ಭಾರತದ ಜನಸಂಖ್ಯೆಯು 2025ರ ಅಂತ್ಯದ ವೇಳೆಗೆ 146 ಕೋಟಿಯನ್ನು ತಲುಪಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವರದಿ ಹೇಳಿದೆ. ಅಲ್ಲದೆ, ದೇಶದಲ್ಲಿ ಒಟ್ಟು ಫಲವತ್ತತ್ತೆ ದರವು ಕುಸಿತ ಕಂಡಿದೆ ಎಂದೂ ಹೇಳಿದೆ.
ವಿಶ್ವಸಂಸ್ಥೆ ಯುಎನ್‌ಎಫ್‌ಪಿಎ 2025ರ ವಿಶ್ವ ಜನಸಂಖ್ಯಾ ಸ್ಥಿತಿ ವರದಿ ‘ದಿ ರಿಯಲ್ ಫರ್ಟಿಲಿಟಿ ಕ್ರೈಸಿಸ್’, “ಫಲವತ್ತತೆ ಕಡಿಮೆಯಾಗುವ ಕುರಿತು ಆತಂಕಪಡುವ ಬದಲು ಸಂತಾನೋತ್ಪತ್ತಿ ಗುರಿಗಳನ್ನು ಪರಿಹರಿಸುವುದಕ್ಕಾಗಿ ಹೆಚ್ಚು ಗಮನಹರಿಸಬೇಕು. ಸಂತಾನೋತ್ಪತ್ತಿ ವಿಚಾರಗಳಾದ ಲೈಂಗಿಕತೆ, ಗರ್ಭ ನಿರೋಧಕತೆ ಹಾಗೂ ಕುಟುಂಬವನ್ನು ಪ್ರಾರಂಭಿಸುವ ವಿಚಾರವಾಗಿ ಮುಕ್ತ ಸಂವಾದ ಮತ್ತು ಜಾಗೃತಿ ಮೂಡಿಸಬೇಕು” ಎಂದು ಹೇಳಿದೆ.
ಭಾರತದ ಒಟ್ಟು ಫಲವತ್ತತೆ ದರವು ಪ್ರತಿ ಮಹಿಳೆಗೆ 1.9 ಇದೆ. ಈ ಹಿಂದೆ, ಇದು 2.1ರಷ್ಟು ಇತ್ತು. ತಲೆಮಾರಿನಿಂದ ತಲೆಮಾರಿಗೆ ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಬೇಕಿರುವಷ್ಟು ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕಡಿಮೆಯಾಗುತ್ತಿದೆ ಎಂದು ವರದಿ ತಿಳಿಸಿದೆ.
1960ರಲ್ಲಿ ಭಾರತದಲ್ಲಿ ಜನಸಂಖ್ಯೆ ಸುಮಾರು 43.6 ಕೋಟಿ ಇತ್ತು. ಆಗ ಮಹಿಳೆಯರು ಸರಾಸರಿ ಸುಮಾರು 6 ಮಕ್ಕಳನ್ನು ಹೊಂದುತ್ತಿದ್ದರು. ಆ ನಂತರದ ದಶಕಗಳಲ್ಲಿ ಶೈಕ್ಷಣಿಕ ಸಾಧನೆ ಗಮನಾರ್ಹವಾಗಿ ಸುಧಾರಿಸಿದೆ. ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾದರು. ಅದಕ್ಕಾಗಿ, ಗಟ್ಟಿ ಧ್ವನಿ ಎತ್ತಿದರು. ಶಿಕ್ಷಣದಲ್ಲಿ ಸಾಧನೆ ಮತ್ತು ನಿರ್ಧರ ತೆಗೆದುಕೊಳ್ಳವಲ್ಲಿನ ದೃಢತೆಯ ಪರಿಣಾಮವಾಗಿ ಈಗ ಓರ್ವ ಮಹಿಳೆ ಸರಾಸರಿ ಇಬ್ಬರು ಮಕ್ಕಳನ್ನು ಹೊಂದುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಆದಾಗ್ಯೂ, 2065ರ ವೇಳೆಗೆ ಭಾರತದ ಜನಸಂಖ್ಯೆಯು 170 ಕೋಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ.
ಈ ವರದಿ ಓದಿದ್ದೀರಾ?: ಜಗತ್ತಿನಲ್ಲಿ ಬದಲಾವಣೆ ಇಂದಲ್ಲವಾದರೆ ಮುಂದೆಂದು?
ಭಾರತದಲ್ಲಿ ಸದ್ಯ ಯುವಶಕ್ತಿಯು ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಪೈಕಿ, 0–14ರ ವಯಸ್ಸಿನವರ ಸಂಖ್ಯೆ 24% ರಷ್ಟಿದೆ. 10ರಿಂದ 19ರ ವಯಸ್ಸಿನವರ ಸಂಖ್ಯೆ 17% ಹಾಗೂ 10ರಿಂದ 24 ವರ್ಷ ವಯಸ್ಸಿನವರ ಸಂಖ್ಯೆ 26%ರಷ್ಟಿದೆ. ಅದರಲ್ಲೂ ದುಡಿಯವು ವರ್ಗ 15ರಿಂದ 64ರ ವಯೋಮಾನದವರ ಸಂಖ್ಯೆ 68%ರಷ್ಟಿದೆ. 65ಕ್ಕಿಂತ ಮೇಲಿನ ವಯಸ್ಸಿನ ಸಂಖ್ಯೆ 7% ಜನರಿದ್ದಾರೆ ಎಂದು ವರದಿ ವಿವರಿಸಿದೆ.
ಇನ್ನು, 2025ರಲ್ಲಿ ಭಾರತೀಯರ ಜೀವಿತಾವಧಿಯು ಪುರುಷರಲ್ಲಿ ಸರಾಸರಿ 71 ವರ್ಷ ಮತ್ತು ಮಹಿಳೆಯರಲ್ಲಿ 74 ವರ್ಷ ಇರಲಿದೆ ಎಂದು ವರದಿ ಹೇಳಿದೆ.