ಇಸ್ರೇಲ್-ಇರಾನ್ ಸಂಘರ್ಷ | ಭಾರತಕ್ಕೆ ಗಂಭೀರ ಸವಾಲುಗಳು, ಪರಿಣಾಮಗಳು

Date:

Advertisements
ಗಾಜಾದಲ್ಲಿ ಕದನವಿರಾಮಕ್ಕಾಗಿ ವಿಶ್ವಸಂಸ್ಥೆ ತೆಗೆದುಕೊಂಡ ನಿರ್ಣಯದಲ್ಲಿ ಭಾರತವು ತಟಸ್ಥವಾಗಿ ದೂರ ಉಳಿಯಿತು. BRICS, SCO, SAARCನ ಎಲ್ಲ ಇತರ ಸದಸ್ಯರು ಹಾಗೂ ಅಮೆರಿಕ ಹೊರತುಪಡಿಸಿ ಜಿ7ನ ಎಲ್ಲ ಸದಸ್ಯರು ಗಾಜಾ ಮೇಲಿನ ಇಸ್ರೇಲ್‌ ದಾಳಿಯನ್ನು ವಿರೋಧಿಸಿ, ಮತ ಚಲಾಯಿಸಿದ್ದರು. ಆದರೆ, ಭಾರತ ತಟಸ್ಥ ನಿಲುವು ತಳೆಯಿತು. ಈ ಮೂಲಕ, ದಶಕಗಳ ಹಿಂದಿನವರೆಗೂ ಪ್ಯಾಲೆಸ್ತೀನ್ ಪರವಾಗಿ ನಿಲುವು ಹೊಂದಿದ್ದ ಭಾರತ, ಈಗ ಇಸ್ರೇಲ್‌ನ್ನು ಟೀಕಿಸುವುದಿಲ್ಲ ಎಂದು ಸ್ಪಷ್ಪಪಡಿಸಿತು.

ಇಸ್ರೇಲ್-ಇರಾನ್ ಸಂಘರ್ಷ ಭುಗಿಲೆದ್ದು ಒಂದು ವಾರ ದಾಟಿದೆ. ಉದ್ವಿಗ್ನತೆ ಮುಂದುವರೆದಿದೆ. ಇಸ್ರೇಲ್ ಪರವಾಗಿ ಅಮೆರಿಕ ಕೂಡ ಇರಾನ್‌ ಮೇಲೆ ದಾಳಿಗೆ ಇಳಿದಿದೆ. ಭಾನುವಾರ ಮುಂಜಾನೆ ಇರಾನ್‌ ಮೂರು ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಪರಿಣಾಮ, ಇಸ್ರೇಲ್-ಇರಾನ್ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಭಾರತವು ಎರಡೂ ರಾಷ್ಟ್ರಗಳಲ್ಲಿದ್ದ ತನ್ನ ನಾಗರಿಕರನ್ನು ವಾಪಸ್‌ ಕರೆತರುತ್ತಿದೆ. ಈ ನಡುವೆ, ಇಸ್ರೆಲ್-ಇರಾನ್ ಸಂಘರ್ಷವು ಭಾರತದ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬ ಆತಂಕ, ಕಳವಳ ಕೂಡ ವ್ಯಕ್ತವಾಗುತ್ತಿದೆ.

ಜೂನ್ 13 ರಂದು ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿ, ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಇರಾನ್ ಕೂಡ ಗಂಭೀರ ದಾಳಿಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯಿಸಿತು. ಜೊತೆಗೆ, ಇಸ್ರೇಲ್ಅನ್ನು ತನ್ನ ಸಾಕು ನಾಯಿಯಂತೆ ಬಳಸಿಕೊಳ್ಳುತ್ತಿರುವ ಟ್ರಂಪ್ (ಅಮೆರಿಕ) ಇರಾನ್‌ಗೆ ಎಚ್ಚರಿಕೆಯ ದಾಟಿಯಲ್ಲಿ ಬೆದರಿಕೆ ಹಾಕಿದರು. ಇದು, ಇಸ್ರೇಲ್-ಇರಾನ್ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಉಭಯ ರಾಷ್ಟ್ರಗಳ ಪರಸ್ಪರರ ಮೇಲೆ ಕ್ಷಿಪಣಿ, ಬಾಂಬ್ ದಾಳಿಗಳನ್ನು ಮುಂದುವರೆಸಿವೆ.

ಈ ನಡುವೆ, ಇರಾನ್‌ ಮೇಲೆ ಇಸ್ರೇಲ್ ದಾಳಿಗೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದರು. ಇರಾನ್‌ನ ಟೆಹ್ರಾನ್‌ ಸೇರಿದಂತೆ ನಾನಾ ನಗರಗಳ ಮೇಲೆ ದಾಳಿ ಮಾಡುವುದಾಗಿ ಮಾಹಿತಿ ನೀಡಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಜೂನ್ 13ರಂದು ನಡೆದ ದಾಳಿಯಲ್ಲಿ ಇರಾನ್‌ನ ಹಿರಿಯ ಜನರಲ್‌ಗಳನ್ನು ಇಸ್ರೇಲ್ ಹತ್ಯೆ ಮಾಡಿತು. ಇಸ್ರೇಲ್‌ನ ಈ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಇರಾನ್ ಯು.ಎನ್ ಭದ್ರತಾ ಮಂಡಳಿಯಲ್ಲಿ ವಾದಿಸಿತು. ಆದರೆ, ತನ್ನ ದಾಳಿಯನ್ನು ಸಮರ್ಥಿಸಿಕೊಂಡಿತು.

Advertisements

ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಭಾರತದ ಧೋರಣೆ

ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇಸ್ರೇಲ್ ದಾಳಿಯಲ್ಲಿ ಖಂಡಿಸಲಿಲ್ಲ. ಆದರೆ, ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಉಭಯ ರಾಷ್ಟ್ರಗಳಲ್ಲಿ ಶೀಘ್ರವೇ ಶಾಂತಿ ಮತತು ಸ್ಥಿರತೆ ಮರುಸ್ಥಾಪನೆಯಾಗಲಿ ಎಂದು ಆಶಿಸಿದರು. ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗಿನ ಕರೆ ಮೂಲಕ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಂತಾರಾಷ್ಟ್ರೀಯ ಸಮುದಾಯದ ಭಾಗವಾಗಿ ಭಾರತವು ಕಳವಳ ವ್ಯಕ್ತಪಡಿಸುತ್ತದೆ ಎಂದರು. ಪ್ರತೀಕಾರದ ಬದಲು ರಾಜತಾಂತ್ರಿಕ ಮಾತುಕತೆ ನಡೆಸುವಂತೆ ಒತ್ತಾಯಿಸಿದರು.

ಇಸ್ರೇಲ್‌ನ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರೊಂದಿಗೂ ಮಾತನಾಡಿದ ಜೈಶಂಕರ್, ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಆದರೆ, ಇಸ್ರೇಲ್‌ನ ದಾಳಿಯನ್ನು ಖಂಡಿಸಲಿಲ್ಲ. ಮಾತ್ರವಲ್ಲದೆ, ಇಸ್ರೇಲ್ ದಾಳಿಯನ್ನು ಖಂಡಿಸುವ ಚೀನಾ, ರಷ್ಯಾ, ಇರಾನ್, ಪಾಕಿಸ್ತಾನ, ಬೆಲಾರಸ್ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳನ್ನು ಒಳಗೊಂಡಿರುವ ಶಾಂಘೈ ಸಹಕಾರ ಸಂಘಟನೆ (SCO) ಹೊರಡಿಸಿದ ಹೇಳಿಕೆಯಿಂದ ಭಾರತ ದೂರ ಉಳಿಯಿತು.

ಕಳೆದ ವಾರ, ಗಾಜಾದಲ್ಲಿ ಕದನವಿರಾಮಕ್ಕಾಗಿ ವಿಶ್ವಸಂಸ್ಥೆ ತೆಗೆದುಕೊಂಡ ನಿರ್ಣಯದಲ್ಲಿ ಭಾರತವು ತಟಸ್ಥವಾಗಿ ದೂರ ಉಳಿಯಿತು. BRICS, SCO, SAARCನ ಎಲ್ಲ ಇತರ ಸದಸ್ಯರು ಹಾಗೂ ಅಮೆರಿಕ ಹೊರತುಪಡಿಸಿ ಜಿ7ನ ಎಲ್ಲ ಸದಸ್ಯರು ಗಾಜಾ ಮೇಲಿನ ಇಸ್ರೇಲ್‌ ದಾಳಿಯನ್ನು ವಿರೋಧಿಸಿ, ಮತ ಚಲಾಯಿಸಿದ್ದರು. ಆದರೆ, ಭಾರತ ತಟಸ್ಥ ನಿಲುವು ತಳೆಯಿತು. ಈ ಮೂಲಕ, ದಶಕಗಳ ಹಿಂದಿನವರೆಗೂ ಪ್ಯಾಲೆಸ್ತೀನ್ ಪರವಾಗಿ ನಿಲುವು ಹೊಂದಿದ್ದ ಭಾರತ, ಈಗ ಇಸ್ರೇಲ್‌ನ್ನು ಟೀಕಿಸುವುದಿಲ್ಲ ಎಂದು ಸ್ಪಷ್ಪಪಡಿಸಿತು.

ಸಂಘರ್ಷ ಪೀಡಿತ ರಾಷ್ಟ್ರಗಳಲ್ಲಿನ ಭಾರತೀಯರ ಸ್ಥಿತಿ ಏನು?

ಸಂಘರ್ಷ ಉಲ್ಬಣಗೊಂಡಂತೆ, ಭಾರತೀಯ ವಿದೇಶಾಂಗ ಸಚಿವಾಲಯ, ಟ್ರೆಹ್ರಾನ್ ಮತ್ತು ತೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ‘ಆಪರೇಷನ್ ಸಿಂಧು’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿ, ಎರಡೂ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರುತ್ತಿವೆ. ಇರಾನ್‌ನಲ್ಲಿ ಸುಮಾರು 10,000 ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 25,000 ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಇದ್ದಾರೆ. ಅವರಲ್ಲಿ ಈವರೆಗೆ 827 ಮಂದಿ ಭಾರತೀಯರನ್ನು ಮರಳಿ ಭಾರತಕ್ಕೆ ಕರೆತರಲಾಗಿದೆ. ಇನ್ನೂ, ಬೃಹತ್ ಸಂಖ್ಯೆಯ ಭಾರತೀಯರು ಉಭಯ ರಾಷ್ಟ್ರಗಳಲ್ಲಿ ಸಿಲುಕಿದ್ದಾರೆ.

ಭಾರತಕ್ಕೆ ಆರ್ಥಿಕವಾಗಿ ಏನೆಲ್ಲ ಅಪಾಯಗಳಿವೆ?

ಕಳೆದ ಕೆಲವು ವರ್ಷಗಳಲ್ಲಿ ಇಸ್ರೇಲ್-ಇರಾನ್ ನಡುವಿನ ಸಂಘರ್ಷದಿಂದಾಗಿ ಆ ಎರಡೂ ರಾಷ್ಟ್ರಗಳ ಜೊತೆಗಿನ ಭಾರತದ ವ್ಯಾಪಾರದ ಮಟ್ಟ ಕಡಿಮೆಯಾಗಿದೆ. ಹಿಂದಿನ ಟ್ರಂಪ್ ಆಡಳಿತದ ಒತ್ತಾಯಕ್ಕೆ ಮಣಿದು ಭಾರತವು ಇರಾನ್‌ ಜೊತೆಗಿನ ತೈಲ ವ್ಯಾಪಾರವನ್ನು ರದ್ದುಗೊಳಿಸಿತು. ಪರಿಣಾಮವಾಗಿ, ಇರಾನ್‌ನೊಂದಿಗಿನ ವ್ಯಾಪಾರವು 2017ರಲ್ಲಿದ್ದ 14 ಬಿಲಿಯನ್‌ ಡಾಲರ್‌ನಿಂದ ಕಳೆದ ವರ್ಷ 1.4 ಬಿಲಿಯನ್‌ ಡಾಲರ್‌ಗೆ ಕುಸಿಯಿತು. ಇನ್ನು, ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಮತ್ತು ಗಾಜಾ ಮೇಲಿನ ಇಸ್ರೇಲ್ ದಾಳಿಯಿಂದಾಗಿ ಇಸ್ರೇಲ್ ಜೊತೆಗಿನ ವ್ಯಾಪಾರ ಸಂಬಂಧವೂ ಅಸ್ತವ್ಯಸ್ತಗೊಂಡಿತು. ಇಸ್ರೇಲ್ ಜೊತೆಗಿನ ವ್ಯಾಪಾರ ವಹಿವಾಟು 2022ರಲ್ಲಿ 11 ಬಿಲಿಯನ್‌ ಡಾಲರ್‌ ಇದ್ದದ್ದು, ಕಳೆದ ವರ್ಷ 3.75 ಬಿಲಿಯನ್‌ ಡಾಲರ್‌ಗೆ ಕುಸಿದಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಆದರೆ, ಇಸ್ರೇಲ್‌ನಿಂದ ಭಾರತವು ಖರೀದಿಸುವ ರಕ್ಷಣಾ ಸಾಮಗ್ರಿಗಳ ಖರೀದಿ ಮೌಲ್ಯವು 2015ರಲ್ಲಿ 5.6 ಮಿಲಿಯನ್‌ ಡಾಲರ್‌ ಇದ್ದದ್ದು, ಈಗ 128 ಮಿಲಿಯನ್‌ ಡಾಲರ್‌ಗೆ ಏರಿದೆ. ಆದರೆ, ಇತರ ಎಲ್ಲ ವ್ಯಾಪಾರಗಳೂ ಕುಸಿದಿವೆ.

ಗಮನಾರ್ಹವಾಗಿ, ಭಾರತದ ಬಾಸ್ಮಿತಿ ಅಕ್ಕಿಯನ್ನು ಖರೀದಿಸುವ ರಾಷ್ಟ್ರಗಳಲ್ಲಿ ಇರಾನ್ 2ನೇ ಸ್ಥಾನದಲ್ಲಿದೆ. ಆದರೆ, ಸಂಘರ್ಷದಿಂದಾಗಿ ಬಂದರುಗಳನ್ನು ಮುಚ್ಚಲಾಗಿದ್ದು, ಅಕ್ಕಿ ಖರೀದಿಯನ್ನು ಇರಾನ್ ಸ್ಥಗಿತಗೊಳಿಸಿದೆ. ಹೀಗಾಗಿ, ಭಾರತದ ಅಕ್ಕಿ ರಫ್ತಾಗದೆ, ಭಾರತೀಯ ಮಾರುಕಟ್ಟೆಯಲ್ಲಿ ಅಕ್ಕಿ ದಾಸ್ತಾನು ಹೆಚ್ಚುವ ಮತ್ತು ಬೆಲೆ ಕುಸಿಯುವ ಆತಂಕವೂ ಇದೆ.

ಜೊತೆಗೆ, ಥಿಂಕ್‌ಟ್ಯಾಂಕ್ GTRI ಪ್ರಕಾರ, ಭಾರತವು ಖರೀದಿಸುವ ಒಟ್ಟು ಇಂಧನದಲ್ಲಿ ಸುಮಾರು 40-50% ತೈಲವು ಇರಾನ್‌ನಿಂದಲೇ ಆಮದಾಗುತ್ತದೆ. ಆದರೆ, ಸಂಘರ್ಷದಲ್ಲಿರುವ ಇರಾನ್ ಇಂಧನ ರಫ್ತನ್ನು ಸ್ಥಗಿತಗೊಳಿಸಿದೆ. ಪರಿಣಾಮವಾಗಿ, ಕಚ್ಛಾತೈಲ ಬೆಲೆ ಹೆಚ್ಚುವ ಸಾಧ್ಯತೆಗಳಿವೆ. ಶಿಪ್ಪಿಂಗ್ ವೆಚ್ಚ, ಭದ್ರತೆ ಹಾಗೂ ವಿಮಾ ಸೇವೆಗಳ ಬೆಲೆಯು ಏರಲಿವೆ. ದರಿಂದ ಆಮದು ದುಬಾರಿಯಾಗುತ್ತದೆ. ಪರಿಣಾಮ, ಹಣದುಬ್ಬರ ಉಂಟಾಗುವ ಆತಂಕವಿದೆ.

ಭಾರತದ ಮೇಲಿನ ರಾಜಕೀಯ ಪರಿಣಾಮಗಳು

ಇಸ್ರೇಲ್-ಇರಾನ್ ಎರಡೂ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಭಾರತವು, ಆ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ನಿಭಾಯಿಸಲು ಸೂಕ್ಷ್ಮ ಸಮತೋಲನವನ್ನು ಕಾಯ್ಡುಕೊಳ್ಳಲು ಯತ್ನಿಸುತ್ತಿದೆ. ಅಮೆರಿಕವು ಇಸ್ರೇಲ್‌ನ ದಾಳಿಯನ್ನು ‘ಸ್ವರಕ್ಷಣೆಯ ಹಕ್ಕು’ ಎಂದು ಹೇಳುತ್ತಿದೆ. ಇಸ್ರೇಲ್ ಜೊತೆಗೆ ನಿಂತಿದೆ. ಆದರೆ, ಜಿ7 ಉಳಿದೆಲ್ಲ ರಾಷ್ಟ್ರಗಳು ಇಸ್ರೇಲ್ ದಾಳಿಯನ್ನು ಖಂಡಿಸಿವೆ.

ಈ ವಾರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನಿರ್‌ ಅವರಿಗೆ ಟ್ರಂಪ್ ಔತಣ ಕೂಟ ಆಯೋಜಿಸಿದ್ದರು. ಆ ಕೂಟದಲ್ಲಿ ಇರಾನ್‌ನ ಸಂಭಾವಿತ ಕಾರ್ಯಾಚರಣೆಗಳ ಬಗ್ಗೆ ಗುಪ್ತಚರ ಹಂಚಿಕೆಗೆ ಟ್ರಂಪ್‌ ಪಾಕಿಸ್ತಾನದ ಬೆಂಬಲ ಕೇಳಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಒಂದು ವೇಳೆ, ಇದು ನಿಜವಾಗಿದ್ದರೆ ಭಾರತದ ದಾರಿಯು ಜಠಿಲವಾಗಲಿದೆ.

ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಪಾತ್ರವೇನು?

ಮತ್ತೊಂದೆಡೆ, ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಟೀಕಿಸಿರುವ ಗ್ಲೋಬಲ್ ಸೌತ್, ಇರಾನ್‌ ಮೇಲೂ ಸಹಾನುಭೂತಿ ವ್ಯಕ್ತಪಡಿಸಿದೆ. ಆದಾಗ್ಯೂ ಮುಂದಿನ ತಿಂಗಳು (ಜುಲೈ) 6 ಮತ್ತು 7ರಂದು ಬ್ರೆಜಿಲ್‌ನಲ್ಲಿ ನಡೆಯಲಿರುವ BRICS ಶೃಂಗಸಭೆಯಲ್ಲಿ ಮೋದಿ ಅವರು ಇಸ್ರೇಲ್-ಇರಾನ್ ಸಂಘರ್ಷದ ವಿಚಾರದಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನವಿದೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಒಗ್ಗೂಡಿ BRICSಅನ್ನು ರಚಿಸಿವೆ. ಈಗ ಇರಾನ್, ಯುಎಇ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷಿಯಾ (ಸೌದಿ ಅರೇಬಿಯಾ ಇನ್ನೂ ಔಪಚಾರಿಕವಾಗಿ ಸೇರಿಲ್ಲ) ಕೂಡ ಬ್ರಿಕ್ಸ್‌ನ ಭಾಗವಾಗಿವೆ. ಇರಾನ್‌ನ ಹಾಜರಿ ಇರಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಕೈಗೊಳ್ಳುವ ಯಾವುದೇ ಹೇಳಿಕೆಯಿಂದ ಭಾರತವು ದೂರ ಉಳಿಯುವುದು ಕಷ್ಟವಾಗಲಿದೆ. ಒಂದು ವೇಳೆ, ವಿಭಿನ್ನ ನಿಲುವು ತಳೆದರೆ, ಗಲ್ಫ್ ಪ್ರದೇಶದೊಂದಿಗಿನ ಭಾರತದ ಸಂಬಂಧಗಳಿಗೆ ಹಾನಿಯಾಗಬಹುದು. ಇದು, ಭಾರತವು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುವ 54% ತೈಲ ಮತ್ತು 170 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ವ್ಯಾಪಾರ ಸಂಬಂಧದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ದೀರ್ಘಕಾಲದ ಇಸ್ರೇಲ್-ಇರಾನ್ ಸಂಘರ್ಷವು ಭಾರತದ ಸರಕು ಸಾಗಣೆ (ಆಮದು-ರಫ್ತು) ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಅಕ್ಟೋಬರ್ 7ರ ದಾಳಿಯಿಂದಾಗಿ, ‘ಇಂಡಿಯಾ ಮಿಡಲ್ ಈಸ್ಟ್ ಯೂರೋಪ್ ಎಕನಾಮಿಕ್ ಕಾರಿಡಾರ್’ ಯೋಜನೆಗೆ ಈಗಾಗಲೇ ಅಡ್ಡಿಯುಂಟಾಗಿದೆ. ಯಾಕೆಂದರೆ, ಈ ಕಾರಿಡಾರ್‌ಗೆ ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್‌ನ ಹೈಫಾ ಬಂದರಿನ ಮೂಲಕ ಸಂಪರ್ಕ ಬೇಕಾಗಿದೆ. ಪ್ರಸ್ತುತ ಸಂಘರ್ಷವು ಛಾಬಹಾರ್ ಬಂದರು ಯೋಜನೆ, ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಯುರೇಷಿಯಾದ ವ್ಯಾಪಾರ ಸಂಪರ್ಕದ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ ಮೇಲಿನ ಭಾರತದ ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಇರುವ ಉತ್ತಮ ಮಾರ್ಗ ಸಂಘರ್ಷವನ್ನು ಕೊನೆಗೊಳಿಸಲು, ಕದನ ವಿರಾಮಕ್ಕಾಗಿ ಅಂತಾರಾಷ್ಟ್ರೀಯ ಕರೆ ಕೊಡುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X