ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಹೈದರಾಬಾದ್ ಮೂಲದ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ಕಂಪನಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ‘ವಿಕ್ರಮ್-1′ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
‘ಮಿಷನ್ ಆಗಮನ’ (Mission Aagaman) ಎಂದು ಹೆಸರಿಸಲಾದ ಈ ಪರೀಕ್ಷಾರ್ಥ ಹಾರಾಟವು ಮಧ್ಯಾಹ್ನ 12:05ಕ್ಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ವಾಸ್ತವವಾಗಿ ಈ ಉಡಾವಣೆಯು ಬೆಳಗ್ಗೆ 11:30ಕ್ಕೆ ನಿಗದಿಯಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದಾಗಿ ಕೆಲಕಾಲ ತಡೆಹಿಡಿಯಲಾಗಿದ್ದ ಉಡಾವಣಾ ಪ್ರಕ್ರಿಯೆಯನ್ನು ನಂತರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ರಾಕೆಟ್ ಬಹುದಿನಗಳ ತಾಂತ್ರಿಕ ಪ್ರದರ್ಶನ ಪೇಲೋಡ್‌ಗಳನ್ನು ಹೊತ್ತೊಯ್ದಿದೆ.
ಈ ರಾಕೆಟ್, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ “ವಂದೇ ಮಾತರಂ” ಎಂದು ಮುದ್ರಿತವಾದ ವಿಶೇಷ ಕಾರ್ಡ್ ಅನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿದೆ. ಇದರೊಂದಿಗೆ ಪ್ರಪಂಚದಾದ್ಯಂತದ ಜನರ ಹಾರೈಕೆಗಳನ್ನೊಳಗೊಂಡ ನೂರಾರು ಕಾರ್ಡ್‌ಗಳನ್ನೂ ಈ ನೌಕೆ ಹೊತ್ತೊಯ್ದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭದ್ರತಾ ನೆಪ: ಫೋನ್ ಜಾಮರ್, ಬಿಳಿ ಪರದೆ ಬಳಸಿ ಪೊಲೀಸರು ಸೋನಮ್‌ರನ್ನು ಹೇಗೆ ಹೊತ್ತೊಯ್ದರು
ವಿಕ್ರಮ್-1ನ ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಅವರು, “ಇದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಐತಿಹಾಸಿಕ ಹೊಸ ಮೈಲಿಗಲ್ಲು. ಇದು ಭಾರತದ ಯುವಜನತೆಯ ಪ್ರತಿಭೆ ಮತ್ತು ಉದ್ಯಮಶೀಲತೆಯ ಮನೋಭಾವದ ಪ್ರತಿಬಿಂಬವಾಗಿದೆ” ಎಂದು ಬಣ್ಣಿಸಿದ್ದಾರೆ.
ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ಈ ವಿಕ್ರಮ್-1 ರಾಕೆಟ್, ಅತ್ಯಂತ ವೇಗವಾಗಿ ಮತ್ತು ಬೇಡಿಕೆಗೆ ತಕ್ಕಂತೆ (on-demand) ಉಡಾವಣಾ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ಭಾರತದ ಮೊದಲ ಖಾಸಗಿ ನಿರ್ಮಿತ ಆರ್ಬಿಟಲ್ ಲಾಂಚ್ ವೆಹಿಕಲ್ ಆಗಿದೆ.





