ಮತ್ತೊಂದು ಕೋಮಿನ ಯುವಕನನ್ನು ಪ್ರೀತಿಸಿದ್ದರಿಂದ ತಮ್ಮ ಪ್ರೀತಿಯನ್ನು ಪೋಷಕರು ವಿರೋಧಿಸಿದ್ದ ಕಾರಣ, ಊರು ತೊರೆದುಬಂದು ವಿವಾಹವಾಗಿದ್ದ ಯುವತಿಯೊಬ್ಬರ ಮೃತದೇಹ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪತ್ತೆಯಾಗಿದೆ. ತಮ್ಮ ವಿರೋಧದ ನಡುವೆಯೂ ವಿವಾಹವಾಗಿದ್ದ ಕಾರಣಕ್ಕಾಗಿ ಆಕೆಯನ್ನು ಆಕೆಯ ಪೋಷಕರೇ ಹತ್ಯೆ (‘ಮರ್ಯಾದೆಗೇಡು ಹತ್ಯೆ’) ಮಾಡಿರಬಹುದು ಎಂದು ಶಂಕಿಸಲಾಗಿದೆ.
ಚಿತ್ತೂರು ಜಿಲ್ಲೆಯ ಯಾಸ್ಮಿನ್ ಬಾನು ಎಂಬ ಯುವತಿ ಕಳೆದ ಕಳೆದ ನಾಲ್ಕು ವರ್ಷಗಳಿಂದ ಹಿಂದು ಯುವಕ ಸಾಯಿ ತೇಜ ಎಂಬಾತನನ್ನು ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಬಾನು ಅವರ ಕುಟುಂಬದಿಂದ ವಿರೋಧವಿತ್ತು. ಹೀಗಾಗಿ, ಅವರು ಇದೇ ವರ್ಷದ ಫೆಬ್ರವರಿಯಲ್ಲಿ ಮನೆ ತೊರೆದು ಬಂದು ಯುವಕನೊಂದಿಗೆ ವಿವಾಹವಾಗಿದ್ದರು. ಪ್ರತ್ಯೇಕವಾಗಿ ಜೀವನ ಕಟ್ಟಿಕೊಂಡು ವಾಸಿಸುತ್ತಿದ್ದರು.
ಮದುವೆಯ ಬಳಿಕ ತಮ್ಮ ಸುರಕ್ಷತೆಗೆ ಪೋಷಕರಿಂದ ಬೆದರಿಕೆ ಇದೆಯೆಂದು ಪೊಲೀಸ್ ರಕ್ಷಣೆಯನ್ನೂ ಕೋರಿದ್ದರು. ಆದಾಗ್ಯೂ, ಇದೀಗ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಆಕೆಯನ್ನು ಅವರ ಪೋಷಕರೇ ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಬಾನು ಅವರ ಪತಿ ತೇಜ ಹೇಳುವಂತೆ; “ತಮ್ಮ ಮದುವೆಯಾದಾಗಿನಿಂದ ಬಾನು ಅವರ ಅಣ್ಣ ಮತ್ತು ತಂಗಿ ಪದೇ ಪದೇ ಕರೆ ಮಾಡುತ್ತಿದ್ದರು. ಬಾನು ಸಾವಿಗೂ ಮೂರು ದಿನಗಳ ಮುನ್ನ ತಮಗೆ ಬಾನು ಅವರ ಕುಟುಂಬಸ್ಥರು ಕರೆಮಾಡಿದ್ದರು. ಬಾನು ಅವರ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮನೆಗೆ ಬಂದು ಭೇಟಿಯಾಗುವಂತೆ ಒತ್ತಾಯಿಸಿದ್ದರು” ಎಂದು ವಿವರಿಸಿದ್ದಾರೆ.
“ತಂದೆಯನ್ನು ಭೇಟಿ ಮಾಡಲು ಬಾನು ತನ್ನ ಪೋಷಕರ ಮನೆಗೆ ಹೋಗಿದ್ದರು. ಆಕೆ ತೆರಳಿದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಕರೆ ಬಂದಿತು. ಆ ನಂತರ, ಬಾನು ಸಾವನ್ನಪ್ಪಿದ್ದಾರೆಂದು ಅವರ ಕುಟುಂಬದವರು ತಿಳಿಸಿದರು” ಎಂದು ತೇಜ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಕಾಯ್ದೆ | ಮೂಗಿಗೆ ತುಪ್ಪ ಹಚ್ಚಲು ಮನೆ ಬಾಗಿಲಿಗೆ ಬರುತ್ತಿದೆ ಬಿಜೆಪಿ!
ಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರು ಹೇಳುತ್ತಿದ್ದಾರೆ. ಆದರೆ, ಇದು ಕೊಲೆ ಎಂದು ತೇಜ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿರುವ ತೇಜ, “ಬಾನು ಅವರನ್ನು ಆಕೆಯ ಕುಟುಂಬದವರು ಕೊಲೆ ಮಾಡಿದ್ದಾರೆ. ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆಕೆಯನ್ನು ಪೋಷಕರ ಮನೆಗೆ ಕರೆದುಕೊಂಡ ಹೋಗಿದ್ದ ಸಂಬಂಧಿಕರು ಪರಾರಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಾನು ಅವರ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.