2025ರ ಐಪಿಎಲ್ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ಚೆನ್ನೈನಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. 2008ರ ನಂತರದ 17 ವರ್ಷಗಳ ಬಳಿಕ ಚೆನ್ನೈ ಸ್ಟೇಡಿಯಂನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದು ಬೀಗಿದೆ. ಪಂದ್ಯದಲ್ಲಿ ಸಿಎಸ್‌ಕೆ ತಂಡ ಹಿರಿಯ ಸ್ಟಾರ್ ಆಟಗಾರ ಎಂ.ಎಸ್ ಧೋನಿ 9ನೇ ಕ್ರಮಾಂಕದಲ್ಲಿ ಆಟವಾಡಿದ್ದು, ಸ್ವತಃ ತಮ್ಮದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಟೀಕೆಗೆ ಗುರಿಯಾಗಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 196 ರನ್ ಕಲೆ ಹಾಕಿತು. ಸಿಎಸ್‌ಕೆಗೆ 197 ರನ್‌ಗಳ ಗುಲುವಿನ ಗುರಿ ನೀಡಿತು.
ನಂತರ ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಆರಂಭಿಕ ಆಘಾತಕ್ಕೊಳಗಾಗಿ, 52 ರನ್ ಕಲೆ ಹಾಕುವುದರೊಳಗೆ 4 ಟಿಕೆಟ್ ಕಳೆದುಕೊಂಡಿತು. ಪಂದ್ಯದ ಪಟ್ಟಿಯಲ್ಲಿ ಧೋನಿ ಅವರು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, 6ನೇ ವಿಕೆಟ್ ಬಿದ್ದಾಗ ಸಿಎಸ್‌ಕೆಗೆ 43 ಬಾಲ್ (7.1 ಓವರ್) 117 ರನ್ ಬೇಕಿತ್ತು. ಧೋನಿ ಅವರು ಸ್ಕ್ರೀಸ್‌ಗೆ ಇಳಿಯುತ್ತಾರೆ. ಉತ್ತಮ ಪ್ರದರ್ಶನದೊಂದಿಗೆ, ಹೆಚ್ಚು ರನ್ ಗಳಿಸುತ್ತಾರೆ ಎಂಬ ಆಶಾಭಾವ ಸಿಎಸ್‌ಕೆ ಅಭಿಮಾನಿಗಳಲ್ಲಿತ್ತು.
ಆದರೆ, 7ನೇ ಕ್ರಮಾಂಕದಲ್ಲಿ ಧೋನಿ ಸ್ಕ್ರೀಸ್‌ಗೆ ಬರಲಿಲ್ಲ. ಬದಲಾಗಿ, ಆರ್ ಅಶ್ವಿನ್ ಅವರನ್ನು ಕಳಿಸಲಾಯಿತು. ಅಶ್ವಿನ್ ಔಟ್ ಆದ ಬಳಿಕ 9ನೇ ಕ್ರಮಾಂಕದಲ್ಲಿ ಬಂದ ಧೋನಿ, 16 ಎಸೆತಗಳನ್ನು ಎದುರಿಸಿ, 30 ರನ್ ಗಳಿಸಿದರು. ಆದಾಗ್ಯೂ, 20 ಓವರ್‌ಗಳಲ್ಲಿ ಕೇವಲ 146 ರನ್‌ಗಳಿಸಿದ ಸಿಎಸ್‌ಕೆ ಬರೋಬ್ಬರಿ 50 ರನ್‌ಗಳ ಅಂತರದಲ್ಲಿ ಹೀನಾಯವಾಗಿ ಸೋಲುಂಡಿತು.
ಪಂದ್ಯದಲ್ಲಿ ತಂಡವು ಕಠಿಣ ಪರಿಸ್ಥಿತಿಯಲ್ಲಿದ್ದಾಗ ಸ್ಕ್ರೀಸ್‌ಗೆ ಇಳಿಯದೇ ಧೋನಿ ಡಗೌಟ್‌ನಲ್ಲೇ ಉಳಿದ ಬಗ್ಗೆ ಸಿಎಸ್‌ಕೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಮಾಜಿ ಕ್ರಿಕೆಟಿಗರಾದ ಮನೋಜ್ ತಿವಾರಿ, ಸುರೇಶ್ ರೈನಾ, ಆಕಾಶ್ ಚೋಪ್ರಾ ಕೂಡ ಟೀಕಿಸಿದ್ದಾರೆ.
ಈ ವರದಿ ಓದಿದ್ದೀರಾ?: ಐಪಿಎಲ್ | 17 ವರ್ಷಗಳ ‘ಚೆನ್ನೈ ವನವಾಸ’ ಅಂತ್ಯ: ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ
“ಮೇಲಿನ ಕ್ರಮಾಂಕದಲ್ಲಿ ಆಡುವಂತೆ ಧೋನಿಗೆ ಹೇಳಬಹುದಾದಷ್ಟು ಧೈರ್ಯ ಸಿಎಸ್‌ಕೆ ಆಡಳಿತ ಮಂಡಳಿಗೆ ಇಲ್ಲ. ಧೋನಿ ಒಮ್ಮೆ ನಿರ್ಧರಿಸಿದರೆ, ಅದೇ ಅಂತಿಮ. 16 ಬಾಲ್‌ಗಳಿಗೆ 30 ರನ್ ಗಳಿಸಿದ ಧೋನಿಗೆ ಮೇಲಿನ ಕ್ರಮಾಂಕದಲ್ಲಿ ಆಡಲು ಸಮಸ್ಯೆಯೇನು? ನೀವು ಗೆಲ್ಲುವುದಕ್ಕಾಗಿಯೇ ಆಡುತ್ತಿದ್ದೀರಿ ಅಲ್ಲವೇ” ಎಂದು ತಿವಾರಿ ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆ, ಕೊನೆಯ ಓವರ್‌ಗಳಲ್ಲಿ ಧೋನಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಹಾಗೆಂದ ಮಾತ್ರಕ್ಕೆ, ಅವರು ಕಠಿಣ ಪಂದ್ಯದ ಸಮಯದಲ್ಲಿಯೂ ಕಡೆದ ಓವರ್‌ಗಳಿಗಾಗಿ ಕಾಯುವುದನ್ನು ಒಪ್ಪಲು ಸಾಧ್ಯವಿಲ್ಲ. ಅವರಂತಹ ಬ್ಯಾಟರ್‌ಗಳು ಹೆಚ್ಚು ಬಾಲ್‌ಗಳನ್ನು ಎದುರಿಸಬೇಕು” ಎಂದಿದ್ದಾರೆ.
ಇರ್ಫಾನ್ ಪಠಾಣ್ ಕೂಡ ಟೀಕಿಸಿದ್ದು, “ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವುದನ್ನು ಎಂದಿಗೂ ನಾನು ಬೆಂಬಲಿಸುವುದಿಲ್ಲ” ಎಂದಿದ್ದಾರೆ.
“ಅಶ್ವಿನ್‌ಗಿಂತ ಮೊದಲು ಧೋನಿ ಸ್ಕ್ರೀಸ್‌ಗೆ ಬರಬೇಕಿತ್ತು. ಅವರು, 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಒಪ್ಪಲಾಗದು” ಎಂದು ರೈನಾ ಕೂಡ ಹೇಳಿದ್ದಾರೆ.
“ಧೋನಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಸಿಎಸ್‌ಕೆ ತಂಡಕ್ಕೆ ಭರವಸೆ ಮೂಡಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಧೋನಿ ಬ್ರಾಂಡ್ ಬಳಸಿಕೊಂಡು ಕ್ರೀಡಾಂಗಣವನ್ನು ತುಂಬಿಸಿ ಹಣ ಗಳಿಸಲಾಗುತ್ತಿದೆ. ಧೋನಿಯನ್ನು ಕ್ರಿಕೆಟ್ ಕಾರಣಕ್ಕಾಗಿ ಅಲ್ಲ, ಹಣ ಗಳಿಸುವ ಉದ್ದೇಶಗಳಿಗಾಗಿ ಮಾತ್ರ ಆಡಿಸಲಾಗುತ್ತಿದೆ” ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.