ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಸಂಚರಿಸುವ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರ ವಾಹನದ ಮೇಲೆ ದಾಳಿ ನಡೆದಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ದೃಶ್ಯದ ಸಮೇತ ಬರೆದುಕೊಂಡಿರುವ ಜೈರಾಮ್ ರಮೇಶ್, ಜುಮುರಿಹಟ್‌ನಲ್ಲಿ ಕೆಲವು ನಿಮಿಷಗಳ ಹಿಂದೆ ನನ್ನ ವಾಹನದ ಮೇಲೆ ದಾಳಿಯಾಗಿದೆ. ಸುಂಟಿಪುರ್ ಪ್ರದೇಶದಲ್ಲಿ ಒಂದಷ್ಟು ಪುಂಡ ಬಿಜೆಪಿ ಗುಂಪು ನನ್ನ ವಾಹನದ ವಿಂಡ್‌ಶೀಲ್ಡ್‌ನಲ್ಲಿನ ಭಾರತ್ ಜೋಡೋ ನ್ಯಾಯ ಯಾತ್ರೆ ಸ್ಟಿಕರ್‌ಅನ್ನು ಹರಿದು ಹಾಕಿತು. ನಮ್ಮ ಮೇಲೆ ನೀರನ್ನು ಎರಚಿದ ಗುಂಪು ನ್ಯಾಯ ಯಾತ್ರೆ ವಿರುದ್ಧ ದಿಕ್ಕಾರ ಕೂಗಿದರು. ನಾವು ಸಂಯಮದಿಂದ ವರ್ತಿಸಿ ಗೂಡಾಂಗಳಿಂದ ಪಾರಾದೆವು. ಇದು ನಿಸ್ಸಂಶಯವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಅವರ ಕಾರ್ಯವಾಗಿದೆ. ನಾವು ಬೆದರುವುದಿಲ್ಲ. ಸೈನಿಕರಂತೆ ಮುನ್ನುಗುತ್ತೇವೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಇದಕ್ಕೆಲ್ಲ ನಾನು ಮತ್ತು ಅಸ್ಸಾಂ ಜನತೆ ಎದರುವುದಿಲ್ಲ ಎಂದು ಹೇಳಿದ್ದಾರೆ.
ಯಾತ್ರೆ ವೇಳೆ ಅರುಣಾಚಲ ಪ್ರದೇಶದಲ್ಲಿ ಚೀನಿ ಸೈನಿಕರಿಂದ ಅಪಹರಣಗೊಂಡ ಅಮೋನಿ ದಿರು ಪುಲ್ಲಂ ಎಂಬುವವರ ಮನೆಗೆ ರಾಹುಲ್ ಗಾಂಧಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಅಮೋನಿ ದಿರು ಪುಲ್ಲಂ ಅವರು 2015ರಿಂದ ನಾಪತ್ತೆಯಾಗಿದ್ದು, ಚೀನಿ ಸೈನಿಕರು ಅಪಹರಿಸಿದ್ದಾರೆ ಎನ್ನಲಾಗಿದೆ.
ಜ.22 ರಂದು ಯಾತ್ರೆ ಸ್ಥಗಿತಗೊಳಿಸಿ ಎಂದ ಅಸ್ಸಾಂ ಸಿಎಂ
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾನ ದಿನದಂದು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಜನವರಿ 22ರಂದು ಕೈಗೊಳ್ಳುವ ಅಲ್ಪಸಂಖ್ಯಾತ ಪ್ರಾಬಲ್ಯದ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಿದ ನಂತರ ಅಸ್ಸಾಂ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
“ರಾಮ ಮಂದಿರದ ಪ್ರಾಣ ಪ್ರತಿಷ್ಠಾನ ನಡೆಯುವ ಸೋಮವಾರ ಬಟಾದರವ ಪ್ರದೇಶಕ್ಕೆ ಭೇಟಿ ನೀಡದಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುತ್ತೇವೆ. ಇದು ಅಸ್ಸಾಂಗೆ ತಪ್ಪು ಸಂದೇಶ ರವಾನಿಸುತ್ತದೆ” ಎಂದು ಅಸ್ಸಾಂ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?
ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಕೆಲವೊಂದು ಪ್ರದೇಶಗಳಿಗೆ ಆಗಮಿಸದಂತೆ ಅಲ್ಲಿನ ಸಿಎಂ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ “ ನಮ್ಮ ವಿನಂತಿಯು ಪರಿಗಣನೆಯಲ್ಲಿದೆ. ನಾವು ಸರಿಯಾದ ಮಾರ್ಗಗಳಲ್ಲಿ ಸಂಚರಿಸಲು ಅನುಮತಿ ಕೇಳಿದ್ದೇವೆ. ಆದರೆ ಸರ್ಕಾರಿ ಅಧಿಕಾರಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಾಗಿದ ಗುವಾಹಟಿ ಮಾರ್ಗದಲ್ಲಿಯೇ ನಾವು ಸಂಚರಿಸಲು ರಾಜ್ಯ ಸರ್ಕಾರಕ್ಕೆ ಮನವಿ ಕೇಳಿದ್ದೇವೆ. ಅವರ ಉದ್ದೇಶವು ನಮ್ಮನ್ನು ತಡೆಯುವುದಾಗಿದೆ” ಎಂದರು.