ಭಾರತದ ಆರ್ಥಿಕತೆಯು ಬೆಳೆಯುತ್ತಿದೆ, ಆದರೆ ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಮತ್ತು ನಿರುದ್ಯೋಗದ ಸವಾಲು ಮುಂದುವರೆದಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಸಲಹೆ ಏನೆಂದರೆ ನಿಜವಾದ ಶಕ್ತಿಯು ಜನರೊಂದಿಗೆ ಸಂಪರ್ಕ ಹೊಂದುವುದು. ಅವರು ಹೇಳುವುದನ್ನು ಆಳವಾಗಿ ಆಲಿಸುವುದು ಮತ್ತು ದಯೆ ತೋರುವುದರಿಂದ ಬರುತ್ತದೆ” ಎಂದು ಹೇಳಿದರು.
ಸಂವಾದದ ವೇಳೆ ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್, “ನೀವು ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಆ ಆರ್ಥಿಕ ಅಭಿವೃದ್ಧಿ ಯಾರ ಹಿತಾಸಕ್ತಿಯಲ್ಲಿದೆ ಎಂಬ ಪ್ರಶ್ನೆಯನ್ನು ನೀವು ಕೇಳಬೇಕು” ಎಂದರು.
“ಆ ಬೆಳವಣಿಗೆಯ ಸ್ವರೂಪ ಏನು ಮತ್ತು ಅದರಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಕೇಳಬೇಕಾದ ಪ್ರಶ್ನೆಯಾಗಿದೆ. ಭಾರತದಲ್ಲಿನ ಬೆಳವಣಿಗೆಯ ಅಂಕಿ ಅಂಶದ ಪಕ್ಕದಲ್ಲಿ, ನೀವು ಭಾರತದಲ್ಲಿ ನಿರುದ್ಯೋಗದ ಅಂಕಿಅಂಶವನ್ನು ಹೊಂದಿದ್ದೀರಿ. ಆದ್ದರಿಂದ ಭಾರತವು ಬೆಳೆಯುತ್ತಿದೆ, ಆದರೆ ಅದು ಕೆಲವೇ ಜನರ ಕಡೆಗೆ ಸಂಪತ್ತನ್ನು ಬೃಹತ್ ಪ್ರಮಾಣದಲ್ಲಿ ಕೇಂದ್ರೀಕರಿಸುವ ಮೂಲಕ ಬೆಳೆಯುತ್ತಿದೆ” ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
“ಭಾರತದಲ್ಲಿ ನಿಜವಾದ ಸವಾಲು ಎಂದರೆ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವಾಗುವ ಉತ್ಪಾದನಾ ಆರ್ಥಿಕತೆಯನ್ನು ನಾವು ಹೇಗೆ ಸ್ಥಾಪಿಸುತ್ತೇವೆ ಎಂಬುದಾಗಿದೆ. ನಮ್ಮಲ್ಲಿ ಅದಾನಿ ಇದ್ದಾರೆ, ಅವರು ಪ್ರಧಾನ ಮಂತ್ರಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಅವರು ನಮ್ಮ ಎಲ್ಲ ಬಂದರುಗಳು, ವಿಮಾನ ನಿಲ್ದಾಣಗಳು, ನಮ್ಮ ಮೂಲಸೌಕರ್ಯಗಳನ್ನು ಹೊಂದಿದ್ದಾರೆ. ಇದರಿಂದ ಕೆಲವೇ ಜನಗಳ ಬಳಿಯಿರುವ ಸಂಪತ್ತು ಎಲ್ಲರಿಗೂ ಹೇಗೆ ಹಂಚಿಕೆಯಾಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ” ಎಂದರು.
“ನಿಮಗೆ ನ್ಯಾಯಯುತವಾದ ಮಾಧ್ಯಮ, ನ್ಯಾಯಯುತ ಕಾನೂನು ವ್ಯವಸ್ಥೆ, ನ್ಯಾಯಯುತ ಚುನಾವಣಾ ಆಯೋಗ, ಹಣಕಾಸು ಸಂಸ್ಥೆಗಳು ಬೇಕು. ಆದರೆ ಇದ್ಯಾವುದು ಸಾಧ್ಯವಾಗುತ್ತಿಲ್ಲ. ನಮ್ಮ ಸಂಪೂರ್ಣ ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲಾಗುತ್ತಿದೆ. ಇದರಿಂದ ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಪ್ರಜಾಪ್ರಭುತ್ವದ ಕನಸು ನನಸಾಗಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“ದೇಶದಲ್ಲಿ ಜಾತಿ ಎಂಬುದು ನಿಜವಾದ ಸಮಸ್ಯೆಯಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತವನ್ನು ರಾಜ್ಯಗಳ ಒಕ್ಕೂಟವೆಂದು ಪರಿಗಣಿಸದೆ ಒಂದು ಸಿದ್ಧಾಂತ, ಒಂದು ಧರ್ಮ, ಒಂದು ಭಾಷೆ ಹೊಂದಿರುವ ರಾಷ್ಟ್ರವೆಂದು ಪರಿಗಣಿಸಿದೆ. ಮಣಿಪುರ, ಕಾಶ್ಮೀರ ಮುಂತಾದ ಕಡೆ ನಡೆಯುತ್ತಿರುವ ವಿದ್ಯಮಾನವನ್ನು ನೀವು ಗಮನಿಸಬಹುದು” ಎಂದು ಹೇಳಿದರು.