ಐಆರ್‌ಸಿಟಿಸಿ ಹೋಟೆಲ್ ಗುತ್ತಿಗೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ಆರೋಪಿಗಳ ವಿರುದ್ಧ ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯವು ದೋಷಾರೋಪಣೆಯನ್ನು ನಿಗದಿಪಡಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು, ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಸಾಕ್ಷ್ಯಧಾರಗಳನ್ನು ಪುರಸ್ಕರಿಸಿ ಆರೋಪಿಗಳ ವಿರುದ್ಧ ಮನಿ ಲ್ಯಾಂಡರಿಂಗ್ ತಡೆ ಕಾಯ್ದೆಯಡಿ (PMLA) ವಿಚಾರಣೆ ನಡೆಸಲು ಸೂಕ್ತ ಆಧಾರಗಳಿವೆ ಎಂದು ಅಭಿಪ್ರಾಯಪಟ್ಟಿದೆ.
2004 ರಿಂದ 2009 ರವರೆಗೆ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಐಆರ್‌ಸಿಟಿಸಿಗೆ ಸೇರಿದ ಪುರಿ ಮತ್ತು ರಾಂಚಿಯಲ್ಲಿರುವ ಬಿಎನ್‌ಆರ್ (BNR) ಹೋಟೆಲ್‌ಗಳ ನಿರ್ವಹಣೆ ಮತ್ತು ಅಭಿವೃದ್ಧಿ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನಿಯಮಗಳನ್ನು ಗಾಳಿಗೆ ತೂರಿ ನೀಡಲಾಗಿತ್ತು ಎಂಬ ಆರೋಪವಿದೆ.
ಇದನ್ನೂ ಓದಿ: ಹಿರಿಯ ಪುತ್ರನನ್ನು ಆರ್‌ಜೆಡಿಯಿಂದ ಉಚ್ಚಾಟಿಸಿದ ಲಾಲು ಪ್ರಸಾದ್ ಯಾದವ್
ಈ ಗುತ್ತಿಗೆ ನೀಡಿದ್ದಕ್ಕೆ ಪ್ರತಿಯಾಗಿ ಲಾಲು ಯಾದವ್ ಅವರ ಕುಟುಂಬಸ್ಥರು ಮತ್ತು ಆಪ್ತರು ಬೆನಾಮಿ ಕಂಪನಿ ಮೂಲಕ ದುಬಾರಿ ಬೆಲೆಯ ಜಮೀನನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದವು. ಸಿಬಿಐ ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು.
ನ್ಯಾಯಾಲಯವು ದೋಷಾರೋಪ ನಿಗದಿಪಡಿಸಿರುವುದರಿಂದ ಈ ಪ್ರಕರಣದ ವಿಚಾರಣೆ ಈಗ ಮುಂದಿನ ಹಂತಕ್ಕೆ ತಲುಪಿದ್ದು, ಲಾಲು ಕುಟುಂಬಕ್ಕೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಿದೆ. ಲಾಲು ಕುಟುಂಬ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಕಾನೂನಾತ್ಮಕವಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.





