ಆಪರೇಷನ್ ಸಿಂಧೂರ್ ಸಮಯದಲ್ಲಿ ಗುಪ್ತಚರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ದೇಶದ ಬಾಹ್ಯ ಗುಪ್ತಚರ ಸಂಸ್ಥೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ಗೆ (RAW) ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲಗಾಂನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪ್ರತಿದಾಳಿ ನಡೆಸಿತ್ತು. ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಉಲ್ಬಣಗಳು ಸುಮಾರು 20 ದಿನಗಳ ಕಾಲ ದಾಳಿ-ಪ್ರತಿದಾಳಿಗಳು ನಡೆಸಿದ್ದವು. ಅಂತಿಮವಾಗಿ, ಮೇ 10ರಂದು ಕದನ ವಿರಾಮ ಘೋಷಿಸಲಾಗಿದೆ. (ಕದನ ವಿರಾಮ ಘೋಷಣೆಯ ಕೀರ್ತಿಯನ್ನು ಟ್ರಂಪ್ ಪಡೆಯುತ್ತಿದ್ದಾರೆ.)
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಜೈನ್ ಪ್ರಮುಖ ಪಾತ್ರ ವಹಿಸಿದ್ದರು. ಜೈನ್ ಅವರು ಪ್ರಸ್ತುತ RAWನಲ್ಲಿ ವಾಯುಯಾನ ಸಂಶೋಧನಾ ಕೇಂದ್ರ (ಎಆರ್‌ಸಿ) ಮುಖ್ಯಸ್ಥರಾಗಿದ್ದಾರೆ.
ಸದ್ಯ, RAW ಮುಖ್ಯಸ್ಥರಾಗಿರುವ ರವಿ ಸಿನ್ಹಾ ಅವರು ಜೂನ್ 30ರಂದು ನಿವೃತ್ತರಾಗಲಿದ್ದಾರೆ. RAWನಲ್ಲಿ ರವಿ ನಂತರದ ಅತ್ಯಂತ ಹಿರಿಯ ಅಧಿಕಾರಿ ಜೈನ್ ಅವರೇ ಆಗಿದ್ದಾರೆ. ಹೀಗಾಗಿ, ಅವರನ್ನು RAW ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ರೈತರೊಂದಿಗೆ ಸಿಎಂ ಸಭೆ ಜು. 4ಕ್ಕೆ ಏಕೆ, ಭೂದಾಹಿಗಳ ಮಸಲತ್ತೇನು?
ಪಂಜಾಬ್ ಕೇಡರ್‌ನ 1989ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿರುವ ಜೈನ್ ಅವರು, RAWನಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಜೈನ್ ಅವರು ಪಂಜಾಬ್‌ನಲ್ಲಿ ಸೇವೆ ಸಲ್ಲಿಸಿದ್ದ ಸಮಯದಲ್ಲಿ, ಭಯೋತ್ಪಾದನೆ ವಿರುದ್ಧ ಗಮನಾರ್ಹ ಕಾರ್ಯಾಚರಣೆಗಳನ್ನು ನಡೆಸಿದ್ದರು. ಅಲ್ಲಿ ಅವರು ವಿವಿಧ ಜಿಲ್ಲೆಗಳಲ್ಲಿ ಎಸ್‌ಎಸ್‌ಪಿ ಮತ್ತು ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಶ್ರೀಲಂಕಾ ಮತ್ತು ಕೆನಡಾದಲ್ಲಿ ಭಾರತೀಯ ರಾಯಭಾರ ಕಚೇರಿಗಳಲ್ಲಿಯೂ ಜೈನ್ ಸೇವೆ ಸಲ್ಲಿಸಿದ್ದಾರೆ.