ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು ‘ನಿಧಾನಗತಿಯ ಓವರ್ ರೇಟ್’ನಲ್ಲಿ ಬೌಲಿಂಗ್ ಮಾಡಿದ ಕಾರಣ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಬುಧವಾರ ರಾತ್ರಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಪಿಬಿಕೆಎಸ್ ನಡುವೆ 2025ರ ಐಪಿಎಲ್ ಟೂರ್ನಿಯ 49ನೇ ಪಂದ್ಯ ನಡೆದಿದೆ. ಪಂದ್ಯದಲ್ಲಿ ಪಂಜಾಬ್ ತಂಡ ಅಭೂತಪೂರ್ವ ಗೆಲುವು ಸಾಧಿಸಿದೆ. ಆದಾಗ್ಯೂ, ತಂಡದ ಬೌಲಿಂಗ್ ನಿಧಾನಗತಿಯ ಓವರ್ ರೇಟ್ ಹೊಂದಿದ್ದ ಕಾರಣಕ್ಕಾಗಿ ಶ್ರೇಯಸ್ ಅಯ್ಯರ್‌ಗೆ ದಂಡ ವಿಧಿಸಲಾಗಿದೆ.
ಐಪಿಎಲ್ ನಿಯಮ 2.2 ಅಡಿಯಲ್ಲಿ, ಒಂದು ತಂಡವು ನಿಗದಿತ ಸಮಯದೊಳಗೆ ಬೌಲಿಂಗ್‌ಅನ್ನು ಪೂರ್ಣಗೊಳಿಸಬೇಕು. ಐಪಿಎಲ್‌ನಲ್ಲಿ ಸುಮಾರು 90 ನಿಮಿಷಗಳಲ್ಲಿ 20 ಓವರ್‌ಗಳನ್ನು ಪೂರ್ಣಗೊಳಿಸಬೇಕೆಂದು ನಿಯಮವಿದೆ. ಒಂದು ವೇಳೆ, 90 ನಿಮಿಷಗಳ ಆಸುಪಾಸಿನಲ್ಲಿ ಬೌಲಿಂಗ್ ಪೂರ್ಣಗೊಳ್ಳದಿದ್ದರೆ, ಹೆಚ್ಚು ಸಮಯದ ತೆಗೆದುಕೊಂಡರೆ, ಅದನ್ನು ‘ನಿಧಾನಗತಿ ಓವರ್ ದರ’ ಎಂದು ಪರಿಗಣಿಸಲಾಗುತ್ತದೆ. ಬೌಲಿಂಗ್ ಮಾಡಿದ ತಂಡಕ್ಕೆ ದಂಡ ವಿಧಿಸಲಾಗುತ್ತದೆ.
ಹೀಗಾಗಿ, ಚೆನ್ನೈ ವಿರುದ್ಧ ಬೌಲಿಂಗ್ ಮಾಡಲು ಪಂಜಾಬ್ ತಂಡ ಹೆಚ್ಚು ಸಮಯ ತೆಗೆದುಕೊಂಡ ಕಾರಣ, ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಈ ವರದಿ ಓದಿದ್ದೀರಾ?: ಕರಾಚಿಯಿಂದ ಜೈಪುರದವರೆಗೆ; ಸಚಿನ್‌ರಿಂದ ವೈಭವ್‌ವರೆಗೆ…
ಚೆನ್ನೈ ವಿರುದ್ದದ ಪಂದ್ಯದಲ್ಲಿ ಪಂಜಾಬ್ ತಂಡ ನಿಧಾನಗತಿ ಓವರ್ ದರದಲ್ಲಿ ಬೌಲಿಂಗ್ ಮಾಡಿದರೂ, ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಛಾಪು ಮೂಡಿಸಿದ್ದಾರೆ.
ಪಂದ್ಯವನ್ನು ಗೆದ್ದು ಪಂಜಾಬ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಚೆನ್ನೈ ತಂಡ ಟೂರ್ನಿಯ ಕ್ವಾಲಿಫಯರ್ ಓಟದಿಂದ ಹೊರಗುಳಿದಿದೆ.