ಅಸ್ಸಾಂ ಸಿಎಂ ಶರ್ಮಾ ಅವರ ‘ಕಂಡಲ್ಲಿ ಗುಂಡಿಕ್ಕುವ’ ಆದೇಶ ಸಾಂವಿಧಾನಿಕವೇ?

Date:

Advertisements

“ನಮ್ಮ ದೇಗುಲಗಳನ್ನು ಹಾನಿಪಡಿಸುವ ಉದ್ದೇಶದಿಂದ ಕೆಲ ಗುಂಪುಗಳು ಸಕ್ರಿಯವಾಗಿವೆ” ಎಂಬ ಕಾರಣ ನೀಡಿ ಅಸ್ಸಾಂ ಅಸ್ಸಾಂ ಸಿಎಂ ಶರ್ಮಾ(ಹಿಮಾಂತ ಬಿಸ್ವಾ ಶರ್ಮಾ) ಶುಕ್ರವಾರ ಧುಬ್ರಿ ಜಿಲ್ಲೆಯಲ್ಲಿ ʼಕಂಡಲ್ಲಿ ಗುಂಡಿಕ್ಕುವʼ ಆದೇಶ ನೀಡಿದ್ದಾರೆ.

ಗುಹಾವಟಿಯ ಧುಬ್ರಿ ಪಟ್ಟಣದ ಹನುಮಾನ್ ದೇವಾಲಯದ ಮುಂದೆ ಹಸುವಿನ ತಲೆ ಕಂಡುಬಂದಿದೆ ಎಂದು ಹೇಳಲಾದ ಒಂದು ದಿನದ ನಂತರ, ಜೂನ್ 8ರಂದು ಧುಬ್ರಿಯಲ್ಲಿ ಉದ್ವಿಗ್ನತೆ ಪ್ರಾರಂಭವಾಯಿತು. ಶರ್ಮಾ ಪ್ರಕಾರ, ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ನಾಯಕರು ಆರಂಭದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಮುಂದಾದರು. ಆದರೂ, ಮರುದಿನ ಅದೇ ಸ್ಥಳದಲ್ಲಿ ಮತ್ತೊಂದು ಹಸುವಿನ ತಲೆ ಪತ್ತೆಯಾದಾಗ ಪರಿಸ್ಥಿತಿ ಹದಗೆಟ್ಟಿದ್ದು, ರಾತ್ರಿಯಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ.

ಈ ಕೃತ್ಯಗಳನ್ನು, “ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಪ್ರಯತ್ನಗಳು ಎಂದಿರುವ ಶರ್ಮಾ ʼಕೋಮುವಾದಿ ಗುಂಪುʼ ಈ ಪ್ರದೇಶವನ್ನು ಅಸ್ಥಿರಗೊಳಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ʼನಬಿನ್ ಬಾಂಗ್ಲಾʼ(ನವೀನ್ ಬಾಂಗ್ಲಾ ಎಂದೂ ಕರೆಯಲಾಗುತ್ತದೆ) ಎಂಬ ಗುಂಪಿನ ಪ್ರತ್ಯೇಕತಾವಾದಿ ಪೋಸ್ಟರ್‌ಗಳು ಧುಬ್ರಿಯಲ್ಲಿ ಕಂಡುಬಂದಿವೆ. ಜಿಲ್ಲೆಯನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂದು ಒತ್ತಾಯಿಸಲಾಗಿದೆ. ಈ ಘಟನೆಗಳು ಬಾಂಗ್ಲಾದೇಶದ ಮೂಲಭೂತವಾದಿ ಶಕ್ತಿಗಳು ಮತ್ತು ಈದ್‌ಗೆ ಮುಂಚಿತವಾಗಿ ಪಶ್ಚಿಮ ಬಂಗಾಳದಿಂದ ಸಾವಿರಾರು ಜಾನುವಾರುಗಳನ್ನು ಖರೀದಿಸುವ ಹೊಸದಾಗಿ ಹೊರಹೊಮ್ಮಿದ ʼಗೋಮಾಂಸ ಮಾಫಿಯಾʼವನ್ನು ಒಳಗೊಂಡಿರುವವವರಿಗೂ ಸಂಬಂಧ ಹೊಂದಿರಬಹುದು” ಎಂದು ಶರ್ಮಾ ಆರೋಪಿಸಿದ್ದಾರೆ.

Advertisements

ಈ ಹಿನ್ನೆಲೆಯಲ್ಲಿ ಶರ್ಮಾ ಜೂನ್ 13ರಂದು ಧುಬ್ರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, “ಪಟ್ಟಣದ ಹನುಮಾನ್ ಮಂದಿರದ ಮೇಲೆ ಗೋಮಾಂಸ ಎಸೆಯುವ ಘಟನೆ ಎಂದಿಗೂ ಸಂಭವಿಸಬಾರದಿತ್ತು. ಅದರಲ್ಲಿ ಭಾಗಿಯಾಗಿರುವವರನ್ನು ಬಿಡಲಾಗುವುದಿಲ್ಲ” ಎಂದಿದ್ದಾರೆ.

ದೇವಾಲಯಗಳು ಮತ್ತು ನಾಮ್‌ಘರ್‌ಗಳು(ಪ್ರಾರ್ಥನಾ ಮಂದಿರಗಳು) ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವವರ ವಿರುದ್ಧ ʼಕಂಡಲ್ಲಿ ಗುಂಡಿಕ್ಕುವʼ ಆದೇಶ ಹೊರಡಿಸಿದ್ದಾರೆ. ಆದರೆ ಭಾರತದಲ್ಲಿ ಗಮನಾರ್ಹವಾದ ಸಾಂವಿಧಾನಿಕ ಮತ್ತು ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹಿಂಸಾಚಾರವನ್ನು ತಡೆಯಲು ಅಥವಾ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಅಂತಹ ಆದೇಶಗಳನ್ನು ಕೆಲವೊಮ್ಮೆ ತೀವ್ರ ಸಂದರ್ಭಗಳಲ್ಲಿ ಘೋಷಿಸಲಾಗುತ್ತದೆಯಾದರೂ, ಭಾರತೀಯ ಸಂವಿಧಾನ ಮತ್ತು ಕಾನೂನು ಚೌಕಟ್ಟಿನೊಂದಿಗೆ ಅವುಗಳ ಹೊಂದಾಣಿಕೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ.

ಸಾಂವಿಧಾನಿಕ ಮತ್ತು ಕಾನೂನು ಸಂದರ್ಭ ಜೀವನದ ಹಕ್ಕು(ಆರ್ಟಿಕಲ್ 21): ಭಾರತೀಯ ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದ ಪ್ರಕಾರ ಹೊರತುಪಡಿಸಿ ಯಾವುದೇ ವ್ಯಕ್ತಿಯ ಜೀವನ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದೆಂದು ಹೇಳುತ್ತದೆ.

ತಕ್ಷಣದ ನ್ಯಾಯಾಂಗ ಮೇಲ್ವಿಚಾರಣೆಯಿಲ್ಲದೆ ಕೊಲ್ಲಲು ಪ್ರಚೋದಿಸುವಂತಹ ʼಕಂಡಲ್ಲಿ ಗುಂಡಿಕ್ಕುವʼ ಎಂಬ ಆದೇಶಗಳು ಸ್ಪಷ್ಟ ಕಾನೂನು ಚೌಕಟ್ಟಿಗೆ ಸಮಾನವಾಗಿ ಅನ್ವಯಿಸದಿದ್ದರೆ 21ನೇ ವಿಧಿಯನ್ನು ಉಲ್ಲಂಘಿಸುವ ಸಾಧ್ಯತೆಯಿದೆ. ಯಾವುದೇ ಗುಂಡು ಹಾರಿಸುವಂತಹ ಕ್ರಿಯೆಗಳು ಕಾನೂನಿನ ಚೌಕಟ್ಟಿನೊಳಗೆ, ಅನಿವಾರ್ಯವಾಗಿ ಮತ್ತು ಸಮಂಜಸವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ನಿರಂತರವಾಗಿ ಒತ್ತಿ ಹೇಳಿದೆ.

ಕಾನೂನು ಚೌಕಟ್ಟು: ಕಾನೂನು ಜಾರಿ ಸಂಸ್ಥೆಗಳಿಂದ ಗುಂಡು ಹಾರಿಸುವ ಪ್ರಕ್ರಿಯೆಗಳನ್ನು 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(CrPC) ಮತ್ತು ರಾಜ್ಯ ಪೊಲೀಸ್ ನಿಯಮಗಳಂತಹ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. CrPC ಯ ಸೆಕ್ಷನ್ 46, ಒಬ್ಬ ವ್ಯಕ್ತಿಯು ಬಲವಂತವಾಗಿ ವಿರೋಧಿಸಿದರೆ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಬಂಧನವನ್ನು ಜಾರಿಗೆ ತರಲು ಪೊಲೀಸರಿಗೆ ʼಅಗತ್ಯವಿರುವ ಎಲ್ಲ ವಿಧಾನಗಳನ್ನುʼ ಬಳಸಲು ಅನುಮತಿಸುತ್ತದೆ. ಆದರೆ ಇದು ಮರಣದಂಡನೆ ಅಥವಾ ಗುಂಡು ಹಾರಿಸುವ ಆದೇಶಗಳನ್ನು ಸ್ಪಷ್ಟವಾಗಿ ಅಧಿಕೃತಗೊಳಿಸುವುದಿಲ್ಲ.

1861ರ ಪೊಲೀಸ್ ಕಾಯ್ದೆ ಮತ್ತು ರಾಜ್ಯ ಪೊಲೀಸ್ ಕೈಪಿಡಿಗಳು ಗಲಭೆಗಳು ಮತ್ತು ಕಾನೂನುಬಾಹಿರ ಸಭೆಗಳನ್ನು ನಿರ್ವಹಿಸುವ ಕಾರ್ಯವಿಧಾನಗಳನ್ನು ವಿವರಿಸುತ್ತವೆ. CrPCಯ ಸೆಕ್ಷನ್ 129 ಕಾನೂನುಬಾಹಿರ‌ ಚಟುವಟಿಕೆಗಳನ್ನು ತಡೆಗಟ್ಟಲು ಲಾಠಿ ಚಾರ್ಜ್‌, ಅಶ್ರುವಾಯುಗಳಂತಹ ಜೀವಹಾನಿಯಲ್ಲದ ಕ್ರಮಗಳನ್ನು ಕೈಗೊಳ್ಳಬಹುದು. ಪರಿಸ್ಥಿತಿ ಕೈ ಮೀರಿದಾಗ ಕೊನೆಯ ಉಪಾಯವಾಗಿ ಕಾಲಿಗೆ ಮಾತ್ರ ಗುಂಡು ಹಾರಿಸಬಹುದು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 96–106ರ ಪ್ರಕಾರ ಸಾರ್ವಜನಿಕ ಸೇವಕರು ಸೇರಿದಂತೆ ಆತ್ಮರಕ್ಷಣೆಯ ಹಕ್ಕನ್ನು ಗುರುತಿಸುತ್ತದೆ. ಆದರೆ ಇದು ಅವಶ್ಯಕತೆ ಹಾಗೂ ಪ್ರಮಾಣಾನುಗುಣತೆಗೆ ಒಳಪಟ್ಟಿರುತ್ತದೆ.

ಕಂಡಲ್ಲಿ ಗುಂಡು ಹಾರಿಸುವ ಆದೇಶಗಳು ಜಾರಿಯಲ್ಲಿವೆ: ಭಾರತದಲ್ಲಿ, “ಕಂಡಲ್ಲಿ ಗುಂಡಿಕ್ಕುವ” ಆದೇಶಗಳು ಔಪಚಾರಿಕ ಕಾನೂನು ಪದವಲ್ಲ. ಆದರೆ ಗಲಭೆಗಳು, ಕೋಮು ಹಿಂಸಾಚಾರ ಅಥವಾ ದಂಗೆಯಂತಹ ತೀವ್ರ ಸಂದರ್ಭಗಳಲ್ಲಿ ಹೊರಡಿಸಲಾದ ಕಾರ್ಯನಿರ್ವಾಹಕ ನಿರ್ದೇಶನಗಳನ್ನು ವಿವರಿಸಲು ಆಡುಮಾತಿನಲ್ಲಿ ಬಳಸಲಾಗುತ್ತದೆ. ಅಂತಹ ಆದೇಶಗಳನ್ನು ಸಾಮಾನ್ಯವಾಗಿ CrPCಯ ಸೆಕ್ಷನ್ 144ರ ಅಡಿಯಲ್ಲಿ ನೀಡಲಾಗುತ್ತದೆ. ಇದು ಸಾರ್ವಜನಿಕ ಶಾಂತಿಗೆ ಭಂಗ ತರುವುದನ್ನು ತಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ನಿಷೇಧಿತ ಆದೇಶಗಳನ್ನು ಹೊರಡಿಸಲು ಅಧಿಕಾರ ನೀಡುತ್ತದೆ. ಆದಾಗ್ಯೂ, ಈ ಆದೇಶಗಳು ಸಾಂವಿಧಾನಿಕ ರಕ್ಷಣೆಗಳನ್ನು ಅನುಸರಿಸಬೇಕು.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ vs ಯೂನಿಯನ್ ಆಫ್ ಇಂಡಿಯಾ(2005) ನಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್, ಗಲಭೆಗೊಳಗಾದ ಪ್ರದೇಶಗಳಲ್ಲಿಯೂ ಕೂಡ ಪೊಲೀಸರು ಅಥವಾ ಸಶಸ್ತ್ರ ಪಡೆಗಳು ಅತಿಯಾದ ಬಲಪ್ರಯೋಗವನ್ನು ತನಿಖೆ ಮಾಡಬೇಕು. ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ತೀರ್ಪು ನೀಡಿದೆ.

“ಯಾವುದೇ ಜೀವ ನಷ್ಟವು ‘ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನ’ವನ್ನು ಅನುಸರಿಸಬೇಕು” ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.

ಎಕ್ಸ್‌ಟ್ರಾ ಜುಡಿಷಿಯಲ್ ಎಕ್ಸಿಕ್ಯೂಷನ್ ವಿಕ್ಟಿಮ್ ಫ್ಯಾಮಿಲೀಸ್ ಅಸೋಸಿಯೇಷನ್ ​​ವರ್ಸಸ್ ಯೂನಿಯನ್ ಆಫ್ ಇಂಡಿಯಾ(2016) ಪ್ರಕರಣದಲ್ಲಿ, ನ್ಯಾಯಾಲಯವು ಆಪಾದಿತ ಉಗ್ರಗಾಮಿಗಳನ್ನು ಒಳಗೊಂಡ ಪ್ರಕರಣಗಳಲ್ಲಿಯೂ ಕೂಡ, ಕಾನೂನುಬಾಹಿರ ಹತ್ಯೆಗಳು ಅಥವಾ ʼನಕಲಿ ಎನ್‌ಕೌಂಟರ್‌ಗಳುʼ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಹಾಗಾಗಿ ಸಂಪೂರ್ಣ ತನಿಖೆಯ ಅಗತ್ಯವಿರುತ್ತದೆ. ಅನಿಲ್ ಯಾದವ್ ವರ್ಸಸ್ ಸ್ಟೇಟ್ ಆಫ್ ಬಿಹಾರ(1982) (ಬಿಹಾರ ಬ್ಲೈಂಡಿಂಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ) ಪ್ರಕರಣದಲ್ಲಿ, ಪೊಲೀಸ್ ಕ್ರಮಗಳು ಸಾಂವಿಧಾನಿಕ ರಕ್ಷಣೆಗಳಿಗೆ ಬದ್ಧವಾಗಿರಬೇಕು. ಇಲ್ಲದಿದ್ದರೆ ಇಂತಹ ಅನಿಯಂತ್ರಿತ ಆದೇಶಗಳು ಕಾನೂನಿನ ನಿಯಮವನ್ನು ಉಲ್ಲಂಘಿಸುತ್ತವೆ ಎಂದು ನ್ಯಾಯಾಲಯ ಒತ್ತಿಹೇಳಿದೆ.

ಗಲಭೆಗೊಳಗಾದ ಪ್ರದೇಶಗಳು ಮತ್ತು ವಿಶೇಷ ಕಾನೂನುಗಳು: ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರಗಳು) ಕಾಯ್ದೆ 1958(AFSPA) ಅಡಿಯಲ್ಲಿ ʼಗಲಭೆಗೊಳಗಾದʼ ಎಂದು ಘೋಷಿಸಲಾದ ಪ್ರದೇಶಗಳಲ್ಲಿ, ಭದ್ರತಾ ಪಡೆಗಳು ಗುಂಡು ಹಾರಿಸುವಂತಹ ಕ್ರಮಗಳನ್ನು ಬಳಸಲು ಸಂಪೂರ್ಣ ಅಧಿಕಾರವನ್ನು ಹೊಂದಿದೆ. ಆದರೆ ಧುಬ್ರಿ ಪ್ರಸ್ತುತ AFSPA ಅಡಿಯಲ್ಲಿಲ್ಲ. ಆದ್ದರಿಂದ, ನಿಯಮಿತ ಕ್ರಿಮಿನಲ್ ಮತ್ತು ಸಾಂವಿಧಾನಿಕ ಕಾನೂನುಗಳು ಅನ್ವಯಿಸುತ್ತವೆ. AFSPA ಅಡಿಯಲ್ಲಿಯೂ ಸಹ, ʼಅಧಿಕಾರಗಳು ಸಂಪೂರ್ಣವಲ್ಲ, ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಿ ಸಂಯಮದಿಂದ ವರ್ತಿಸಬೇಕುʼ ಎಂದು ನಾಗಾ ಪೀಪಲ್ಸ್ ಮೂವ್‌ಮೆಂಟ್ ಆಫ್ ಹ್ಯೂಮನ್ ರೈಟ್ಸ್ vs ಯೂನಿಯನ್ ಆಫ್ ಇಂಡಿಯಾ 1998ದಂತಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿದ್ದೀರಾ? ಶಿಲ್ಲಾಂಗ್ ಹನಿಮೂನ್ ಪ್ರಕರಣ: ಪಿತೃಪ್ರಭುತ್ವದಲ್ಲಿ ಮಹಿಳಾ ಸ್ವಾತಂತ್ರ್ಯದ ಹತ್ಯೆಯಿಂದ ಸಂಭವಿಸಿದ ಕೊಲೆ

ಸಿಎಂ ಶರ್ಮಾ ಜೂನ್ 13ರಂದು ಧುಬ್ರಿಯಲ್ಲಿ ʼಕಂಡಲ್ಲಿ ಗುಂಡಿಕ್ಕುವʼ ಆದೇಶಗಳನ್ನು ಘೋಷಿಸಿದರು. ಆದರೆ ಭಾರತೀಯ ಕಾನೂನಿನಲ್ಲಿ ಇಂತಹ ಪದಗಳನ್ನು ವ್ಯಾಖ್ಯಾನಿಸಲಾಗಿಲ್ಲ. ಸಾಮಾಜಿಕ-ಧಾರ್ಮಿಕ ಸನ್ನಿವೇಶದಲ್ಲಿ, ಈ ಆದೇಶಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿವೆಯೇ ಎಂಬ ಆತಂಕ ಉಂಟಾಗುತ್ತದೆ. ಇಂತಹ ಪದಬಳಕೆಯು ಪೊಲೀಸರು ಅಥವಾ ಭದ್ರತಾ ಪಡೆಗಳಂತಹ ಕಾನೂನು ಜಾರಿ ಸಂಸ್ಥೆಗಳಿಗೆ ಗಲಭೆಕೋರರನ್ನು ತಕ್ಷಣ ಗುಂಡಿಟ್ಟು ಕೊಲ್ಲಲು ಅಧಿಕಾರ ನೀಡುವಂತೆ ತೋರುತ್ತದೆ. ಇದರಿಂದ ಸಂಭಾವ್ಯವಾಗಿ ದುರುಪಯೋಗ ಅಥವಾ ಅತಿಯಾದ ಬಲಪ್ರಯೋಗಕ್ಕೆ ಕಾರಣವಾಗಬಹುದು. ಅತಿಯಾದ ಬಲಪ್ರಯೋಗವು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹಾಗಾಗಿ ಕಾನೂನಿನ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X