ಪಟನಾದಿಂದ ರಾಂಚಿ ಮೂಲಕ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ರಣ ಹದ್ದು ಡಿಕ್ಕಿ ಹೊಡೆದ ಪರಿಣಾಮ ರಾಂಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
175 ಪ್ರಯಾಣಿಕರಿದ್ದ ಇಂಡಿಗೋದ ಏರ್‌ಬಸ್ ಎ320 ವಿಮಾನವು ಪಟನಾದಿಂದ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಲ್ಯಾಂಡ್ ಆಗುವುದಕ್ಕೂ ಮುನ್ನ 4,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ರಣಹದ್ದಿಗೆ ಡಿಕ್ಕಿ ಹೊಡೆದಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ; ಟೇಕಾಫ್ ಆಗದೆ ಮರಳಿದ ವಿಮಾನ
ಈ ಬಗ್ಗೆ ಮಾಹಿತಿ ನೀಡಿರುವ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದ ನಿರ್ದೇಶಕ ಆರ್ ಆರ್ ಮೌರ್ಯ, “ಇಂಡಿಗೋ ವಿಮಾನಕ್ಕೆ ರಾಂಚಿ ಬಳಿ ಪಕ್ಷಿ ಡಿಕ್ಕಿ ಹೊಡೆದಿದೆ. ಘಟನೆ ಸಂಭವಿಸಿದಾಗ ಇಂಡಿಗೋ ವಿಮಾನ ನಿಲ್ದಾಣದಿಂಂದ ಸುಮಾರು 10 ರಿಂದ 12 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ, ಸುಮಾರು 3,000 ರಿಂದ 4,000 ಅಡಿ ಎತ್ತರದಲ್ಲಿತ್ತು. ಇಂಡಿಗೋ ವಿಮಾನವು ಪಟನಾದಿಂದ ರಾಂಚಿಗೆ ಬರುತ್ತಿತ್ತು. ಪೈಲಟ್ ಇಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು” ಎಂದು ತಿಳಿಸಿದ್ದಾರೆ.
ಸದ್ಯ ವಿಮಾನ ಮುಂಭಾಗದಲ್ಲಿ ತೂತಾದ ಚಿತ್ರ ಹರಿದಾಡುತ್ತಿದೆ. ಡಿಕ್ಕಿ ಹೊಡೆದ ನಂತರ ವಿಮಾನವು ಸುಮಾರು 40 ನಿಮಿಷಗಳ ಕಾಲ ಲ್ಯಾಂಡ್ ಆಗಿರಲಿಲ್ಲ. ಪೈಲಟ್ ತುರ್ತು ಭೂಸ್ಪರ್ಶ ಮಾಡಿದರು ಎನ್ನಲಾಗಿದೆ. ಪಕ್ಷ ಡಿಕ್ಕಿ ಹೊಡೆದ ಬಳಿಕ ಪೈಲಟ್ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಲ್ಯಾಂಡ್ ಮಾಡಿದ್ದಾರೆ ಎಂದು ವರದಿಯಾಗಿದೆ. ರಣಹದ್ದು ಡಿಕ್ಕಿಯಾದ ಕಾರಣ ಉಂಟಾದ ಹಾನಿ ಬಗ್ಗೆ ಮಾಹಿತಿ ಸಿಕ್ಕಿಲ್ಲ.
