ಜಮ್ಮು ಕಾಶ್ಮೀರ ಮೇಘಸ್ಫೋಟ ಪ್ರಕರಣದಲ್ಲಿ ಮೃತರ ಸಂಖ್ಯೆ ಏರಿಕೆಯಾಗಿದ್ದು 66ಕ್ಕೆ ತಲುಪಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇನ್ನೂ 75 ಮಂದಿ ನಾಪತ್ತೆಯಾಗಿದ್ದಾರೆ. ಇಂದು ಮಹಿಳೆಯ ಕೊಳೆತ ಶವಗಳು ಪತ್ತೆಯಾಗಿವೆ ಎನ್ನಲಾಗಿದೆ.
ಕುಸಿದ ಮನೆಯ ಅವಶೇಷಗಳ ಅಡಿಯಲ್ಲಿ ಮತ್ತೊಂದು ದೇಹದ ಭಾಗವನ್ನು ಸ್ನಿಫರ್ ನಾಯಿಗಳು ಪತ್ತೆ ಹಚ್ಚಿದೆ. ಆದರೆ ದುರಂತದ ಮೊದಲ ದಿನದಂದು ಪತ್ತೆಯಾದ ಶವದ ಭಾಗ ಇದಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದವರೆಗೆ 167 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 75 ಮಂದಿ ನಾಪತ್ತೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಮತ್ತೆ ಮೇಘಸ್ಫೋಟ: ನಾಲ್ವರ ಸಾವು, ಆರು ಮಂದಿಗೆ ಗಾಯ
ಆಗಸ್ಟ್ 14ರಂದು ಹಿಮಾಲಯದ ಮಾತಾ ಚಂಡಿ ದೇಗುಲಕ್ಕೆ ಹೋಗುವ ಮಚೈಲ್ ಮಾತಾ ಯಾತ್ರಾ ಮಾರ್ಗದಲ್ಲಿ ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿ ನೂರಾರು ಜನರು ನಾಪತ್ತೆಯಾಗಿದ್ದಾರೆ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ರಕ್ಷಣಾ, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮೃತರಲ್ಲಿ ಮೂವರು ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಒಬ್ಬರು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಸೇರಿದ್ದಾರೆ.
“ಇಂದು ಬೆಳಿಗ್ಗೆ ಮತ್ತೊಂದು ಮೃತದೇಹ ಪತ್ತೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ. ಮೇಘಸ್ಫೋಟದ ಪರಿಣಾಮ ಪ್ರದೇಶವು ಅಸ್ತವ್ಯಸ್ತವಾಗಿದೆ. ಇದರಿಂದಾಗಿ ರಕ್ಷಣಾ ಕಾರ್ಯ ಸಮಯ ತೆಗೆದುಕೊಳ್ಳುತ್ತಿದೆ. ನಾವು ಕೆಳ ಭಾಗಕ್ಕೆ ತಂಡವನ್ನು ಕಳುಹಿಸುತ್ತಿದ್ದೇವೆ” ಎಂದು ಎಸ್‌ಡಿಆರ್‌ಎಫ್ ಉಪ ಪೊಲೀಸ್ ವರಿಷ್ಠಾಧಿಕಾರಿ ಮಸೂಫ್ ಅಹ್ಮದ್ ಮಿರ್ಜಾ ಹೇಳಿದ್ದಾರೆ.
ಇನ್ನು ಈ ಬಗ್ಗೆ ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸೇನೆಯ ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್, “ಐದು ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಹೆಚ್ಚುವರಿ ವೈದ್ಯಕೀಯ ತಂಡಗಳನ್ನು ನಿಯೋಜಿಸಿ ಕಾರ್ಯಾಚರಣೆ ವೇಗಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.
