ಮೊದಲನೇ ಪತ್ನಿಗೆ ವಿಚ್ಛೇದನವನ್ನೂ ನೀಡದೆ, 2ನೇ ವಿವಾಹವಾಗಿದ್ದ ಐಪಿಎಸ್ ಅಧಿಕಾರಿಗೆ ಹಿಂಬಡ್ತಿ ನೀಡಲಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನ ಕೇಡರ್ ಐಪಿಎಸ್ ಅಧಿಕಾರಿ ಪಂಕಜ್ ಕುಮಾರ್ ಚೌಧರಿ ಅವರಿಗೆ ಹಿಂಬಡ್ತಿ ನೀಡಲಾಗಿದ್ದು, ಮೂರು ವರ್ಷಗಳ ಕಾಲ ಯಾವುದೇ ಬಡ್ತಿ (ಪ್ರಮೋಷನ್) ನೀಡದಂತೆ ನಿರ್ಬಂಧಿಸಲಾಗಿದೆ. ಅವರನ್ನು ಲೆವೆಲ್ 11 ಸೀನಿಯರ್ ವೇತನ ಶ್ರೇಣಿಯಿಂದ ಲೆವೆಲ್ 10 ಜೂನಿಯರ್ ವೇತನ ಶ್ರೇಣಿಗೆ ಹಿಂಬಡ್ತಿ ನೀಡಲಾಗಿದೆ. ಲೆವೆಲ್ 10 ಶ್ರೇಣಿಯು ಹೊಸದಾಗಿ ನೇಮಕಗೊಂಡ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸುವ ಶ್ರೇಣಿಯಾಗಿದೆ.
ರಾಜಸ್ಥಾನದಲ್ಲಿ ಐಪಿಎಸ್ ಅಧಿಕಾರಿಗೆ ಹಿಂಬಡ್ತಿ ನೀಡಿರುವುದು ಇದೇ ಮೊದಲು ಎಂದು ವರದಿಯಾಗಿದೆ. ಚೌಧರಿ ಅವರ ಎರಡನೇ ಮದುವೆಯ ಬಗ್ಗೆ ತಿಳಿದ ನಂತರ ಉನ್ನತ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಚೌದರಿ ಅವರು ಕೆಲವು ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. ಈ ಕೌಟುಂಬಿಕ ಪ್ರಕರಣವು ಸುಮಾರು ನಾಲ್ಕು ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಚೌದರಿ ಪರವಾಗಿಯೇ ತೀರ್ಪು ನೀಡಿದ್ದವು ಎಂದು ವರದಿಯಾಗಿದೆ.
ಆದಾಗ್ಯೂ, ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಚೌಧರಿ 2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಜೈಪುರದಲ್ಲಿ ಸಮುದಾಯ ಪೊಲೀಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರಿಗೆ ಹಿಂಬಡ್ತಿ ನೀಡಲಾಗಿದ್ದು, ಅವರ ಹುದ್ದೆಯನ್ನು ಪೊಲೀಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಶ್ರೇಣಿ 10) ಎಂದು ಬದಲಾಯಿಸಲಾಗಿದೆ.