ಕ್ಷೇತ್ರ ಮರುವಿಂಗಡಣೆ ಮಸೂದೆಗೆ ದಕ್ಷಿಣ ಭಾರತದ ರಾಜ್ಯಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು (YSRCP) ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಿದೆ.
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯು ಪ್ರಸ್ತುತ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಮರುವಿಂಗಡಣೆಯು ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಾಬಲ್ಯವನ್ನು ಕುಗ್ಗಿಸುತ್ತದೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ಆಕ್ಷೇಪವಾಗಿದೆ.
ಇದನ್ನು ಓದಿದ್ದೀರಾ? Delimitation | ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿರುವ ಸಂಸದೀಯ ಕ್ಷೇತ್ರ ಮರುವಿಂಗಡಣೆ
ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನು ನಿಗದಿಪಡಿಸಿದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸೀಟುಗಳ ಸಂಖ್ಯೆ ಕಡಿಮೆಯಾಗಬಹುದು. ಇದು ಈವರೆಗೆ ಜನಸಂಖ್ಯೆ ನಿಯಂತ್ರಣ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂದು ವಿಪಕ್ಷಗಳು ಹೇಳಿದೆ.
ಕ್ಷೇತ್ರಗಳ ಸಂಖ್ಯೆ ಕಡಿಮೆಯಾದಂತೆ ಕೇಂದ್ರದಿಂದ ಬರುವ ಅನುದಾನ ಮತ್ತು ಆರ್ಥಿಕ ಹಂಚಿಕೆಯಲ್ಲೂ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕುಟುಂಬ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತಂದ ದಕ್ಷಿಣದ ರಾಜ್ಯಗಳಿಗೆ ಈ ಮರುವಿಂಗಡಣೆಯು ಒಂದು ರೀತಿಯಲ್ಲಿ ಶಿಕ್ಷೆಯಾಗಲಿದೆ ಎಂಬುದು ಸಿಎಂ ಸಿದ್ದರಾಮಯ್ಯ ಮತ್ತು ಇತರ ದಕ್ಷಿಣದ ನಾಯಕರ ಕಳವಳವಾಗಿದೆ.
ಆದರೆ ವೈಎಸ್ ಜಗನ್ ಮೋಹನ್ ರೆಡ್ಡಿ ಮಾತ್ರ ಈ ಮಸೂದೆಗೆ ಬೆಂಬಲಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕ್ಷೇತ್ರಗಳ ಗಡಿ ಮರುಹಂಚಿಕೆಯು ಸ್ಥಳೀಯ ಜನರಿಗೆ ತೊಂದರೆಯಾಗದಂತೆ ಮತ್ತು ಪ್ರಾತಿನಿಧ್ಯದ ಅನುಪಾತದಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದ್ದಾರೆ.
ಡಿಎಂಕೆ, ಬಿಆರ್ಎಸ್ ಮತ್ತು ಕಾಂಗ್ರೆಸ್ನಂತಹ ಪಕ್ಷಗಳ ಹಲವಾರು ದಕ್ಷಿಣ ಭಾರತದ ನಾಯಕರು ಮಸೂದೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಇದು ದಕ್ಷಿಣದ ರಾಜಕೀಯ ಪ್ರಭಾವವನ್ನು ಕುಗ್ಗಿಸಬಹುದು ಎಂದು ಎಚ್ಚರಿಸಿದ್ದಾರೆ. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಮಾತ್ರ ವಿಶಿಷ್ಟ ನಿಲುವನ್ನು ತೆಗೆದುಕೊಂಡಿದೆ.
ಅಷ್ಟಕ್ಕೂ ಜಗನ್ ಮೋಹನ್ ರೆಡ್ಡಿ ಕೇಂದ್ರದ ಮೋದಿ ಸರ್ಕಾರವನ್ನು ಬೆಂಬಲಿಸಿರುವುದು ಇದೇ ಮೊದಲೇನಲ್ಲ. ಜಗನ್ ಮೋಹನ್ ರೆಡ್ಡಿ ಪಕ್ಷ ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟದ ಭಾಗವಾಗಿರದಿದ್ದರೂ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದೆ. 2013ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಬ್ಬ ಸಮರ್ಥ ಆಡಳಿತಗಾರ ಎಂದು ಕರೆದಿದ್ದರು. ಸಂವಿಧಾನದ 370ನೇ ವಿಧಿ ರದ್ದತಿ ಮತ್ತು ಇತ್ತೀಚಿನ ದೆಹಲಿ ಸೇವಾ ಮಸೂದೆಯಂತಹ ನಿರ್ಣಾಯಕ ಸಂದರ್ಭಗಳಲ್ಲಿ ಜಗನ್ ಅವರ ವೈಎಸ್ಆರ್ಸಿಪಿ ಪಕ್ಷವು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದೆ.




