ರಾಹುಲ್ ಗಾಂಧಿ ಸಂವಿಧಾನದ ಪ್ರತಿ ಹಿಡಿದುಕೊಂಡು ಧರ್ಮೋಪದೇಶ ಮಾಡುತ್ತಾರೆ. ಆದರೆ, ಅವರ ಉಪದೇಶಕ್ಕೆ ಅವರದ್ದೇ ಸರ್ಕಾರ ವಿರುದ್ಧವಾಗಿದೆ. ಅರಣ್ಯ ಉಳಿಸುವ ವಿದ್ಯಾರ್ಥಿಗಳ ಹೋರಾಟಕ್ಕೆ ವಿರೋಧ ಪಕ್ಷ ಬಿಆರ್‌ಎಸ್ ಬೆಂಬಲ ಘೋಷಿಸಿದೆ.
ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯಕ್ಕೆ (ಎಚ್‌ಸಿಯು) ಸೇರಿದ ಮತ್ತು ಗಚ್ಚಿಬೌಲಿ ಪ್ರದೇಶದಲ್ಲಿರುವ 400 ಎಕರೆ ಅರಣ್ಯ ಭೂಮಿಯಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಎಚ್‌ಸಿಯು ಅರಣ್ಯ ಪ್ರದೇಶದ ಸಾವಿರಾರು ಮರಗಳ ಮಾರಣಹೋಮ ನಡೆಸಲಾಗುತ್ತಿದೆ. ಬುಲ್ಡೋಜರ್‌ಗಳು ಬೇರು ಸಮೇತ ಮರಗಳನ್ನು ಉರುಳಿಸುತ್ತಿವೆ. ಯುಸಿಯು ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಮತ್ತು ಹೊರಗೆ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸದ್ಯ, ಮರಗಳ ಹನನಕ್ಕೆ ಹೈದರಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶಿಸಿದ್ದು, ಹೈಕೋರ್ಟ್‌ನಿಂದ ವರದಿ ಕೇಳಿದೆ.
ಐಟಿ ಪಾರ್ಕ್ ಸ್ಥಾಪಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಖಾಸಗಿ ವ್ಯಕ್ತಿಗಳಿಗೆ ಅರಣ್ಯ ಭೂಮಿಯನ್ನು ಹರಾಜು ಹಾಕಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಭಾನುವಾರ (ಮಾರ್ಚ್ 30), ಎಚ್‌ಸಿಯು ಕ್ಯಾಂಪಸ್‌ನ ಅರಣ್ಯ ಪ್ರದೇಶಕ್ಕೆ ನುಗ್ಗಿದ ಬುಲ್ಡೋಜರ್‌ಗಳು ಮರಗಳನ್ನು ಕಿತ್ತೆಸೆಯಲು ಆರಂಭಿಸಿದ್ದವು. ಬುಲ್ಡೋಜರ್‌ಗಳು ಬರುತ್ತಿದ್ದಂತೆಯೇ ವಿದ್ಯಾರ್ಥಿಗಳು ಗುಂಪುಗೂಡಿದರು, ಪ್ರತಿಭಟನೆಗೆ ಮುಂದಾದರು. ಹಲವು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಡೆಯಲು ಕ್ಯಾಂಪಸ್‌ನಲ್ಲಿ ಭಾರೀ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ವಿದ್ಯಾರ್ಥಿಗಳ ಪ್ರತಿರೋಧ, ವಿರೋಧ, ಹೋರಾಟಗಳ ನಡುವೆಯೂ ಮರಗಳ ಮಾರಣಹೋಮ ನಡೆಯಿತು. ಪರಿಣಾಮವಾಗಿ, ಆ ಅರಣ್ಯ ಪ್ರದೇಶಲ್ಲಿದ್ದ ವನ್ಯಜೀವಿಗಳು ಮತ್ತು ಪಕ್ಷಿಗಳು ಆಶ್ರಯ ಕಳೆದುಕೊಂಡವು. ಮರಗಳು ಉರುಳುತ್ತಿದ್ದ ಸ್ಥಳದಲ್ಲಿ ಪಕ್ಷಿಗಳ ಚಡಪಡಿಕೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ನೆಟ್ಟಿಗರು, ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದರು.
ಈ ಅರಣ್ಯ ಪ್ರದೇಶದಲ್ಲಿ ನಾಲ್ಕು ಕೆರೆಗಳಿವೆ – ಬಫಲೋ ಸರೋವರ ಮತ್ತು ಪಿಕಾಕ್ ಸರೋವರ, ಬಂಗಾಲಿ ಮೀನುಗಾರಿಕಾ ಕೊಳ ಮತ್ತು ಕಪ್ಪೆ ಕೊಳ. ಅಲ್ಲದೆ, ಅಪರೂಪದ ಪ್ರಭೇದದ ಮಾನಿಟರ್ ಹಲ್ಲಿ, ಭಾರತೀಯ ರಾಕ್ ಪೈಥಾನ್, ಹಿಸ್ಪಿಡ್ ಮೊಲ, ನವಿಲು, ನಾಲ್ಕು ಕೊಂಬಿನ ಹುಲ್ಲೆ, ಹನುಮಾನ್ ಲಂಗೂರ್‌ಗಳು, ಪ್ಯಾರಡೈಸ್ ಫ್ಲೈಕ್ಯಾಚರ್‌ಗಳು, ಹೆರಾನ್‌ಗಳು, ಐಬಿಸ್‌ಗಳು, ಹದ್ದು- ಗೂಬೆಗಳು ಹಾಗೂ ಮುಳ್ಳುಹಂದಿಗಳಿಗೆ ಈ ಪ್ರದೇಶವು ಆವಾಸ ತಾಣವಾಗಿದೆ.
Helpless Birds 😢😢💔💔
— తెలంగాణకు శ్రీరామరక్ష కేసీఆర్ (@AlwaysTelangana) April 2, 2025
Watch Carefully 🙏🏼🙏🏼#SaveHCU #SaveHCUBioDiversity @KTRBRS @TheHimanshuRaoK pic.twitter.com/3q4Vn2MVMw
ಐಟಿ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿತ 400 ಎಕರೆ ಅರಣ್ಯ ಭೂಮಿಯು ಹೈದರಾಬಾದ್‌ನ ಕಾಂಚ ಗಚಿಬೌಲಿ ನಗರದ ಭಾಗವಾಗಿದೆ. ಈ ಭೂಮಿಯ ಮೇಲೆ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಎರಡೂ ಹಕ್ಕು ಸಾಧಿಸಿವೆ.
20 ವರ್ಷಗಳಿಂದ ಇರುವ ವಿವಾದ
ಮರಗಳ ಮಾರಣಹೋಮ ನಡೆದಿರುವ 400 ಎಕರೆ ಅರಣ್ಯ ಭೂಮಿಯ ಮಾಲೀಕತ್ವವು ಕಳೆದ 20 ವರ್ಷಗಳಿಂದ ವಿವಾದದ ಕೇಂದ್ರಬಿಂದುವಾಗಿದೆ. ತೆಲಂಗಾಣ ಮತ್ತು ಎಚ್‌ಸಿಯು ನಡುವೆ ತಿಕ್ಕಾಟ ನಡೆಯುತ್ತಿದೆ.
ವಿವಾದಿತ 400 ಎಕರೆ ಸೇರಿದಂತೆ ಒಟ್ಟು 2,324 ಎಕರೆ ಅಳತೆಯ ಮೂಲ ಭೂಮಿಯನ್ನು 1975ರಲ್ಲಿ ತನಗೆ ಹಂಚಿಕೆ ಮಾಡಲಾಗಿದೆ. ಕಾನೂನುಬದ್ಧ ಮಾಲೀಕತ್ವವು ಎಚ್‌ಸಿಯುಗೆ ಸೇರಿದ್ದಾಗಿದೆ ಎಂದು ಪ್ರತಿಪಾದಿಸಿ ವಿಶ್ವವಿದ್ಯಾಲಯವು ಪ್ರಕರಣವನ್ನು ಹೂಡಿತ್ತು. ಸರ್ಕಾರದ ನಕ್ಷೆಗಳು ತಪ್ಪಾಗಿವೆ ಎಂದು ವಾದಿಸಿತ್ತು.
ಆದರೆ, 2022ರಲ್ಲಿ, ತೆಲಂಗಾಣ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ‘ಸರ್ಕಾರವು ವಿಶ್ವವಿದ್ಯಾಲಯಕ್ಕೆ ಭೂಮಿ ವರ್ಗಾವಣೆ ಮಾಡಿದೆ ಎಂಬುದನ್ನು ದೃಢಪಡಿಸಲು ಯಾವುದೇ ಅಧಿಕೃತ ಪತ್ರವಿಲ್ಲ’ ಎಂದು ಹೇಳಿತ್ತು. ತೀರ್ಪಿನ ಬಳಿಕ, ಭೂಮಿಯ ಇತರ ಕೆಲವು ಭಾಗಗಳನ್ನು ವಿಶ್ವವಿದ್ಯಾಲಯವು ಸರ್ಕಾರಕ್ಕೆ ಬಿಟ್ಟುಕೊಟ್ಟಿತು. ಅಲ್ಲದೆ, ತೆಲಂಗಾಣ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ 2024ರಲ್ಲಿ ಎತ್ತಿ ಹಿಡಿಯಿತು.
ಆದರೆ, ಭೂಮಿಗೆ ಸಂಬಂಧಿಸಿದ ಕಾನೂನು ಅಡೆತಡೆಗಳು ಅಲ್ಲಿಗೇ ಮುಗಿಯಲಿಲ್ಲ. ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ‘ವಾಟಾ ಫೌಂಡೇಶನ್’ ಎಂಬ ಎನ್‌ಜಿಒ ಈ ಭೂಮಿಗೆ ‘ಡೀಮ್ಡ್ ಫಾರೆಸ್ಟ್’ ಸ್ಥಾನಮಾನ ನೀಡಬೇಕು ಮತ್ತು ವನ್ಯಜೀವಿ (ರಕ್ಷಣೆ) ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ‘ರಾಷ್ಟ್ರೀಯ ಉದ್ಯಾನವನ’ವೆಂದು ಘೋಷಿಸಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದೆ.
ಈ ವರದಿ ಓದಿದ್ದೀರಾ?: ಗೋವಾಕ್ಕೆ ಕರ್ನಾಟಕದ ಅರಣ್ಯ ಭೂಮಿ, ಪ್ರಧಾನಿ ಮೋದಿ ಲಾಬಿಗೆ ಮಣಿಯುತ್ತಾ ಕಾಂಗ್ರೆಸ್ ಸರ್ಕಾರ?
ಎಚ್‌ಸಿಯು ಕ್ಯಾಂಪಸ್‌ನ ಭಾಗವಾಗಿರುವ ಅರಣ್ಯ ಭೂಮಿಯು ಜೀವವೈವಿಧ್ಯ ತಾಣಗಳ ಎಲ್ಲ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ, ವಿವಾದಿತ ಭೂಮಿಯನ್ನು ಕಂದಾಯ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದು ಗುರುತಿಸಲಾಗಿಲ್ಲವಾದರೂ, ಈ ಸ್ಥಳದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ‘ವಾಟಾ ಫೌಂಡೇಷನ್’ ಮನವಿ ಮಾಡಿದೆ. ಈ ಅರ್ಜಿಯ ವಿಚಾರಣೆಯು ತೆಲಂಗಾಣ ಹೈಕೋರ್ಟ್‌ನಲ್ಲಿ ಏಪ್ರಿಲ್ 7ರಂದು ನಡೆಯಲಿದೆ.
ಮತ್ತೊಂದೆಡೆ, ವಿದೇಶಿ ಹೂಡಿಕೆಗಳೊಂದಿಗೆ ಈ ಪ್ರದೇಶದಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತೇವೆಂದು ಸರ್ಕಾರ ಹೇಳುತ್ತಿದೆ. ‘ಅಂತಾರಾಷ್ಟ್ರೀಯ ಮಾನದಂಡಗಳಿಗೆ’ ಅನುಗುಣವಾಗಿ ಮಾಸ್ಟರ್ ಪ್ಲಾನ್ ಅನ್ನು ತಯಾರಿಸಲು ಟೆಂಡರ್‌ಗಳನ್ನು ಆಹ್ವಾನಿಸಿದೆ. ಆ ಭೂಮಿಗೆ ವಿನ್ಯಾಸಗಳನ್ನು ರಚಿಸಿ, ನಿವೇಶನಗಳನ್ನು ನಿರ್ಮಿಸಿ, ಕಂಪನಿಗಳಿಗೆ ಹರಾಜು ಮಾಡಲು ಸರ್ಕಾರ ಉದ್ದೇಶಿಸಿದೆ.
ಮಾಸ್ಟರ್ ಪ್ಲಾನ್ಅನ್ನು ಜಾರಿಗೊಳಿಸಲು ಸರ್ಕಾರವು ಒಟ್ಟು 400 ಎಕರೆಗಳಲ್ಲಿ ಈಗ 150 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಬಹುದು ಎಂದು ವಾಟಾ ಫೌಂಡೇಶನ್ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಏಪ್ರಿಲ್ 7ರಂದು ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸರ್ಕಾರದ ರೂಪಿಸಿದ್ದ ಹರಾಜು ಯೋಜನೆಗಳ ಬಗ್ಗೆ ತಿಳಿದ ಎಚ್‌ಸಿಯು ವಿದ್ಯಾರ್ಥಿಗಳು ‘ಆಮ್ಲಜನಕ ಹರಾಜಿಗಿಲ್ಲ’ ಎಂಬ ಹ್ಯಾಶ್‌ಟ್ಯಾಗ್ ಅಡಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದ್ದರು. ವಿವಾದಿತ ಅರಣ್ಯ ಭೂಮಿಯು ವನ್ಯಜೀವಿ ಕಾಯ್ದೆಯ ಮಾರ್ಗಸೂಚಿ 1ರ ಅಡಿಯಲ್ಲಿ ಸಂರಕ್ಷಿತ ವನ್ಯಜೀವಿ ಪ್ರಭೇದಗಳಿಗೆ ನೆಲೆಯಾಗಿದೆ. ಸ್ವಾವಲಂಬಿ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಅದನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಸುಪ್ರೀಂ ಕೋರ್ಟ್ ತೀರ್ಪು ಮತ್ತು ‘ಬುಲ್ಡೋಜರ್ ನ್ಯಾಯ’: ದಂಡನೆಯ ಹೆಸರಿನಲ್ಲಿ ದ್ವೇಷ ಸಾಧನೆ
ಆದಾಗ್ಯೂ, ಸೋಮವಾರ (ಮಾರ್ಚ್ 31), ಮುಖ್ಯಮಂತ್ರಿ ಕಚೇರಿಯು 400 ಎಕರೆ ಅರಣ್ಯ ಭೂಮಿಯು ಸರ್ಕಾರಕ್ಕೆ ಸೇರಿದೆ. ಈ ಭೂಮಿಯನ್ನು 2004ರಲ್ಲಿ ಹಿಂದೆಯಿದ್ದ ಅವಿಭಜಿತ ಆಂಧ್ರಪ್ರದೇಶದಲ್ಲಿ ಖಾಸಗಿ ಕಂಪನಿಗೆ ನೀಡಲಾಗಿತ್ತು. ಆದಾಗ್ಯೂ, ಪ್ರಸ್ತುತ ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಗೆಲ್ಲುವ ಮೂಲಕ ಕಾನೂನುಬದ್ಧವಾಗಿ ಭೂಮಿಯ ಮಾಲೀಕತ್ವವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ.
2004ರಲ್ಲಿ ಅವಿಭಜಿತ ಆಂಧ್ರಪ್ರದೇಶ ಸರ್ಕಾರವು ‘ಐಎಂಜಿ ಅಕಾಡೆಮಿಸ್ ಭಾರತ್ ಪ್ರೈವೇಟ್ ಲಿಮಿಟೆಡ್’ಗೆ 2004ರ ಜನವರಿ 13 ರಂದು ಕ್ರೀಡಾ ಸೌಲಭ್ಯಗಳ ಅಭಿವೃದ್ಧಿಗಾಗಿ 400 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಂಪನಿಯು ಯೋಜನೆಯನ್ನು ಪ್ರಾರಂಭಿಸದ ಕಾರಣ, 2006ರ ನವೆಂಬರ್ 21ರಂದು ಮತ್ತೊಂದು ಸರ್ಕಾರಿ ಆದೇಶ ಹೊರಡಿಸಿ, ಐಎಂಜಿ ಸಂಸ್ಥೆಗೆ ನೀಡಲಾಗಿದ್ದ ಭೂ ಹಂಚಿಕೆಯನ್ನು ರದ್ದುಗೊಳಿಸಲಾಯಿತು. ಬಳಿಕ, ಭೂಮಿಯನ್ನು ಆಂಧ್ರಪ್ರದೇಶ ಯುವಜನ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೊಂಡಿದೆ. ಈ ನಡುವೆ, ರದ್ದತಿ ವಿರುದ್ಧ ಐಎಂಜಿ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಸರ್ಕಾರ ಗೆದ್ದಿದೆ.
ತೆಲಂಗಾಣ ಸರ್ಕಾರ ವರ್ಸರ್ ಎಚ್‌ಸಿಯು
ಹೈಕೋರ್ಟ್‌ನಲ್ಲಿ ಗೆದ್ದ ಬಳಿಕ, ಭೂಮಿಯನ್ನು ಸರ್ಕಾರ ಮತ್ತೆ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತು ಎಂದು ಮುಖ್ಯಮಂತ್ರಿ ಕಚೇರಿ ಕೇಳಿಕೊಂಡಿದೆ. ಭೂಮಿಯನ್ನು ಸೆರಿಲಿಂಗಂಪಳ್ಳಿಯ ಉಪ ಕಲೆಕ್ಟರ್ ಮತ್ತು ತಹಶೀಲ್ದಾರ್ ಮೂಲಕ ಸರ್ವೇ ನಡೆಸಿ, ಹದ್ದುಬಸ್ತು ಮಾಡುವಂತೆ ಸರ್ಕಾರ ಆದೇಶಿಸಿತು. ಈ ಭೂಮಿಗೆ ಸರ್ಕಾರವೇ ನಿಜವಾದ ಮಾಲೀಕರು ಎಂದು ಜಿಲ್ಲಾಧಿಕಾರಿ ದೃಢೀಕರಿಸಿದರು. ನಂತರ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿತು.
ಅದಕ್ಕಾಗಿ, ಸರ್ಕಾರವು ಈ 400 ಎಕರೆ ಭೂಮಿಯ ಹಕ್ಕುಗಳನ್ನು TGIICಗೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಬಳಿಕ, ಭೂಮಿಯನ್ನು ಮಾಹಿತಿ ಮತ್ತು ಸಂವಹನ ಇಲಾಖೆಗೆ TGIIC ಹಸ್ತಾಂತರಿಸಿತು. ಈ ಪ್ರಕ್ರಿಯೆಯಲ್ಲಿ ಸಾಮಾನ್ಯ ಗಡಿಗಳನ್ನು ಗುರುತಿಸಲು ಸಹಕಾರ ಕೋರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ TGIIC ಪತ್ರ ಬರೆಯಿತು.
”ರಿಜಿಸ್ಟ್ರಾರ್ ಒಪ್ಪಿಗೆಯೊಂದಿಗೆ, ಸರ್ಕಾರ ಮತ್ತು ವಿಶ್ವವಿದ್ಯಾಲಯ ಅಧಿಕಾರಿಗಳನ್ನೊಳಗೊಂಡ ಜಂಟಿ ಸಮೀಕ್ಷೆಯನ್ನು ನಡೆಸಲಾಗಿದೆ. ಅದೇ ದಿನ ಗಡಿಗಳನ್ನು ಗುರುತಿಸಿ, ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಹೇಳುತ್ತಿರುವಂತೆ ಬಫಲೋ ಸರೋವರ ಮತ್ತು ಪಿಕಾಕ್ ಸರೋವರಗಳು 400 ಎಕರೆ ಭೂ ಮಿತಿಯೊಳಗೆ ಇಲ್ಲ” ಎಂದು ಸರ್ಕಾರ ಹೇಳುತ್ತಿದೆ.
ಆದಾಗ್ಯೂ, ಸರ್ಕಾರದ ಹೇಳಿಕೆಯನ್ನು ವಿಶ್ವವಿದ್ಯಾಲಯ ಆಡಳಿತವು ಅಲ್ಲಗಳೆದಿದೆ. IMG ಕಂಪನಿಯಿಂದ ಸರ್ಕಾರವು ಮರಳಿ ಪಡೆದ 400 ಎಕರೆ ಭೂಮಿಯನ್ನು ಗುರುತಿಸಲು ಕಂದಾಯ ಅಧಿಕಾರಿಗಳು ಕಳೆದ ವರ್ಷ ಜುಲೈನಲ್ಲಿ ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ ಎಂದು ಹೇಳಿದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ: ಮುಸ್ಲಿಮರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಕಡಿತ ಖಂಡಿತ
ಇಲ್ಲಿಯವರೆಗೆ ತೆಗೆದುಕೊಂಡ ಏಕೈಕ ಕ್ರಮವೆಂದರೆ ಭೂಮಿಯ ಪ್ರಾಥಮಿಕ ಪರಿಶೀಲನೆ ಮಾತ್ರ. ಭೂಮಿಯ ಗಡಿ ಗುರುತಿಸುವಿಕೆಗೆ ಎಚ್‌ಸಿಯು ಒಪ್ಪಿಕೊಂಡಿತ್ತು ಎಂಬ TGIIC ಹೇಳಿಕೆ ಸಂಪೂರ್ಣ ಸುಳ್ಳು. ವಾಸ್ತವವಾಗಿ, ಭೂಮಿಯ ಯಾವುದೇ ಗಡಿ ಗುರುತಿಸುವಿಕೆಯನ್ನು ಮಾಡಲಾಗಿಲ್ಲ. ಅದರ ಬಗ್ಗೆ ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿಯನ್ನೂ ಸರ್ಕಾರ ನೀಡಿಲ್ಲ ಎಂದು ವಿಶ್ವವಿದ್ಯಾಲಯ ವಾದಿಸಿದೆ.
ಸರ್ಕಾರ ಪ್ರಕಟಿಸಿರುವ ಅಂಶಗಳನ್ನು ಮರುಪರಿಶೀಲನೆ ಮಾಡಬೇಕು. ಈ ಪ್ರದೇಶದಲ್ಲಿ ಪರಿಸರ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ವಿಶ್ವವಿದ್ಯಾಲಯ ಒತ್ತಾಯಿಸಿದೆ.
ವಿದ್ಯಾರ್ಥಿಗಳ ತೀವ್ರ ಹೋರಾಟ
ಎಚ್‌ಸಿಯು ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡು ವಿಶ್ವವಿದ್ಯಾಲಯದ ಅರಣ್ಯ ಭೂಮಿಯನ್ನು ರಕ್ಷಿಸಲು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿದ್ದೇವೆ ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಅಂಬೇಡ್ಕರ್ ಹೇಳಿದ್ದಾರೆ. ವಾಟಾ ಫೌಂಡೇಶನ್‌ನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದ್ದರೂ, ಭಾನುವಾರ ರಾತ್ರಿ 40 ರಿಂದ 50 ಬುಲ್ಡೋಜರ್‌ಗಳ ಮೂಲಕ ಸರ್ಕಾರವು ಮರಗಳ ಮಾರಣಹೋಮ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಸರ್ಕಾರದ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ಪ್ರಮುಖ ವಿರೋಧ ಪಕ್ಷ ಬಿಆರ್‌ಎಸ್ ಬೆಂಬಲ ನೀಡುವುದಾಗಿ ಘೋಷಿಸಿದೆ.
”ಕಾಂಗ್ರೆಸ್ ಸರ್ಕಾರವು ವಿದ್ಯಾರ್ಥಿಗಳನ್ನು ಕ್ರೂರವಾಗಿ ನಡೆಸಿಕೊಂಡಿದೆ. ಪರಿಸರವನ್ನು ಹಾಳುಮಾಡಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೌನವಾಗಿದ್ದಾರೆ. ರಾಹುಲ್ ಗಾಂಧಿ ಸಂವಿಧಾನದ ಪ್ರತಿ ಹಿಡಿದುಕೊಂಡು ಧರ್ಮೋಪದೇಶ ಮಾಡುತ್ತಾರೆ. ಆದರೆ, ಅವರ ಉಪದೇಶಕ್ಕೆ ಅವರದ್ದೇ ಸರ್ಕಾರ ವಿರುದ್ಧವಾಗಿದೆ. ಇದು ಕಾಂಗ್ರೆಸ್‌ನ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಅಲ್ಲ. ದ್ರೋಹದ ಮಾರುಕಟ್ಟೆ ಸ್ಥಳವಾಗಿದೆ” ಎಂದು ಬಿಆರ್‌ಎಸ್ ಹೇಳಿದೆ.