ತಮ್ಮ ಮನೆಯ ಯುವತಿ ಅಂತರ್ಜಾತಿ ವಿವಾಹವಾಗಿದ್ದನ್ನು ವಿರೋಧಿಸಿ ಕುಟುಂಬವೊಂದರ 40 ಸದಸ್ಯರು ತಲೆ ಬೋಳಿಸಿಕೊಂಡು ಶುದ್ಧೀಕರಣ ಆಚರಣೆ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ರಾಯಗಡ ಜಿಲ್ಲೆಯ ಬೈಗನಗುಡ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಯುವತಿಯೊಬ್ಬರು ಮತ್ತೊಂದು ಜಾತಿಯ ಯುವಕನೊಂದಿಗೆ ವಿವಾಹವಾಗಿದ್ದಾರೆ. ಈ ವಿವಾಹವನ್ನು ವಿರೋಧಿಸಿದ್ದ ಯುವತಿಯ ಕುಟುಂಬಸ್ತರು ಶುದ್ಧೀಕರಣದ ಹೆಸರಿನಲ್ಲಿ ತಲೆ ಬೋಳಿಸಿಕೊಂಡು, ಪೂಜೆ ಸಲ್ಲಿಸಿದ್ದಾರೆ. ಸ್ಥಳೀಯ ದೇವರ ಮುಂದೆ ಮೇಕೆ, ಕೋಳಿ ಹಾಗೂ ಹಂದಿಗಳನ್ನು ಬಲಿ ಕೊಟ್ಟಿದ್ದಾರೆ.
ಬುಡಕಟ್ಟು ಸಮುದಾಯದ ಯುವತಿ ಹಲವು ವರ್ಷಗಳಿಂದ ದಲಿತ ಯುವಕನನ್ನು ಪ್ರೀತಿಸುತ್ತಿದ್ದರು. ಆದರೆ, ಯುವಕ ಬುಡಕಟ್ಟು ಸಮುದಾಯಕ್ಕೆ ಸೇರಿಲ್ಲ ಎಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಅವರ ಪ್ರೀತಿಯನ್ನು ವಿರೋಧಿಸಿದ್ದರು. ಕುಟುಂಬದ ವಿರೋಧದ ನಡುವೆಯೂ ಪ್ರೀತಿಮಗಳು ಇತ್ತೀಚೆಗೆ ವಿವಾಹವಾಗಿದ್ದರು ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ತನ್ನದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ ಇಸ್ರೇಲ್!
ತಮ್ಮ ಪದ್ದತಿಯಲ್ಲಿ ಅಂತರ್ಜಾತಿ ವಿವಾಹಕ್ಕೆ ಅವಕಾಶ ಇಲ್ಲ ಎಂಬ ಕಾರಣಕ್ಕೆ ಯುವತಿಯು ಕುಟುಂಬವು ಶುದ್ಧೀಕರಣದ ಆಚರಣೆ ನಡೆಸಿದೆ. ತಮ್ಮ ಪದ್ಧತಿಯ ಪ್ರಕಾರ, ಬುಡಕಟ್ಟು ಜನಾಂಗದ ಹೊರಗೆ ಮಹಿಳೆ ವಿವಾಹವಾದರೆ, ಇಡೀ ಕುಟುಂಬವು ಗ್ರಾಮ ದೇವತೆಯ ಕೋಪಕ್ಕೆ ಗುರಿಯಾಗುತ್ತದೆ. ಹೀಗಾಗಿ, ದೇವತೆಯನ್ನು ಶಾಂತಿಗೊಳಿಸಲು ಶುದ್ಧೀಕರಣ ಮತ್ತು ಬಲಿ ಕೊಟ್ಟಿರುವುದಾಗಿ ಕುಟುಂಬವು ಹೇಳಿಕೊಂಡಿದೆ.
ಈ ಆಚರಣೆಯನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡು ಜಿಲ್ಲಾಡಳಿತವು ಘಟನೆ ಬಗ್ಗೆ ತಿನಿಖೆ ನಡೆಸಲು ಕಾಶಿಪುರದ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ (ಬಿಡಿಒ) ಸೂಚನೆ ನೀಡಿದೆ.
ಅಧಿಕಾರಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿದ್ದು, ನವ ದಂಪತಿಗಳ ಕುಟುಂಬಗಳನ್ನು ಭೇಟಿ ಮಾಡಿದೆ. ತಮ್ಮ ಪದ್ದತಿಯ ಭಾಗವಾಗಿ ಪೂಜೆ-ಆಚರಣೆ ಮಾಡಿರುವುದಾಗಿ ಕುಟುಂಬವು ಹೇಳಿಕೊಂಡಿದೆ ಎಂದು ವದರಿಯಾಗಿದೆ.