ಇಸ್ರೇಲ್‌ನ ರಾಜಧಾನಿ ಜೆರುಸಲೇಂನ ಹೊರವಲಯದಲ್ಲಿ ಭೀಕರ ಕಾಡ್ಗಿಚ್ಚು ಅವರಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರ ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಿದೆ. ಘಟನಾ ಸ್ಥಳದ ಬಳಿ ನೆಲೆಸಿದ್ದ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಭೀಕರ ಕಾಡ್ಗಿಚ್ಚಿನಿಂದ ಹೊಗೆ ಆವರಿಸಿಕೊಂಡಿದೆ. ಜೆರುಸಲೇಂ ನಗರದ ಸುತ್ತಮುತ್ತಲಿನ ಹೆದ್ದಾರಿಗಳು ಹೊಗೆಯಿಂದ ಆವೃತ್ತವಾಗಿದೆ. ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಅಧಿಕಾರಿಗಳು, ರಕ್ಷಣಾ ತಂಡಗಳು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇಸ್ರೇಲ್‌ನಲ್ಲಿ ಸಂಭವಿಸಿದ ಅಂತ್ಯಂತ ಭೀಕರ ಕಾಡ್ಗಿಚ್ಚು ಇದಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಇಸ್ರೇಲ್‌ನ ರಕ್ಷಣಾ ಸಂಸ್ಥೆ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ)ಹೇಳಿದ್ದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.
ಕಾಡ್ಗಿಚ್ಚಿನಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈವರೆಗೆ 23 ಮಂದಿ ಗಾಯಾಳುಗಳನ್ನು ರಕ್ಷಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನವರು ಹೊಗೆಯಿಂದ ಉಸಿರಾಟದ ಸಮಸ್ಯೆ ಮತ್ತು ಬೆಂಕಿ ತಗುಲಿ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಎಂಡಿಎ ತಿಳಿಸಿದೆ. ಗಾಯಗೊಂಡವರಲ್ಲಿ ಇಬ್ಬರು ಗರ್ಭಿಣಿಯರು ಮತ್ತು ಒಂದು ವರ್ಷದೊಳಗಿನ ಎರಡು ಶಿಶುಗಳಿವೆ ಎಂದು ಅದು ಹೇಳಿದೆ. ಯಾವುದೇ ಮನುಷ್ಯರಿಗೆ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಫೋಟೋಗಳಲ್ಲಿ ಜೆರುಸಲೇಂನಿಂದ ಟೆಲ್ ಅವಿವ್‌ಗೆ ಹೋಗುವ ಮುಖ್ಯ ಮಾರ್ಗ 1ರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಸುತ್ತಮುತ್ತಲಿನ ಬೆಟ್ಟಗಳ ತುದಿಯಲ್ಲಿ ದಟ್ಟವಾದ ಹೊಗೆ ಆವರಿಸಿರುವುದು. ಅನೇಕ ಜನರು ತಮ್ಮ ಕಾರುಗಳನ್ನು ತ್ಯಜಿಸಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ನೋಡಬಹುದು.
INSANE sandstorm sweeps southern Israel, West Bank amidst raging wildfire crisis pic.twitter.com/QPDIgw3hft
— RT (@RT_com) May 1, 2025
ಇಸ್ರೇಲಿ ಮಾಧ್ಯಮಗಳ ಪ್ರಕಾರ, 160ಕ್ಕೂ ಹೆಚ್ಚು ರಕ್ಷಣಾ ಮತ್ತು ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಹಲವು ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸಲು ಬಳಸಿಕೊಳ್ಳಲಾಗಿದೆ.
ಇಸ್ರೇಲಿ ಸೇನೆ ಕೂಡ ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತಿದೆ. ಶುಷ್ಕ ಹವಾಮಾನ ಪರಿಸ್ಥಿತಿ ಮತ್ತು ಬಲವಾದ ಗಾಳಿಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವರದಿಗಳು ಹೇಳಿವೆ.
ಇಸ್ರೇಲಿ ಅಗ್ನಿಶಾಮಕ ದಳ ನಿನ್ನೆ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇದು ಇಸ್ರೇಲ್‌ನಲ್ಲಿ ಸಂಭವಿಸಿದ ಇದುವರೆಗಿನ ಅತಿದೊಡ್ಡ ಬೆಂಕಿ ದುರಂತ ಎಂದು ಹೇಳಿದೆ. ಬೆಂಕಿ ವ್ಯಾಪಿಸಿರುವ ಪ್ರದೇಶ ರಾಷ್ಟ್ರೀಯ ಉದ್ಯಾನವನಗಳು ಮತ್ತು ಕಾಡುಗಳಿಗೆ ಜನರ ಪ್ರವೇಶ ನಿಷೇಧಿಸಲಾಗಿದೆ. ಜೆರುಸಲೇಂನ ಪ್ರಮುಖ ಹೆದ್ದಾರಿ ಮಾರ್ಗ 1 ಸೇರಿದಂತೆ ಅನೇಕ ರಸ್ತೆಗಳನ್ನು ಸಹ ಮುಚ್ಚಲಾಗಿದೆ.
ಇದು ಇಸ್ರೇಲ್‌ನಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಅಗ್ನಿ ದುರಂತ. ಬೆಂಕಿ ನಿಯಂತ್ರಣಕ್ಕೆ ಬರಲು ಇನ್ನು ತುಂಬಾ ಸಮಯ ಬೇಕಾಗಬಹುದು. ಸದ್ಯಕ್ಕೆ ಬೆಂಕಿ ಹತೋಟಿ ಬರುತ್ತಿಲ್ಲ. ನಾವು ನಮ್ಮ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಜೆರುಸಲೇಂ ಜಿಲ್ಲೆಯ ಕಮಾಂಡರ್ ಶ್ಮುಲಿಕ್ ಫ್ರೀಡ್ಮನ್ ಹೇಳಿದ್ದಾರೆ.
ಗಾಳಿಯು ಗಂಟೆಗೆ 90-100 ಕಿಲೋಮೀಟರ್ (56-62 mph) ವೇಗವನ್ನು ಪಡೆದುಕೊಳ್ಳುವ ನಿರೀಕ್ಷೆಯಿರುವುದರಿಂದ ಬೆಂಕಿ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ಫ್ರೀಡ್ಮನ್ ಆತಂಕ ವ್ಯಕ್ತಪಡಿಸಿದ್ದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇಸ್ರೇಲಿ ವಾಯುಪಡೆಯು 18,000 ಲೀಟರ್‌ಗಳಷ್ಟು ಅಗ್ನಿಶಾಮಕ ಸಾಮಗ್ರಿಗಳನ್ನು ಹಿಡಿದಿಟ್ಟುಕೊಳ್ಳಬಲ್ಲ C-130J ಸೂಪರ್ ಹರ್ಕ್ಯುಲಸ್ ಭಾರೀ ಸಾರಿಗೆ ವಿಮಾನಗಳನ್ನು ಕಾರ್ಯಾಚರಣೆಯಲ್ಲಿ ನಿಯೋಜಿಸಿದೆ ಎಂದು ವರದಿಯಾಗಿದೆ. ಇದುವರೆಗೆ ಸುಮಾರು 3,000 ಎಕರೆ ಭೂಮಿ ಬೆಂಕಿಯಿಂದ ಸುಟ್ಟುಹೋಗಿದೆ ಎಂದು ವರದಿಯಾಗಿದೆ.
ಸ್ವಾತಂತ್ರ್ಯ ದಿನಾಚರಣೆ ರದ್ದು
ಕಾಡ್ಗಿಚ್ಚು ದುರಂತದ ಹಿನ್ನೆಲೆ, ಬುಧವಾರ ನಡೆಯಬೇಕಿದ್ದ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಜೆರುಸಲೇಂನಲ್ಲಿ ಸರ್ಕಾರದ ವತಿಯಿಂದ ನಡೆಯಬೇಕಿದ್ದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ರದ್ದುಮಾಡಲಾಗಿದೆ. ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿ ದೇಶದ ಜನರಿಗೆ ಪ್ರದರ್ಶಿಸಲಾಗಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕಾಡ್ಗಿಚ್ಚು ಜೆರುಸಲೇಂ ನಗರದ ತಲುಪಬಹುದು ಎಂದು ಎಚ್ಚರಿಸಿದ್ದಾರೆ. ಗಾಳಿಯ ವೇಗಕ್ಕೆ ಬೆಂಕಿ ನಗರದೊಳಗೆ ವ್ಯಾಪಿಸಬಹುದು ಎಂದು ವಿಡಿಯೋ ಸಂದೇಶದಲ್ಲಿ ಅವರು ಹೇಳಿದ್ದಾರೆ.