ವಿಜ್ಞಾನ ಬೇರೆ, ವೈಜ್ಞಾನಿಕ ಆವಿಷ್ಕಾರ ಬೇರೆ. ಆವಿಷ್ಕಾರಕ್ಕಿಂತ ವಿಜ್ಞಾನ ದೊಡ್ಡದು. ವಿಜ್ಞಾನದ ಮೂಲಭೂತ ತತ್ವವೇ ವೈಜ್ಞಾನಿಕ ಮನೋಭಾವ. ಇದನ್ನು ಮೊದಲು ವಿಜ್ಞಾನಿಗಳು ಅರ್ಥಮಾಡಿಕೊಳ್ಳಬೇಕು. ನಂತರ ಜನ ಅವರನ್ನು ಅನುಸರಿಸುತ್ತಾರೆ. ಜನ ವಿಜ್ಞಾನಿಗಳಿಗೆ ವೈಜ್ಞಾನಿಕ ಮನೋಭಾವ ಹೇಳಿಕೊಡುವಂತಾಗಿರುವುದು ವಿಪರ್ಯಾಸವೇ ಸರಿ.
ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಸೆಪ್ಟೆಂಬರ್ 2ರ ಶನಿವಾರ ಬೆಳಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್-1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ ಸಿ 57 ರಾಕೆಟ್ ಉಡಾವಣೆಗೊಳ್ಳಲಿದೆ.
ಇಸ್ರೋ ಮುಖ್ಯಸ್ಥ ಸೋಮನಾಥ್ ಮತ್ತೆ ದೇವಾಲಯ ಭೇಟಿ ನಡೆಸುತ್ತಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಸಜ್ಜಾಗಿರುವ ಹಿನ್ನೆಲೆಯಲ್ಲಿ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಆಂಧ್ರಪ್ರದೇಶದ ಸುಳ್ಳೂರು ಪೇಟೆಯ ಚೆಂಗಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಚಂದ್ರಯಾನ 3ರ ಉಡಾವಣೆಗೂ ಮುನ್ನಾ ದಿನವೂ ಸೋಮನಾಥ್, ಚೆಂಗಾಳಮ್ಮ ಗುಡಿಗೆ ಬಂದು ಪೂಜೆ ಸಲ್ಲಿಸಿದ್ದರು. ಕಳೆದ 15 ವರ್ಷಗಳಿಂದ ಇಸ್ರೋ ನಡೆಸುವ ಬಹುತೇಕ ಎಲ್ಲ ಉಡಾವಣೆಗಳ ಸಂದರ್ಭಗಳಲ್ಲೂ ವಿಜ್ಞಾನಿಗಳು ಚೆಂಗಾಳಮ್ಮನಿಗೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿಬಿಟ್ಟಿದೆ ಎಂದು ಆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ದೇವಸ್ಥಾನದವರಿಗೆ ಅದು ಹೆಮ್ಮೆ ಎನ್ನುವುದೇನೋ ಸರಿ. ಆದರೆ, ವಿಜ್ಞಾನಿಗಳಿಗೆ?
ಚಂದ್ರಯಾನ 3ರ ಉಡಾವಣೆಗೂ ಮುಂಚೆ ಸೋಮನಾಥ್ ಮತ್ತು ತಂಡ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿತ್ತು. ಆಗ ಅನೇಕರು ಇದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ವಿಜ್ಞಾನಿಗಳೇ ಮೂಢನಂಬಿಕೆ ಪಾಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಆದರೆ, ಸೋಮನಾಥ್ ಯಾರ ವಿರೋಧ, ಟೀಕೆ, ಆಕ್ಷೇಪಣೆಯನ್ನೂ ನಾನು ಕೇರ್ ಮಾಡುವುದಿಲ್ಲ ಎನ್ನುವಂತೆ ಮತ್ತೊಮ್ಮೆ ಯಶಸ್ಸು ಕೋರಿ ದೇವಿಯ ಮೊರೆ ಹೋಗಿದ್ದಾರೆ.
ತಮಗೆ ಇಷ್ಟ ಬಂದ ದೇವರಿಗೆ ಪೂಜೆ ಮಾಡುವುದು ಸೋಮನಾಥ್ ಅವರ ವೈಯಕ್ತಿಕ ಆಯ್ಕೆ ಮತ್ತು ಹಕ್ಕು. ಆದರೆ, ಇಸ್ರೋ ಮುಖ್ಯಸ್ಥರಾಗಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವುದು ವೈಚಾರಿಕತೆಯನ್ನು ಪ್ರತಿಪಾದಿಸುವವರ ಟೀಕೆಗೆ ಕಾರಣವಾಗಿದೆ. ಮನುಷ್ಯ ಪ್ರಯತ್ನವೇ ಅಂತಿಮ ಎನ್ನುವುದು ವೈಜ್ಞಾನಿಕ ಮನೋಭಾವದ ಆತ್ಯಂತಿಕ ತತ್ವ. ಇಸ್ರೋ ವಿಜ್ಞಾನ ಮತ್ತು ವೈಜ್ಞಾನಿಕತೆಯ ಪ್ರಾತಿನಿಧಿಕ ಸಂಸ್ಥೆ ಎನ್ನುವ ಅಲಿಖಿತ ಭಾವನೆಯೊಂದು ಜನಮಾನಸದಲ್ಲಿದೆ. ಹೀಗಿರುವಾಗ, ಇಸ್ರೋ ಮುಖ್ಯಸ್ಥರಾಗಿ ಸೋಮನಾಥ್ ವೈಜ್ಞಾನಿಕ ಸಂಶೋಧನೆಯ ಯಶಸ್ಸಿಗಾಗಿ ದೇವರ ಮೊರೆ ಹೋಗಿರುವುದು ಒಂದು ರೀತಿಯ ವ್ಯಂಗ್ಯ; ಜೊತೆಗೆ ವಿಜ್ಞಾನಕ್ಕೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸೋಮನಾಥ್ ವಿರುದ್ಧ ದೊಡ್ಡ ಮಟ್ಟದಲ್ಲಿ ಟೀಕೆಗಳು ಕೇಳಿಬರಲು ಹಲವು ಕಾರಣಗಳಿವೆ. ಕೇರಳದ ಅಲಪ್ಪುಜಾದ ಹಿಂದಿ ಮೇಷ್ಟ್ರು ಶ್ರೀಧರ ಫಣಿಕ್ಕರ್ ಅವರ ಏಕೈಕ ಮಗ ಸೋಮನಾಥ್. ಕೇರಳ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ, ನಂತರ ಬೆಂಗಳೂರಿನ ಐಐಎಸ್ಸಿಯಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ನಂತರ ತ್ರಿವೇಂಡ್ರಂನ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಅವರು ಹಲವು ಉಡಾವಣಾ ಕಾರ್ಯಾಚರಣೆಗಳ ಭಾಗವಾಗಿ ದುಡಿದಿದ್ದಾರೆ.
ಅವರು ಈ ಹಿಂದೆ ಒಮ್ಮೆ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಸುದ್ದಿಯಾಗಿದ್ದರು. ಅದಾದ ನಂತರವೂ ಅವರು ಹಲವು ಬಾರಿ ಸಂಸ್ಕೃತ ಭಾಷೆ ಪರವಾಗಿ, ವೇದ ಉಪನಿಷತ್ತುಗಳ ಪರವಾಗಿ ಮಾತನಾಡಿ ಸುದ್ದಿಯಾಗಿದ್ದಾರೆ.
ಒಮ್ಮೆ ಅವರು ‘ವಿಜ್ಞಾನದ ತತ್ವಗಳು ವೇದಗಳಲ್ಲಿ ಹುಟ್ಟಿಕೊಂಡವು ಮತ್ತು ಪಾಶ್ಚಾತ್ಯ ಆವಿಷ್ಕಾರಗಳಾಗಿ ಮರುಸೃಷ್ಟಿಗೊಂಡವು’ ಎಂದು ಹೇಳಿದ್ದರು. ಮುಂದುವರೆದು, ‘ಸಂಸ್ಕೃತ ಸಾಹಿತ್ಯದಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ, ವೈಜ್ಞಾನಿಕ ಅಂಶಗಳೆಲ್ಲವೂ ಒಂದರೊಳಗೊಂದು ಮೇಳೈಸಿರುತ್ತವೆ. ಒಬ್ಬ ರಾಕೆಟ್ ವಿಜ್ಞಾನಿಯಾದ ನಾನು 8ನೇ ಶತಮಾನದ ‘ಸೂರ್ಯಸಿದ್ಧಾಂತ’ ಎನ್ನುವ ಸಂಸ್ಕೃತ ಗ್ರಂಥದಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಈ ಎಲ್ಲ ಜ್ಞಾನ ಇಲ್ಲಿಂದ ಅರಬ್‌ಗೆ ಹೋಯಿತು, ಅಲ್ಲಿಂದ ಯೂರೋಪ್ ಹೋಗಿ, ಸಾವಿರಾರು ವರ್ಷಗಳ ನಂತರ ಪಾಶ್ಚಾತ್ಯ ವಿಜ್ಞಾನಿಗಳ ಮೂಲಕ ಮತ್ತೆ ನಮ್ಮ ಬಳಿಗೆ ಬಂತು. ವಾಸ್ತವವಾಗಿ ಅವೆಲ್ಲವೂ ನಮ್ಮ ಸಂಸ್ಕೃತದಲ್ಲೇ ಇದ್ದಂಥವು’ ಎಂದಿದ್ದರು.
ಅದೇ ಭಾಷಣದಲ್ಲಿ ಅವರು ‘ಇಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳು ಸಂಸ್ಕೃತದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ಕಂಪ್ಯೂಟರ್ ಲ್ಯಾಂಗ್ವೇಜ್ ಆಗಲು ಸಂಸ್ಕೃತ ಅತ್ಯಂತ ಸೂಕ್ತವಾಗಿದೆ’ ಎಂದಿದ್ದರು. ಸೋಮನಾಥ್ ಅವರ ಈ ಮಾತುಗಳು ಅತ್ಯಂತ ಹಾಸ್ಯಾಸ್ಪದ ಮತ್ತು ಅಪಾಯಕಾರಿಯಾಗಿವೆ. ಎಲ್ಲವೂ ನಮ್ಮಲ್ಲಿಯೇ ಇದ್ದರೆ, ನಮ್ಮ ಸಂಸ್ಕೃತ ಪಂಡಿತರು ಶತಮಾನಗಳ ಕಾಲ ಯಾಕೆ ಏನನ್ನೂ ಸೃಷ್ಟಿಸಲಿಲ್ಲ ಮತ್ತು ಬಹುಸಂಖ್ಯಾತರ ಪಾಲಿಗೆ ಈ ದೇಶ ಯಾಕೆ ನರಕವಾಗಿತ್ತು ಎನ್ನುವುದಕ್ಕೆ ಸೋಮನಾಥ್ ಉತ್ತರ ಕೊಡಬೇಕಾಗುತ್ತದೆ.
ಎಲ್ಲರೂ ಬಲ್ಲಂತೆ, ಸಂಸ್ಕೃತ ಮತ್ತು ವೇದಗಳು ಬ್ರಾಹ್ಮಣರ ಸ್ವತ್ತಾಗಿದ್ದವು. ಅವುಗಳ ಕಾರಣದಿಂದ ಸಾವಿರಾರು ವರ್ಷಗಳ ಕಾಲ ಜನಸಂಖ್ಯೆಯ ಬಹುಪಾಲು ಮಂದಿ ವಿದ್ಯೆ, ಉದ್ಯೋಗ, ಜ್ಞಾನಗಳಿಂದ ವಂಚಿತರಾಗಿದ್ದರು. ನಂತರದಲ್ಲಿ ಆ ಪರಿಸ್ಥಿತಿ ಕೊಂಚವಾದರೂ ಬದಲಾಗಿದ್ದರೆ, ಅದಕ್ಕೆ ಕಾರಣ ಇಂಗ್ಲಿಷ್ ಶಿಕ್ಷಣ ಮತ್ತು ಅದು ಹೊತ್ತು ತಂದ ವಿಜ್ಞಾನ.
ಸೋಮನಾಥ್ ಅವರಂಥವರು ಇಂಗ್ಲಿಷ್ ಮೂಲಕ ವಿಜ್ಞಾನದ ಪ್ರಮೇಯಗಳನ್ನು ಕಲಿತು, ಅದನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಂಡು ಯಶಸ್ಸು ಕಂಡವರು. ಆದರೆ, ಅವರು ಈ ದೇಶವನ್ನು ಸಾವಿರಾರು ವರ್ಷಗಳ ಕಾಲ ಕತ್ತಲಲ್ಲಿಟ್ಟಿದ್ದಂಥ ಸಂಸ್ಕೃತ ಮತ್ತು ವೇದಗಳನ್ನು ಹೊಗಳುವುದು, ಅದು ಕಂಪ್ಯೂಟರ್ ಭಾಷೆಯಾಗಬೇಕೆಂದು ಬಯಸುವುದು ಏಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ವೇದಗಳಲ್ಲಿ ಎಲ್ಲವೂ ಇತ್ತು ಎನ್ನುವ ಕಾಗಕ್ಕನ ಗುಬ್ಬಕ್ಕನ ಕಥೆಯನ್ನು ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಹೇಳುತ್ತಾರೆಂದರೆ, ಅದು ಅವರ ಅಜ್ಞಾನ. ಸೋಮನಾಥ್ ಅವರ ಮಾತುಗಳನ್ನು ಕೇಳಿದರೆ, ಅವರು ಏನು ಹೇಳಲು ಹೊರಟಿದ್ದಾರೆ, ಯಾವುದನ್ನು ಪ್ರತಿಪಾದಿಸುತ್ತಿದ್ದಾರೆ ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ. ಮೃತ ಭಾಷೆಯಾದ ಸಂಸ್ಕೃತಕ್ಕೆ ಮರುಜೀವ ನೀಡುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೂ ಸೋಮನಾಥ್ ಅವರ ಮಾತುಗಳಿಗೂ ಹತ್ತಿರದ ನಂಟಿದೆ.
ಈ ಸುದ್ದಿ ಓದಿದ್ದೀರಾ: ರಾಜ್ಯ ರಾಜ್ಯಗಳ ನಡುವೆ ಅಸಮತೆ ಜೋಕಾಲಿ-ದೇವನೂರ ಮಹಾದೇವ
ವಿಜ್ಞಾನ ಬೇರೆ, ವೈಜ್ಞಾನಿಕ ಆವಿಷ್ಕಾರ ಬೇರೆ. ಆವಿಷ್ಕಾರಕ್ಕಿಂತ ವಿಜ್ಞಾನ ದೊಡ್ಡದು. ವಿಜ್ಞಾನದ ಮೂಲಭೂತ ತತ್ವವೇ ವೈಜ್ಞಾನಿಕ ಮನೋಭಾವ. ಇದನ್ನು ಮೊದಲು ವಿಜ್ಞಾನಿಗಳು ಅರ್ಥಮಾಡಿಕೊಳ್ಳಬೇಕು. ನಂತರ ಜನ ಅವರನ್ನು ಅನುಸರಿಸುತ್ತಾರೆ. ಆದರೆ, ಈಗ ಜನ ವಿಜ್ಞಾನಿಗಳಿಗೆ ವೈಜ್ಞಾನಿಕ ಮನೋಭಾವ ಹೇಳಿಕೊಡುವಂತಾಗಿರುವುದು ವಿಪರ್ಯಾಸವೇ ಸರಿ.
ಚಂದ್ರಯಾನ 3 ಯಶಸ್ಸಿಗಾಗಿ ಸೋಮನಾಥ್ ಮತ್ತು ಅವರ ತಂಡ ಅಪಾರವಾಗಿ ಶ್ರಮಿಸಿದೆ. ಅದಕ್ಕಾಗಿ ಅವರನ್ನು ಅಭಿನಂದಿಸೋಣ. ಅದರ ನಂತರ ಸೋಮನಾಥ್ ಅವರನ್ನು ದೇಶದ ಜನ ಹೋದಲ್ಲಿ ಬಂದಲ್ಲಿ ಗೌರವಿಸುತ್ತಿದ್ದಾರೆ.
ಈಚೆಗೆ ವಿಮಾನವೊಂದರಲ್ಲಿ ಸೋಮನಾಥ್ ಪ್ರಯಾಣಿಸುತ್ತಿದ್ದಾಗ ಗಗನಸಖಿ ಅವರು ಇರುವುದರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ, ಗೌರವಿಸಿದ್ದರು.
ಈ ದೇಶದ ಎಲ್ಲರೂ ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರ ಬಗ್ಗೆ ಪ್ರೀತಿ ಹೊಂದಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಜನ ವಿಜ್ಞಾನದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಚಂದ್ರಯಾನ 3ರಂತೆ ಆದಿತ್ಯ ಎಲ್ 1 ಉಡಾವಣಾ ಯೋಜನೆಯೂ ಯಶಸ್ಸಾಗಲಿ. ಅದರ ಜೊತೆಗೆ ವಿಜ್ಞಾನವೂ ಗೆಲ್ಲಲಿ, ಉಳಿಯಲಿ.
ಹೀಗೆಲ್ಲ ದ್ವಂದ್ವ ವಿರೋಧಾಭಾಸ ಹುಟ್ಟಿಸಬಹುದು..
ಬರೆಯಬಹುದು..ತೆಗಳಬಹುದು.. ಟೀಕಿಸಬಹುದು
ವೇದ ಮತ್ತು ಸಂಸ್ಕೃತ ಮಾತ್ರ ಈ ದೇಶವನ್ನು ಕತ್ತಲೆಗೆ ಹೇಗೆ ದೂಡಿದ್ದವೋ..? ಅದು ದೇಶದ ಜನರ ಪ್ರಶ್ನೆ.
ನಿಮ್ಮ ಅಭಿಪ್ರಾಯ ಅಥವ ತಿಳುವಳಿಕೆ ಎಲ್ಲರದ್ದು ಆಗಬೇಕಿಲ್ಲ.
ನಿಮಗೆ ಹೇಗೆ ಈ ಸಾರ್ಸಾವಭೌಮ ದೇಶದ ಸಾಕಷ್ಟು ವಿಷಯಗಳನ್ನು ಸದಾ ಕಾಲ ಕೀಳಾಗಿ ಗೌಪ್ಯವಾಗಿ..ಅನುಮಾನಾಸ್ಪದ ಮತ್ತು.. ದ್ವೇಶದ ವಿಷಯವಾಗಿ ವಿಮರ್ಷಿಸುವ. ಅಭಿವ್ಯಕ್ತಿಸುವ ಹಕ್ಕಿದೆಯೋ ಹಾಗೆ ಅವರಿಗು ಅವರು ನಂಬಿರುವ ದೇವರು.ದೈವ ಶಕ್ತಿ ಹಾಗು ಸಂಸ್ಕೃತ ಗ್ರಂಥಗಳ ಬಗ್ಗೆ ನಂಬಿಕೆ ಇದೆ. ಅದು ಅವರ ಆಚರಣೆ ಮಾತ್ರವಲ್ಲ. ಯಾರು ಬೇಕಾದರು ದೇವಸ್ಥಾನಕ್ಕೆ ತೆರಳಲು.ಪೂಜಿಸಲು ಈ ದೇಶದ ಪ್ರಜೆಗಳೆಲ್ಲರಿಗು ಹಕ್ಕಿದೆ. ಪೂಜೆ ಹಾಗು ದೈವ ದೇಶದ ಸಮಸ್ತ ಸಮುದಾಯಗಳಲ್ಲಿ ಹಾಸುಹೊಕ್ಕಾಗಿರುವ ಆಚರಣೆ..
ಸರ್..ಅದಕ್ಕು ಬೇಗುದಿ.. ಅಸೂಯೆ ಪಟ್ಟರೆ ಹೇಗೆ..?