ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ಮಾರ್ಲೆನಾ ಸಿಂಗ್ ಆಯ್ಕೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಿ ಆತಿಶಿ ಅವರನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಒಮ್ಮತದಿಂದಲೇ ಆಯ್ಕೆ ಮಾಡಿದ್ದಾರೆ. ದೆಹಲಿ ಸರ್ಕಾರದ ಏಕೈಕ ಮಹಿಳಾ ಸಚಿವೆಯಾಗಿರುವ ಆತಿಶಿ, ಕೇಜ್ರಿವಾಲ್, ಪಕ್ಷದ ಆಪ್ತ ಮತ್ತು ನಂಬಿಕಸ್ಥ ಬಳಗದಲ್ಲಿ ಗುರುತಿಸಿಕೊಂಡವರು. ಶಿಕ್ಷಣ, ಇಂಧನ, ಪಿಡಬ್ಲ್ಯೂಡಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಹೊಂದಿದ್ದವರು.
ಮೂಲಗಳ ಪ್ರಕಾರ, ಕೇಜ್ರಿವಾಲ್ ನಿವಾಸದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಆತಿಶಿ ಹೆಸರು ಪ್ರಸ್ತಾಪವಾಗಿತ್ತು. ಇದಕ್ಕೂ ಮೊದಲು ಅಬಕಾರಿ ನೀತಿ ಹಗರಣದಲ್ಲಿ ಸಿಲುಕಿ ಷರತ್ತುಬದ್ದ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಕೇಜ್ರಿವಾಲ್ ಶುಕ್ರವಾರ ಮುಖ್ಯಮಂತ್ರಿ ಹುದ್ದೆಗೆ ಅಚ್ಚರಿ ಎಂಬಂತೆ ರಾಜೀನಾಮೆ ಘೋಷಿಸಿಯಾಗಿತ್ತು.
ಆ ಸಂದರ್ಭದಲ್ಲಿ ಮಾತನಾಡಿದ್ದ ಕೇಜ್ರೀವಾಲ್, ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದರು. ಇದನ್ನ ರಾಜಕೀಯ ಸವಾಲಿನಂತೆ ಕೇಜ್ರೀವಾಲ್ ಸ್ವೀಕರಿಸಿರೋದು ಯಾರಿಗೇ ಆದರೂ ತಿಳಿಯದ ಸಂಗತಿ ಏನಲ್ಲ. ರಾಜಕೀಯದ ಈ ಹಾವು-ಏಣಿ ಆಟದಲ್ಲಿ ಆತಿಶಿಯವರಿಗೆ ಸಿಎಂ ಪಟ್ಟ ಅಚಾನಕ್ಕಾಗಿ ಒದಗಿ ಬಂದಿರೋದಂತು ನಿಜ.
ಎಎಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಮೊದಲಿಗೆ ಅರವಿಂದ ಕೇಜ್ರಿವಾಲ್ ಅವರೇ ಸಚಿವೆ ಆತಿಶಿ ಹೆಸರನ್ನ ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದರು. ಇದಕ್ಕೆ ಪಕ್ಷವು ಕೂಡಾ ಸರ್ವಾನುಮತದಿಂದ ಒಪ್ಪಿಗೆ ನೀಡಿತ್ತು. ನಂತರ ಮಾತನಾಡಿದ ಕೇಜ್ರಿವಾಲ್ ʼದೆಹಲಿ ಜನತೆ ತಮ್ಮನ್ನು ಪ್ರಾಮಾಣಿಕ ಎಂದು ಒಪ್ಪಿಕೊಂಡ ಮೇಲಷ್ಟೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿಯೂ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಘೋಷಣೆ ಮಾಡಿದರು.
ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಬಹುತೇಕ ಇಲಾಖೆಗಳ ಉಸ್ತುವಾರಿ ಹೊಂದಿದ್ದ ಸಚಿವೆ ಆತಿಶಿ, ಕೇಜ್ರಿವಾಲ್ ಅವರ ನಿಷ್ಠರು ಎಂದೇ ಗುರುತಿಸಿಕೊಂಡಿದ್ದರು. ಅದಲ್ಲದೆ, ಇತ್ತೀಚೆಗೆ ಕುಡಿಯುವ ನೀರಿಗಾಗಿ ದೆಹಲಿಗೆ ಹರಿಯಾಣದಿಂದ ನೀರು ಬಿಡುವಂತೆ ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟಿಸಿದ್ದರು. ಇದಷ್ಟೇ ಅಲ್ಲದೇ ಕೇಜ್ರಿವಾಲ್ ವಿರುದ್ಧದ ಆರೋಪಗಳು ಬಂದಾಗಲೆಲ್ಲಾ ಆತಿಶಿಯವರೇ ಮುಂಚೂಣಿಯಲ್ಲಿದ್ದು, ಪ್ರತಿಭಟಿಸಿದ್ದರು. ಇನ್ನು ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ತಮ್ಮ ಬದಲು ಆತಿಶಿ ಹೆಸರನ್ನೇ ಕೇಜ್ರಿವಾಲ್ ಸೂಚಿಸಿದ್ದು ಕೂಡ ಆಕೆಯ ಹೆಚ್ಚುಗಾರಿಕೆಯಾಗಿದೆ. ಈ ಎಲ್ಲದರ ಪರಿಣಾಮ ಈಗ ಎಲ್ಲರ ಕಣ್ಣು ಆತಿಶಿ ಕಡೆಗೆ ನೆಟ್ಟಿದೆ. ಕೇಜ್ರೀವಾಲ್ ರಾಜೀನಾಮೆ ನಂತರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಆತಿಶಿಯವರ ಕೆಲವು ಪ್ರಮುಖ ರಾಜಕೀಯ ಘಟ್ಟಗಳನ್ನು ನಾವು ತಿಳಿದುಕೊಳ್ಳಬೇಕಿದೆ.

ಆತಿಶಿಯವರ ಜನನ ಜೂನ್ 8, 1981 ರಂದು. ದೆಹಲಿಯ ಶೈಕ್ಷಣಿಕ ಕುಟುಂಬದಿಂದಲೇ ಬಂದಿರುವ ಇವರ ತಂದೆ ತಾಯಿ, ವಿಜಯ್ ಸಿಂಗ್ ಮತ್ತು ತ್ರಿಪ್ತಾ ವಾಹಿ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಆತಿಶಿ, ಅವರ ಮೂಲ ಹೆಸರಿನಲ್ಲಿ ಒಂದು ಅಚ್ಚರಿ ಪಡುವ ಸಂಗತಿ ಇದೆ. ಅದೇನಂದರೆ, ಆಕೆಯ ಹೆತ್ತವರ ಸೈದ್ಧಾಂತಿಕ ಬೇರುಗಳ ಪ್ರತಿಬಿಂಬವಾದ ಮಾರ್ಕ್ಸ್ ಮತ್ತು ಲೆನಿನ್ ಹೆಸರುಗಳ ಮಿಶ್ರಣವಾದ ‘ಮಾರ್ಲೆನಾ’ ಎಂಬ ಹೆಸರನ್ನೇ ಆಕೆಗೆ ಇಡಲಾಗಿತ್ತು ಅಂದರೆ ಆಕೆಯ ಮೂಲ ಹೆಸರು ಮರ್ಲೇನಾ. ಆದರೆ ಆಕೆ 2018 ರಲ್ಲಿ, ತನ್ನ ಕುಟುಂಬದ ಹಿನ್ನೆಲೆಯಿಂದ ತನ್ನ ಕೆಲಸದ ಕಡೆಗೆ ಗಮನವನ್ನು ಬದಲಾಯಿಸಲು ಬಯಸಿ, ತನ್ನ ಸಾರ್ವಜನಿಕ ವ್ಯಕ್ತಿತ್ವದಲ್ಲಿ ಆತಿಶಿ ಎಂಬ ಹೆಸರನ್ನೇ ಅಳವಡಿಸಿಕೊಂಡರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋಶಾ ಮಸಲತ್ತು-ಕೇಜ್ರೀವಾಲ್ ಸವಾಲು
ಆತಿಷಿಯವರ ಶೈಕ್ಷಣಿಕ ಪ್ರಯಾಣ ದೆಹಲಿಯಲ್ಲೇ ಪ್ರಾರಂಭವಾಯಿತು, ದೆಹಲಿಯ ಪೂಸಾ ರಸ್ತೆಯ ಸ್ಪ್ರಿಂಗ್ ಡೇಲ್ಸ್ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, 2001 ರಲ್ಲಿ ಪ್ರತಿಷ್ಠಿತ ಸೈಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಪದವಿಪೂರ್ವ ಪದವಿಯನ್ನು ಪಡೆಯುತ್ತಾರೆ. ನಂತರ ಪ್ರತಿಷ್ಠಿತ ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸುತ್ತಾರೆ. ನಂತರ 2003ರಲ್ಲಿ ಚೆವೆನಿಂಗ್ ವಿದ್ಯಾರ್ಥಿ ವೇತನದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯುತ್ತಾರೆ. ಬಳಿಕ 2005 ರಲ್ಲಿ ರೋಡ್ಸ್ ವಿದ್ವಾಂಸರಾಗಿ ಮ್ಯಾಗ್ಡಲೆನ್ ಕಾಲೇಜಿನಲ್ಲಿಯೂ ಕಾರ್ಯ ನಿರ್ವಹಿಸುತ್ತಾರೆ.
ಇವೆಲ್ಲವು ಆಕೆಯ ಶಿಕ್ಷಣಕ್ಕೆ ಸಂಬಂಧ ಪಟ್ಟದ್ದಾಗಿದ್ದರೆ, ಇನ್ನು ರಾಜಕೀಯ ಜೀವನ ಎಲ್ಲಿಂದ ಶುರುವಾಯ್ತು ಅಂತ ತಿಳಿಯುವುದಾದರೆ, ಆರಂಭದಲ್ಲಿ ಅಂದರೆ ಜನವರಿ 2013ರಲ್ಲೇ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ರಾಜಕೀಯ ಪ್ರವೇಶ ಮಾಡುತ್ತಾರೆ. ಆಪ್ ಪಕ್ಷದ ನೀತಿ ನಿರೂಪಣೆಯ ರಚನೆಯಲ್ಲೇ ಪ್ರಧಾನ ಪಾತ್ರವಹಿಸುತ್ತಾರೆ. ಆತಿಷಿಯವರ ಪ್ರತಿಭಟಿಸುವ ಕಿಚ್ಚು ವಿಶೇಷವಾಗಿ ಭಾರತದಲ್ಲಿ ಅಂದು ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲಿ ಶುರುವಾಗಿತ್ತು. ಆನಂತರ, 2015ರಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದ ಜಲ ಸತ್ಯಾಗ್ರಹದ ಸಮಯದಲ್ಲಿಯು ಮುಂದುವಯಿತು. ಇದು ಆತಿಶಿಯ ಕ್ರಿಯಾಶೀಲತೆಗೆ ಸಾಕ್ಷಿಯಾಯ್ತು. ಈ ಎರಡೂ ಪ್ರತಿಭಟನೆಗಳು ಅವರ ಜೀವನದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿತ್ತು.

ಇದಾದ ಬಳಿಕ 2019 ರ ಲೋಕಸಭೆ ಚುನಾವಣೆಗೂ ಮುಂಚಿತವಾಗಿ, ಆತಿಶಿ ಅವರನ್ನು ಪೂರ್ವ ದೆಹಲಿಗೆ ಪಕ್ಷದ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಜೊತೆಗೆ ಚುನಾವಣೆಯಲ್ಲಿಯು ಸ್ಪರ್ಧಿಸಿದರೂ ಕೂಡ, ಗೆಲುವು ಅವರ ಕೈ ಹಿಡಿಯಲಿಲ್ಲ. ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ 4.77 ಲಕ್ಷ ಮತಗಳ ಅಂತರದೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದ್ದರು.
ಇದಾದ ಬಳಿಕ ನಡೆದ 2020ರ ದೆಹಲಿ ವಿಧಾನಸಭೆ ಚುನಾವಣೆಯು ಆಕೆಯ ರಾಜಕೀಯ ಜೀವನದಲ್ಲಿ ಪ್ರಮುಖ ಮೈಲುಗಲ್ಲಾಯಿತು. ದಕ್ಷಿಣ ದೆಹಲಿಯ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆತಿಶಿ, ಬಿಜೆಪಿ ಅಭ್ಯರ್ಥಿ ಧರಂಬೀರ್ ಸಿಂಗ್ ವಿರುದ್ಧ 11,422 ಮತಗಳ ಅಂತರದಿಂದ ಭಾರೀ ಗೆಲುವನ್ನೇ ಸಾಧಿಸುವರು. ಈ ಗೆಲುವೇ ಆಕೆಗೆ ದೆಹಲಿ ಸರ್ಕಾರದ ಭಾಗವಾಗಲು ಪ್ರಮುಖ ಕಾರಣವಾಯಿತು.
ಚುನಾವಣಾ ಯಶಸ್ಸಿನ ನಂತರ, ಆತಿಶಿ ಅವರು ಕ್ಯಾಬಿನೆಟ್ ಸಚಿವರಾಗಿ ದೆಹಲಿ ಸರ್ಕಾರಕ್ಕೆ ಸೇರ್ಪಡೆಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಬಕಾರಿ ನೀತಿ ಪ್ರಕರಣದಿಂದಾಗಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ರಾಜೀನಾಮೆ ನೀಡಬೇಕಾಯಿತು. ಈ ವೇಳೆ ಖಾಲಿಯಾದ ಸ್ಥಾನಗಳನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆ ಆತಿಶಿ ಎದುರಿಗೆ ಬಂತು. ಇದರ ಜೊತೆ ಜೊತೆಗೆ 2022-23 ಅವಧಿಯಲ್ಲಿ, ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸಿದ ಹಲವಾರು ಇತರ ಸಮಿತಿಗಳೊಂದಿಗೆಯೂ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಈ ಎಲ್ಲ ಜವಾಬ್ಧಾರಿಗಳನ್ನ ಹೊರುತ್ತಾ ತಾನೊಬ್ಬ ಗಟ್ಟಿಗಿತ್ತಿ ಅನ್ನೋದನ್ನು ಸಾಬೀತುಪಡಿಸುತ್ತಾರೆ. ಅದಲ್ಲದೆ, ನಂತರ ನಡೆದ ರಾಜಕೀಯ ಘಟನೆಗಳು ಆಕೆಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದವು.
ಕಳೆದ ಜೂನ್ ತಿಂಗಳಿನಲ್ಲಿ ಹರಿಯಾಣ ಸರಕಾರವು ರಾಜಧಾನಿ ದೆಹಲಿಗೆ ನೀರಿನ ಸರಬರಾಜು ನಿಲ್ಲಿಸಿದಾಗ ಆತಿಷಿ ಇದಕ್ಕೆ ಪ್ರತಿಭಟನೆಯಾಗಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಾರೆ. ನಂತರ ತೀವ್ರ ಅಸ್ವಸ್ಥಗೊಂಡ ಆತಿಷಿ ಆಸ್ಪತ್ರೆಗೆ ದಾಖಲಾಗಿ ಆ ಸತ್ಯಾಗ್ರಹ ಅಲ್ಲಿಗೆ ಕೊನೆಗೊಳ್ಳುವುದು. ಇದರ ನಂತರ ಮತ್ತೆ ಸುದ್ದಿಯಾಗುತ್ತಾರೆ. ಅಂದರೆ ಆ ಸಂದರ್ಭದಲ್ಲಿ ಕೇಜ್ರೀವಾಲ್ ಅವರ ಬಂಧನ ಆಗಿರುತ್ತದೆ. ಆಗ ಇಡೀ ದೆಹಲಿಯ ರಾಜಕೀಯದ ಮೇಲೆ ಕೇಂದ್ರ ಸರಕಾರದ ಕಣ್ಗಾವಲಿನಲ್ಲಿತ್ತು. ಈ ಸಂದರ್ಭದಲ್ಲಿ ಆತಿಷಿ ತನ್ನ ಮನೆಗೆ ಹೋಗುವ ಸಂದರ್ಭದಲ್ಲಿ ಪೊಲೀಸರು ತಡೆಯುತ್ತಾರೆ. ಈ ವೇಳೆ ಪೊಲೀಸರ ಬೆದರಿಕೆಗೆ ಬಗ್ಗದೆ, ಪ್ರತಿಭಟಿಸುವ ಮೂಲಕ ಇಡೀ ದೇಶದಲ್ಲಿ ಸುದ್ದಿಯಾಗಿದ್ದರು.
ಆತಿಶಿ ಪ್ರಸ್ತುತ ದೆಹಲಿ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಏಕೈಕ ಮಹಿಳಾ ಸಚಿವೆ. ಹಣಕಾಸು, ನೀರು, ಶಿಕ್ಷಣ, ಲೋಕೋಪಯೋಗಿ ಇಲಾಖೆ, ವಿದ್ಯುತ್, ಕಂದಾಯ, ಯೋಜನೆ, ಸೇವೆಗಳು, ಕಾನೂನು, ನ್ಯಾಯ, ಮಾಹಿತಿ ಮತ್ತು ಪ್ರಚಾರ ಮತ್ತು ವಿಜಿಲೆನ್ಸ್ ಸೇರಿದಂತೆ ಗರಿಷ್ಠ ಸಂಖ್ಯೆಯ ಖಾತೆಗಳನ್ನು ಹೊಂದಿದ್ದಾರೆ. ಅದರ ಜೊತೆಗೆ, ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸದಸ್ಯರೂ ಆಗಿದ್ದಾರೆ. ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಂಸದ ಸಂಜಯ್ ಸಿಂಗ್ ಸೇರಿದಂತೆ ಪಕ್ಷದ ಉನ್ನತ ನಾಯಕರು ಜೈಲಿನಲ್ಲಿದ್ದಾಗ, ಆತಿಶಿಯೇ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವುದರ ಜೊತೆಗೆ ಪಕ್ಷದ ಮುಖವಾಗಿ ಕಾಣಿಸಿಕೊಂಡಿದ್ದರು.
ಆತಿಶಿ ಮಾರ್ಲೆನಾ ಸಿಂಗ್ ಮುಖ್ಯಮಂತ್ರಿ ಹುದ್ದೆಗೆ ಹೆಸರು ಖಚಿತವಾಗುತ್ತಿದ್ದಂತೆ, ಅವರ ಅನುಭವದ ಸಂಪತ್ತಿನಿಂದ ಆಡಳಿತಕ್ಕೆ ಬಲವಾದ ಬದ್ಧತೆಯನ್ನು ತಂದೇ ತರುವ ಭರವಸೆ ಈಗ ದೆಹಲಿಗರದ್ದಾಗಿದೆ. ದೆಹಲಿಯ ಜನತೆಯು ಹೊಸ ಸವಾಲುಗಳನ್ನು ಎದುರಿಸುತ್ತಿರುವಾಗ ಮತ್ತು ಮುಂಬರುವ ಚುನಾವಣೆಗಳಿಗೆ ತಯಾರಿ ನಡೆಸುತ್ತಿರುವಾಗ, ಆತಿಷಿ ಅವರ ಶಿಕ್ಷಣದ ಹಿನ್ನೆಲೆ ಮತ್ತು ವ್ಯಾಪಕ ರಾಜಕೀಯ ಅನುಭವವು ಅವರ ನಾಯಕತ್ವಕ್ಕೆ ಶಕ್ತಿ ತುಂಬಲಿ ಎಂದು ಹಾರೈಸುತ್ತಿದ್ದಾರೆ.