ಇತ್ತೀಚೆಗೆ, ಮಾಂಸಾಹಾರ ನಿಷೇಧಿಸುವ, ನಿರ್ಬಂಧಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಆಡಳಿತಗಳ ಇಂತಹ ಧೋರಣೆಯ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಆದಾಗ್ಯೂ, ಮಾಂಸಾಹಾರ ನಿಷೇಧದ ಹೇರಿಕೆಯ ಕ್ರಮಗಳು ಮುಂದುವರೆದಿವೆ. ಇದೀಗ, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗುಲವಿರುವ ಕತ್ರದಲ್ಲಿ ಎರಡು ತಿಂಗಳ ಕಾಲ ಮದ್ಯ ಮತ್ತು ಮಾಂಸಾಹಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಂದಿನ ಎರಡು ತಿಂಗಳ ಕಾಲ ಮದ್ಯ ಮತ್ತು ಮಾಂಸಾಹಾರ ಮಾರಾಟ, ಸೇವನೆ ಮಾಡುವಂತಿಲ್ಲ ಎಂದು ಹೇಳಿದೆ.
ತ್ರಿಕೂಟ ಬೆಟ್ಟಗಳು ಮತ್ತು ಧಾರ್ಮಿಕ ಗುಹೆಗಳನ್ನು ಹೊಂದಿರುವ ಪ್ರದೇಶ ಕತ್ರಾ. ಇಲ್ಲಿ ವೈಷ್ಣೋದೇವಿ ದೇವಾಲಯವೂ ಇದ್ದು, ಧಾರ್ಮಿಕ ಜಾತ್ರೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕತ್ರಾದ 12 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ, ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ಕತ್ರಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಪಿಯೂಷ್ ಧೋತ್ರಾ ಅವರು ಮದ್ಯ ಮತ್ತು ಮಾಂಸಾಹಾರಿ ಆಹಾರ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕತ್ರಾ ನಗರ ಮಾತ್ರವಲ್ಲದೆ, ಅರ್ಲಿ, ಹನ್ಸಾಲಿ ಮತ್ತು ಮಟ್ಯಾಲ್ ಗ್ರಾಮಗಳಲ್ಲೂ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ.
ಇದೇ ರೀತಿ, 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಮಂಡ್ಯದಲ್ಲಿಯೂ ಮಾಂಸಾಹಾರ ನಿಷೇಧಿಸಲಾಗಿತ್ತು. ಜಿಲ್ಲಾಡಳಿತದ ಈ ಕ್ರಮವನ್ನು ವಿರೋಧಿಸಿ ಆಂದೋಲನಗಳು ನಡೆದಿದ್ದವು. ‘ಬಾಡೂಟ ಬಳಗ’ದ ಹೆಸರಿನಲ್ಲಿ ಸಾರ್ವಜನಿಕರೇ ಮಾಂಸಾಹಾರ ವಿತರಣೆಗೆ ಮುಂದಾಗಿದ್ದರು. ಮಂಡ್ಯ ಜನರ ಒತ್ತಡ, ವಿರೋಧಕ್ಕೆ ಮಣಿದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತದ ಸಾಹಿತ್ಯ ಸಮ್ಮೇಳನದ ಊಟದಲ್ಲಿ ಮೊಟ್ಟೆ ವಿತರಿಸಿತ್ತು.