲಾಗಿದೆ. ಬೆಲೆ ಇಳಿಕೆಯ ನಂತರ, ಈ ಸಿಲಿಂಡರ್ ಮೇ 1 ರಿಂದ ದೆಹಲಿಯಲ್ಲಿ ₹1747.50ಗೆ ದೊರೆಯುತ್ತದೆ. ಈ ಮೊದಲು ಇದಕ್ಕೆ ₹1762ನ್ನು ಪಾವತಿಸಬೇಕಾಗಿತ್ತು. ಕೊಲ್ಕತ್ತಾದಲ್ಲಿ, ಸಿಲಿಂಡರ್ ಬೆಲೆ ₹17ರಷ್ಟು ಇಳಿಕೆಯಾಗಿದ್ದು, ₹1851.50ಗೆ ತಲುಪಿದೆ.
ಎಟಿಎಂ ಹಿಂಪಡೆಯುವಿಕೆ ಶುಲ್ಕಗಳು | ಉಚಿತ ಮಿತಿಗಳ ನಂತರ ಪ್ರತಿ ವಹಿವಾಟಿಗೆ ₹23 ಹೆಚ್ಚಳ. ಸ್ವಂತ ಬ್ಯಾಂಕ್ ಎಟಿಎಂಗಳಲ್ಲಿ 5 ಉಚಿತ ವಹಿವಾಟುಗಳು, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್ ಎಟಿಎಂಗಳಲ್ಲಿ 3, ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ 5 ವಹಿವಾಟು ಉಚಿತ. |
ಆರ್‌ಆರ್‌ಬಿ ವಿಲೀನ | 11 ರಾಜ್ಯಗಳಲ್ಲಿ 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಒಂದೇ ಘಟಕವಾಗಿ ವಿಲೀನಗೊಂಡವು, ಒಟ್ಟು RRB ಗಳ ಸಂಖ್ಯೆ 43 ರಿಂದ 28ಕ್ಕೆ ಇಳಿಕೆಯಾಗಿದೆ. |
FD ಬಡ್ಡಿ ದರಗಳು | ಶ್ರೀರಾಮ್ ಫೈನಾನ್ಸ್ 8.40% ವರೆಗೆ ಎಫ್‌ಡಿ ಬಡ್ಡಿ ನೀಡುತ್ತದೆ; ಹಿರಿಯ ನಾಗರಿಕರಿಗೆ ಹೆಚ್ಚುವರಿ 0.50%, ಮಹಿಳಾ ಠೇವಣಿದಾರರು ಹೆಚ್ಚುವರಿ 0.10% ಪಡೆಯುತ್ತಾರೆ. |
ಉಳಿತಾಯ ಖಾತೆ ಬಡ್ಡಿ | RBL ಬ್ಯಾಂಕ್ ಉಳಿತಾಯ ಖಾತೆಯ ಬ್ಯಾಲೆನ್ಸ್ ಅವಲಂಬಿಸಿ 7% ವರೆಗೆ ಮಾಸಿಕ ಬಡ್ಡಿಯನ್ನು ಜಮಾ ಮಾಡುತ್ತದೆ. |
ರೈಲ್ವೆ ಬುಕಿಂಗ್ ನಿಯಮಗಳು | ಮುಂಗಡ ಟಿಕೆಟ್ ಬುಕಿಂಗ್ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ; ವೇಯ್ಟ್‌ಲಿಸ್ಟ್ ಮಾಡಿದ ಪ್ರಯಾಣಿಕರಿಗೆ ಎಸಿ ಅಥವಾ ಸ್ಲೀಪರ್ ಕೋಚ್‌ಗಳಲ್ಲಿ ಅವಕಾಶವಿಲ್ಲ. |
ಎಲ್‌ಪಿಜಿ ಸಿಲಿಂಡರ್ ಬೆಲೆಗಳು | 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹50 ಏರಿಕೆಯಾಗಿದ್ದು, ಈಗ ದೆಹಲಿಯಲ್ಲಿ ₹853ಕ್ಕೆ ತಲುಪಿದೆ. |
ಐಟಿಆರ್ ಫಾರ್ಮ್‌ಗಳನ್ನು ಸೂಚಿಸಲಾಗಿದೆ | 2025-26 ನೇ ಸಾಲಿನ ಐಟಿಆರ್-1 ಮತ್ತು ಐಟಿಆರ್-4 ಫಾರ್ಮ್‌ಗಳನ್ನು ಪ್ರಕಟಿಸಲಾಗಿದೆ. ಈ ಫಾರ್ಮ್‌ಗಳ ಅಡಿಯಲ್ಲಿ ₹1.25 ಲಕ್ಷದವರೆಗಿನ ದೀರ್ಘಾವಧಿಯ ಬಂಡವಾಳ ಲಾಭವನ್ನು ಹೊಂದಿರುವ ತೆರಿಗೆದಾರರು ಎಲ್‌ಟಿಸಿಜಿಯನ್ನು ಬಳಸಬಹುದು. |
ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳದಿಂಗಾಗುವ ಪರಿಣಾಮ: ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿರುವ ಬಹುತೇಕ ಹಿಂದುಳಿದ, ಬಡ ಜನರು ಈವರೆಗೆ ಸ್ಮಾರ್ಟ್ ಫೋನ್‌ಗಳನ್ನು ಕಂಡಿಲ್ಲ. ಇದ್ದವರೂ ಕೂಡ ಆನ್‌ಲೈನ್ ಪೇಮೆಂಟ್ ಮಾಡುವ ಬಗೆಯನ್ನು ತಿಳಿದಿರುವುದಿಲ್ಲ. ಅಂಥವರು ಅವರಿವರಿಂದ ಎಟಿಎಂ ಮೂಲಕ ಹಣ ತೆಗೆಸಿಕೊಳ್ಳುತ್ತಾರೆ. ಎಷ್ಟು ಬಾರಿ ವಿತ್‌ಡ್ರಾ ಮಾಡಿಕೊಳ್ಳಬೇಕೆಂಬುದೂ ಕೂಡ ಗೊತ್ತಿರುವುದಿಲ್ಲ. ಹೀಗಿರುವಾಗ ಎಟಿಎಂ ವಹಿವಾಟಿನ ಮಿತಿಯ ಬಳಿಕ ಶುಲ್ಕ ಕಡಿತವಾಗುವುದು ಜನಸಾಮಾನ್ಯರಿಗೆ ಹೊರೆಯಾಗುತ್ತದೆ.
ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ: ಹಳ್ಳಿಗಾಡಿನ ಪ್ರದೇಶಗಳಲ್ಲಿ ಈಗಾಗಲೇ ಬಹುತೇಕರು ಸಿಲಿಂಡರ್‌ಗಳನ್ನು ಮೂಲೆಗೆ ಸೇರಿಸಿ ಸೌದೆ ಒಲೆಗೆ ಮರಳಿದ್ದಾರೆ. ಈ ಪರಿ ಹಣದುಬ್ಬರಗಳ ನಡುವೆ, ಕೆಲಸಕಾರ್ಯಗಳಿಲ್ಲದೆ, ಬೆಳೆಗಳಿಗೆ ಸರಿಯಾದ ಬೆಲೆಯಿಲ್ಲದೆ ಹಾಗೂ ಅಕಾಲಿಕ ಮಳೆಯಿಂದ ಬಂದ ಬೆಳೆಗಳನ್ನೂ ಕಳೆದುಕೊಂಡು ಕಂಗಾಲಾಗಿರುವ ಜನಸಾಮಾನ್ಯರಿಗೆ ಸಿಲಿಂಡರ್ ಬೆಲೆ ಏರಿಕೆ ಹೊಡೆತ ಉಂಟುಮಾಡುತ್ತದೆ. ಅಳಿದುಳಿದ ಅಲ್ಲೊಬ್ಬರು ಇಲ್ಲೊಬ್ಬರು ಬಳಸುತ್ತಿರುವ ಸಿಲಿಂಡರ್‌ಗಳನ್ನು ಮೂಲೆಗೆ ದೂಡಿದರೂ ಆಶ್ಚರ್ಯವೇನಿಲ್ಲ.
ವಾಣಿಜ್ಯ ವಾಹನಗಳಿಗೆ ಶೇಕಡಾ 10ರಷ್ಟು ತೆರಿಗೆಯ ಪರಿಣಾಮ
- ವಾಹನ ಮಾಲೀಕರ ಮೇಲೆ ಭಾರ: ಅತಿರಿಕ್ತ ತೆರಿಗೆ ವಾಣಿಜ್ಯ ವಾಹನಗಳ ಮಾಲೀಕರಿಗೆ ಆರ್ಥಿಕ ಭಾರವಾಗಬಹುದು. ಇದರಿಂದ ಸಂಚಾರದ ವ್ಯಯ(operating cost) ಹೆಚ್ಚಾಗುತ್ತದೆ.
- ಸಾರಿಗೆ ದರಗಳ ಮೇಲಿನ ಪ್ರಭಾವ: ವಾಹನ ಚಾಲಕರು ಅಥವಾ ಕಂಪನಿಗಳು ಹೆಚ್ಚಿದ ತೆರಿಗೆಯನ್ನು ಸರಕುಗಳು ಅಥವಾ ಪ್ರಯಾಣಿಕರ ಮೇಲೆಗೆ ಹಾಕಬಹುದು. ಇದರ ಪರಿಣಾಮವಾಗಿ ಸಾರಿಗೆ ದರಗಳು ಹೆಚ್ಚಾಗಬಹುದು.
- ವ್ಯವಹಾರದ ಲಾಭದ ಮೇಲೆ ಪರಿಣಾಮ: ಲಘು ಮತ್ತು ಮಧ್ಯಮ ವ್ಯಾಪಾರಿಗಳಿಗೆ ಹೆಚ್ಚಿದ ದರದಿಂದ ಲಾಭಾಂಶ ಕಡಿಮೆಯಾಗಬಹುದು. ಇವುಗಳಲ್ಲಿ ತೀವ್ರವಾದ ಹೊರೆ ಬೀಳುವ ಸಾಧ್ಯತೆ ಇದೆ.
- ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ: ಹೆಚ್ಚಿದ ತೆರಿಗೆ ತಪ್ಪಿಸಲು ಕೆಲವರು ಅಕ್ರಮ ಮಾರ್ಗಗಳಿಗೆ ತಿರುಗುವ ಸಾಧ್ಯತೆ ಇದೆ. ನಕಲಿ ದಾಖಲೆಗಳು, ಗಡಿಪಾರು ತೆರಿಗೆ ತಪ್ಪಿಸುವುದು ಮುಂತಾದವುಗಳು ಹೆಚ್ಚಬಹುದು.
- ಸರ್ಕಾರದ ಆದಾಯದ ಹೆಚ್ಚಳ: ಈ ತೆರಿಗೆಯಿಂದ ಸರ್ಕಾರದ ಆದಾಯ ಹೆಚ್ಚಾಗಿ, ಅದು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲು ಅನುಕೂಲವಾಗಬಹುದು.