ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧದ ಆತಂಕದಿಂದಾಗಿ ಜಾಗತಿಕ ಇಂಧನ ಬೆಲೆಗಳು ಗಗನಕ್ಕೇರುತ್ತಿರುವ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ವಿಶೇಷ ನೀತಿಯೊಂದನ್ನು ಜಾರಿಗೆ ತರುವಂತೆ ಭಾರತೀಯ ಇಂಧನ ಕಂಪನಿಯೊಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪುಣೆ ಗ್ಯಾಸ್ ಕಂಪನಿಯು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಈ ಕುರಿತು ಪತ್ರ ಬರೆದಿದ್ದು, ಭಾರತದ ಮೊಟ್ಟಮೊದಲ ‘ಎಲ್ಪಿಜಿ ದಕ್ಷತೆ ನೀತಿ ಚೌಕಟ್ಟು’ ರೂಪಿಸುವಂತೆ ಕೋರಿದೆ. ಇರಾನ್ ಬಿಕ್ಕಟ್ಟಿನಿಂದಾಗಿ ಜಾಗತಿಕ ಎಲ್ಪಿಜಿ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮೂಡಿದ್ದು, ವಾಣಿಜ್ಯ ಬಳಕೆಯ ಎಲ್ಪಿಜಿ ದರಗಳು ತೀವ್ರವಾಗಿ ಏರಿಕೆಯಾಗುತ್ತಿರುವುದು ಈ ಪ್ರಸ್ತಾವನೆಗೆ ಮುಖ್ಯ ಕಾರಣವಾಗಿದೆ.
ವರ್ಷದ ಆರಂಭದಲ್ಲಿ ಸುಮಾರು ₹1,884 ರಷ್ಟಿದ್ದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯು ಜಾಗತಿಕ ಪೂರೈಕೆ ವ್ಯತ್ಯಯದಿಂದಾಗಿ ಪ್ರಸ್ತುತ ₹3,100 ಕ್ಕೆ ಏರಿಕೆಯಾಗಿದೆ. ಈ ಭಾರಿ ದರ ಏರಿಕೆಯು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಆಸ್ಪತ್ರೆಗಳು, ಆಹಾರ ಸಂಸ್ಕರಣಾ ಘಟಕಗಳು, ಲಾಂಡ್ರಿಗಳು ಹಾಗೂ ಎಲ್ಪಿಜಿ ಇಂಧನವನ್ನೇ ಹೆಚ್ಚಾಗಿ ಅವಲಂಬಿಸಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಮೇಲೆ ತೀವ್ರ ಆರ್ಥಿಕ ಹೊರೆಯನ್ನು ಹೊರಿಸಿದೆ. ಕೇಂದ್ರ ಸರ್ಕಾರವು ಸದ್ಯಕ್ಕೆ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರೂ, ಮುಂದಿನ ದಿನಗಳಲ್ಲಿ ಇಂಧನ ಭದ್ರತೆಯನ್ನು ಬಲಪಡಿಸಲು ಎಲ್ಪಿಜಿ ಬಳಕೆಯಲ್ಲಿನ ಅಪವ್ಯಯವನ್ನು ತಡೆಯುವುದು ಅನಿವಾರ್ಯವಾಗಿದೆ ಎಂದು ಕಂಪನಿ ವಾದಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಲ್ಲಿಸಲಾದ ಈ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಎಲ್ಪಿಜಿ ವ್ಯರ್ಥವಾಗುವುದನ್ನು ತಡೆಯಲು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಲವು ಕ್ರಮಗಳನ್ನು ಸೂಚಿಸಲಾಗಿದೆ. ವಾಣಿಜ್ಯ ವಲಯದಲ್ಲಿ 47.5 ಕೆಜಿಯ ಎಲ್ಒಟಿ ಸಿಲಿಂಡರ್ಗಳ ಬಳಕೆಯನ್ನು ಉತ್ತೇಜಿಸುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಸರ್ಕಾರ ಸೂಚಿಸಬೇಕು ಎಂದು ಕೋರಲಾಗಿದೆ.
ದೊಡ್ಡ ಸಿಲಿಂಡರ್ಗಳ ಬಳಕೆಯಿಂದ ಗ್ಯಾಸ್ ಸೋರಿಕೆ ಮತ್ತು ವ್ಯರ್ಥವಾಗುವುದನ್ನು ತಡೆಯಬಹುದು ಹಾಗೂ ಸುರಕ್ಷತೆಯನ್ನು ಹೆಚ್ಚಿಸಬಹುದು ಎಂದು ತಿಳಿಸಲಾಗಿದೆ. ಇದರೊಂದಿಗೆ ದೇಶಾದ್ಯಂತ ಎಲ್ಪಿಜಿ ಉಳಿತಾಯದ ಕುರಿತು ಜಾಗೃತಿ ಅಭಿಯಾನಗಳನ್ನು ನಡೆಸುವುದು ಮತ್ತು ದಕ್ಷ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಕೈಗಾರಿಕೆಗಳಿಗೆ ಪ್ರೋತ್ಸಾಹಕಗಳನ್ನು ನೀಡುವುದು ಪ್ರಸ್ತಾವನೆಯಲ್ಲಿದೆ.




