2025ರ ಐಪಿಎಲ್ ಟೂರ್ನಿಗೆ ಕ್ಷಣ ಗಣನೆ ಆರಂಭವಾಗಿದೆ. ಮಾರ್ಚ್ 22ರಿಂದ ಟೂರ್ನಿ ಆರಂಭವಾಗಲಿದೆ. ಈ ಬಾರಿ 18ನೇ ಆವೃತ್ತಿಯ ಪಂದ್ಯಾವಳಿ ನಡೆಯುತ್ತಿದ್ದು, ಕೊಹ್ಲಿ ಅವರ ಜರ್ಸಿ ನಂಬರ್ ಕೂಡ 18 ಆಗಿರುವ ಕಾರಣ, ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಪ್ರತೀ ವರ್ಷದಂತೆ ಈಬಾರಿಯೂ ‘ಈ ಸಲ ಕಪ್ ನಮ್ದೇ’ ಘೋಷಣೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ಘೋಷಣೆ ವಿಚಾರದಲ್ಲಿ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘೋಷಣೆಯನ್ನು ಮತ್ತೆ-ಮತ್ತೆ ಹೇಳಬೇಡಿ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಪರೋಕ್ಷ ಸಂದೇಶ ಕಳಿಸಿದ್ದಾರೆ.
ಆರ್‌ಸಿಬಿ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಐಪಿಎಲ್ ಬಗ್ಗೆ ಮಾತನಾಡಿದ್ದರು. ‘ಈ ಸಲ ಕಪ್ ನಮ್ದೇ’ ಎಂದಿದ್ದರು. ಅವರಿಗೆ ಪರ್ಸನಲ್ ಮೆಸೇಜ್ ಕಳಿಸಿರುವ ಕೊಹ್ಲಿ, ‘ಪದೇ ಪದೇ ಈ ಸಲ ನಮ್ದೇ ಅಂತ ಹೇಳಬೇಡಿ. ಅದನ್ನು ಕೇಳಿ ಕೇಳಿ ಸಾಕಾಗಿದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ವತಃ ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.
ಏಳು ವರ್ಷಗಳ ಹಿಂದೆ, ನಡೆದ ಐಪಿಎಲ್ ಟೂರ್ನಿಯ ಸಮಯದಲ್ಲಿ ಆರ್‌ಸಿಬಿ ಪ್ರಕಾರ ಘೋಷಣೆಯಾಗಿ ‘ಈ ಸಲ ಕಪ್ ನಮ್ದೇ’ ಎಂಬ ಸಾಲು ಬಳಕೆಯಾಗಿತ್ತು. ಅಂದಿನಿಂದ ಪ್ರತಿ ಬಾರಿಯ ಟೂರ್ನಿ ಸಮಯದಲ್ಲೂ ಈ ಘೋಷಣೆ ಸದ್ದು ಮಾಡುತ್ತಲೇ ಇದೆ. ಆದರೆ, ಆರ್‌ಸಿಬಿ ಈವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2009, 2011 ಮತ್ತು 2016ರಲ್ಲಿ ಆರ್‌ಸಿಬಿ ಫೈನಲ್‌ವರೆಗೆ ತಲುಪಿದ್ದರೂ, ಫೈನಲ್‌ನಲ್ಲಿ ಸೋಲುಂಡು ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಈವರೆಗೆ ಕಪ್ ಗೆಲ್ಲದ ತಂಡಗಳಾಗಿ ಉಳಿದಿವೆ.
ಈ ವರದಿ ಓದಿದ್ದೀರಾ?: ಐಪಿಎಲ್ | ಆಟಗಾರರಿಗೆ ಹೊಸ ನಿಯಮ; ತೋಳಿಲ್ಲದ ಜೆರ್ಸಿ ಹಾಕಂಗಿಲ್ಲ, ಕುಟುಂಬ ಸದಸ್ಯರಿಗೆ ಅನುಮತಿ ಇಲ್ಲ
‘ಈ ಸಲ ಕಪ್ ನಮ್ದೇ’ ಬಗ್ಗೆ ಕೊಹ್ಲಿ ಅಸಮಾಧಾನದ ಬಗ್ಗೆ ಹೇಳಿಕೊಂಡಿರುವ ಎಬಿ ಡಿವಿಲಿಯರ್ಸ್ “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಆ ಮಾತುಗಳನ್ನು ಇತ್ತೀಚೆಗೆ ಹೇಳಿದ್ದೆ. ಆಗ ಕೊಹ್ಲಿ ಅವರಿಂದ ನನಗೆ ನೇರ ಸಂದೇಶ ಬಂತು. ‘ದಯವಿಟ್ಟು ಈಗ ಆ ಘೋಷಣೆಯನ್ನು ಮತ್ತೆ ಹೇಳುವುದನ್ನು ನಿಲ್ಲಿಸಿ’ ಎಂದು ಸಂದೇಶ ಕಳಿಸಿದ್ದರು. ಆಗ ನನಗೆ ಮುಜುಗರವಾಯಿತು” ಎಂದು ಹೇಳಿದ್ದಾರೆ.
”ಪ್ರಯಾಣ, ವಿಭಿನ್ನ ತಂಡಗಳು, ವಿಭಿನ್ನ ತಂತ್ರಗಳು ಮತ್ತು ಗಾಯಗಳು ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಟೂರ್ನಿಯ ಉದ್ದಕ್ಕೂ ಹಲವು ವಿಷಯಗಳು ಬದಲಾಗುತ್ತಿರುತ್ತವೆ. ಆದರೆ, ಪಂದ್ಯಾವಳಿಯ ಕೊನೆಯವರೆಗೂ ಎನರ್ಜಿ ಇಟ್ಟುಕೊಳ್ಳಲು ಉತ್ತಮ ದಾರಿ ಕಂಡುಕೊಂಡರೆ, ತಂಡವು ಸಾಮಾನ್ಯವಾಗಿ ಮೇಲುಗೈ ಸಾಧಿಸುತ್ತದೆ. ಇದು 18ನೇ ಸೀಸನ್, ಕಪ್ ಗೆಲ್ಲುವ ಭರವಸೆ ಇದೆ. ಅದು ಸಾಧ್ಯವಾದರೆ, ವಿರಾಟ್ ಜೊತೆ ಆ ಟ್ರೋಫಿಯನ್ನು ಎತ್ತಲು ನಾನು ಜೊತೆಗಿರುತ್ತೇನೆ” ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಮಾರ್ಚ್ 22ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಹಣಾಹಣಿ ನಡೆಯಲಿದೆ.