ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿಗೆ ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದೆ. ಇದುವರೆಗೆ 4,97,840 ಫಾರ್ಮ್ಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಮನೆ ಮನೆ ಭೇಟಿ ವೇಳೆ ನಡೆಸಿದ ಪರಿಶೀಲನೆಯಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6,365 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 1,235 ಶಾಶ್ವತ ವಲಸೆ, 4,639 ಮರಣ ಹೊಂದಿದವರು ಹಾಗೂ 452 ದ್ವಿಪ್ರತಿ ಮತದಾರರ ಪ್ರಕರಣಗಳು ಸೇರಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚುರುಕುಗೊಂಡಿದೆ. ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,92,055 ಮತದಾರರಿದ್ದು, ಎಲ್ಲರಿಗೂ ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದೆ. ಇದುವರೆಗೆ 93,712 ಫಾರ್ಮ್ಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಪಿ. ಶ್ರವಣಕುಮಾರ್ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಮನೆ ಮನೆ ಭೇಟಿ ವೇಳೆ ಒಟ್ಟು 1,788 ಮತದಾರರನ್ನು ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಡಿ ಗುರುತಿಸಲಾಗಿದೆ. ಇದರಲ್ಲಿ 216 ಶಾಶ್ವತ ವಲಸೆ, 1,471 ಮರಣ ಹೊಂದಿದವರು ಹಾಗೂ 92 ದ್ವಿಪ್ರತಿ ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ತಂದೆ ಹತ್ಯೆ, ತಾಯಿ ಜೈಲು ಪಾಲು; ಅನಾಥರಾದ ಮಕ್ಕಳ ನೆರವಿಗೆ ಧಾವಿಸಿದ ಶಾಸಕ ಭೀಮಣ್ಣ ನಾಯ್ಕ್
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,23,390 ಮತದಾರರಿದ್ದು, ಎಲ್ಲರಿಗೂ ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದೆ. ಇದುವರೆಗೆ 93,234 ಫಾರ್ಮ್ಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತರು ತಿಳಿಸಿದ್ದಾರೆ. ಮನೆ ಮನೆ ಪರಿಶೀಲನೆ ವೇಳೆ ಒಟ್ಟು 1,408 ಮತದಾರರನ್ನು ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಡಿ ಗುರುತಿಸಲಾಗಿದೆ. ಇದರಲ್ಲಿ 199 ಶಾಶ್ವತ ವಲಸೆ, 1,037 ಮರಣ ಹೊಂದಿದವರು ಹಾಗೂ 163 ದ್ವಿಪ್ರತಿ ಪ್ರಕರಣಗಳು ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಿಗದಿತ ವೇಳಾಪಟ್ಟಿಯಂತೆ ಮುಂದುವರಿದಿದ್ದು, ಅರ್ಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವಿವರಗಳನ್ನು ಪರಿಶೀಲಿಸಿ, ಎನ್ಯುಮರೇಷನ್ ಫಾರ್ಮ್ ಸಲ್ಲಿಸುವಂತೆ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.





