ಕೃಷಿ ಪ್ರಧಾನವಾದ ಭಾರತ ವಿಶ್ವದಲ್ಲೇ ಎರಡನೇ ಅತಿದೊಡ್ಡ ಆಲೂಗಡ್ಡೆ ಉತ್ಪಾದಕ ರಾಷ್ಟ್ರ ಎಂಬ ಖ್ಯಾತಿ ಪಡೆದಿದೆ. ಈಗ ಅದರ ಮೌಲ್ಯವರ್ಧಿತ ಆಹಾರೋತ್ಪನ್ನವಾಗಿರುವ ‘ಫ್ರೆಂಚ್ ಫ್ರೈಸ್’ ಉತ್ಪಾದನೆ ಮತ್ತು ರಫ್ತು ವಲಯದಲ್ಲಿ ಸಹ ಪ್ರಸಿದ್ಧಿ ಪಡೆದಿದ್ದು, ಜಗತ್ತಿನ 3ನೇ ರಾಷ್ಟ್ರವಾಗಿ ಹೊರಹೊಮ್ಮಿದೆ.
ಫ್ರಾನ್ಸ್ ಮತ್ತು ಬೆಲ್ಜಿಯಂ ಮೂಲದ ‘ಫ್ರೆಂಚ್ ಫ್ರೈಸ್’ ವಿದೇಶಿಗರಿಗೆ ಪ್ರಿಯ ತಿನಿಸಾಗಿದ್ದು, ಭಾರತದಲ್ಲಿ ಅಪರೂಪದ ಖಾದ್ಯವಾಗಿ ದುಬಾರಿ ಹೋಟೆಲ್, ರೆಸ್ಟೋರೆಂಟ್, ಪಬ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಅಂತಾರಾಷ್ಟ್ರೀಯ ಫಾಸ್ಟ್ ಫುಡ್ ಸರಪಳಿಯಲ್ಲಿದ್ದ ಫ್ರೆಂಚ್ ಫ್ರೈಸ್ ಅನ್ನು ಯುಎಸ್, ಯುರೋಪ್‌ಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ಫ್ರೆಂಚ್ ಫ್ರೈನ ಪ್ರಮುಖ ರಫ್ತು ರಾಷ್ಟ್ರವಾಗಿ ಬೆಳೆದಿದೆ.
ವಿದೇಶಿ ಮೂಲದ ಫ್ರೆಂಚ್ ಫ್ರೈಸ್ ಈಗ ಅದೇ ವಿದೇಶಗಳಿಗೆ ಭಾರತದ ಪ್ರಮುಖ ರಫ್ತು ಸರಕಾಗಿದೆ. ಜಾಗತಿಕ ಫ್ರೋಜನ್ ಫ್ರೆಂಚ್ ಫ್ರೈ (ಎಫ್‌ಎಫ್) ಮಾರುಕಟ್ಟೆಯಲ್ಲಿ ಪಾರುಪತ್ಯ ಪ್ರದರ್ಶಿಸುತ್ತಿದೆ. ಎರಡು ದಶಕಗಳ ಹಿಂದೆ ಫ್ರೆಂಚ್ ಫ್ರೈ ಆಮದು ಮೇಲೆ ಅವಲಂಬಿತವಾಗಿದ್ದ ಭಾರತ ಈಗ ಪ್ರಮುಖ ರಫ್ತುದಾರ ಆಗಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಕ್ಷಾಂತರ ಟನ್ ಫ್ರೆಂಚ್ ಫ್ರೈಸ್ ಪೂರೈಸಿ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಭರಿಸುವಷ್ಟರ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ಗಟ್ಟಿಭದ್ರ ಸ್ಥಾನ ಪಡೆದಿದೆ ಭಾರತ.
ಅಮೆರಿಕ ಮತ್ತು ಬೆಲ್ಜಿಯಂ ನಂತರ ಅತಿಹೆ ಚ್ಚು ಫ್ರೆಂಚ್ ಫ್ರೈ ರಫ್ತಾಗುವುದು ಭಾರತದಿಂದಲೇ. ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ ಮತ್ತು ಪಶ್ಚಿಮ ಏಷ್ಯಾದ ಹಲವು ದೇಶಗಳು ಭಾರತದಿಂದ ಫ್ರೆಂಚ್ ಫ್ರೈ ಸರಬರಾಜು ಪಡೆಯುತ್ತವೆ. ಉತ್ಪಾದನಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ ಆಗಿರುವ ಭಾರತ, ವಿಶ್ವದ ದೊಡ್ಡಣ್ಣನಿಗೂ ಪ್ರಬಲ ಸವಾಲಾಗಿ ಬೆಳೆಯುತ್ತಿದೆ.
ಆಮದುಗಳಿಂದ ರಪ್ತು ಮಟ್ಟಕ್ಕೆ ಬೆಳೆದ ಭಾರತ
1990ರ ದಶಕದ ಆರಂಭದಲ್ಲಿ ಭಾರತ, ಫ್ರೆಂಚ್ ಫ್ರೈಸ್ ಗೆ ಸಂಪೂರ್ಣ ಆಮದನ್ನೇ ಅವಲಂಬಿಸಿತ್ತು. 2000ರ ದಶಕದ ಮಧ್ಯಂತರದಲ್ಲಿ ವಾರ್ಷಿಕ 5000 ಟನ್ ಗಳಷ್ಟು ಇದ್ದ ಫ್ರೆಂಚ್ ಫ್ರೈಸ್ ಆಮದು ಭಾರತದಲ್ಲೂ ಬಹು ಬೇಡಿಕೆ ಕಾಣುತ್ತಿದ್ದಂತೆ 2010-11ರಲ್ಲಿ 7,863 ಟನ್‌ಗಳಿಗೆ ತಲುಪಿತು. ಆದರೆ, ಕಳೆದ ದಶಕದಲ್ಲಿ ಭಾರತ ಫ್ರೆಂಚ್ ಫ್ರೈ ಆಮದನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಫ್ತು ಮಾಡತೊಡಗಿದೆ. ಮುಖ್ಯವಾಗಿ ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಜಪಾನ್ ಮತ್ತು ತೈವಾನ್‌ಗೆ ಭಾರತ ನೆಚ್ಚಿನ ರಫ್ತುದಾರ.
ಸಾವಿರಾರು ಕೋಟಿ ಮೌಲ್ಯದ ಖಾದ್ಯ ರಫ್ತು
2023-24ರಲ್ಲಿ 1,478.73 ಕೋಟಿ ರೂ. ಮೌಲ್ಯದ 135,877 ಟನ್ ಗಳಷ್ಟು ಫ್ರೆಂಚ್ ಫ್ರೈಗಳನ್ನು ರಫ್ತು ಮಾಡಿದೆ. 2024ರ ಏಪ್ರಿಲ್ ಮತ್ತು ಅಕ್ಟೋಬರ್ ಮಧ್ಯೆ ಏಳೇ ತಿಂಗಳಲ್ಲಿ 1056.92 ಕೋಟಿ ಮೌಲ್ಯದ 106,506 ಟನ್ ಪ್ರಮದಲ್ಲಿ ರಫ್ತು ವಿಸ್ತರಣೆ ಕಂಡಿದೆ. ಈ ಮೂಲಕ ದೇಶದ ಸಂಸ್ಕರಿಸಿದ ಆಹಾರ ಉದ್ಯಮದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ಫ್ರೆಂಚ್ ಫ್ರೈ ಬಳಕೆ ವಾರ್ಷಿಕವಾಗಿ 1 ಲಕ್ಷ ಟನ್ ಎಂಬ ಅಂದಾಜಿದ್ದು, ಇದರ ಮೌಲ್ಯ 1,400 ಕೋಟಿ ಆಗಿದೆ.
ಫ್ರೆಂಚ್ ಫ್ರೈಗೆ ಬಳಸಲಾಗುವ ಪ್ರಮುಖ ಪ್ರಭೇದಗಳು
ಸಂತಾನ, ಇನ್ನೋವೇಟರ್, ಕೆನ್ನೆಬೆಕ್, ಕುಫ್ರಿ ಫ್ರೈಸೋನಾ ಮತ್ತು ಕುಫ್ರಿ ಫ್ರಯೋಎಂ ಸೇರಿವೆ. ಸೂಕ್ತ ಕೃಷಿ-ಹವಾಮಾನ ಹೊಂದಿರುವ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಸಂಸ್ಕರಣಾ ದರ್ಜೆ ಆಲೂಗಡ್ಡೆ ಫ್ರೆಂಚ್ ಫ್ರೈ ಉತ್ಪಾದನೆಯಲ್ಲಿ ಬಳಕೆಯಾಗುತ್ತಿದೆ. ಒಂದು ಕಿಲೋಗ್ರಾಂ ಫ್ರೈಗಳನ್ನು ಉತ್ಪಾದಿಸಲು 1.8 ಕಿಲೋಗ್ರಾಂಗಳಷ್ಟು ಆಲೂಗಡ್ಡೆ ಅಗತ್ಯವಿದೆ ಎಂದು ವರದಿ ಹೇಳಿದೆ.