ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಗಡಿ ಜಿಲ್ಲೆಯ ಬಾಧಾಲ್ ಗ್ರಾಮದಲ್ಲಿ 10 ಮಕ್ಕಳು ಸೇರಿದಂತೆ 13 ಜನರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅವರು ನಿಗೂಢ ಕಾಯಿಲೆಯಿಂದ ಮರಣ ಹೊಂದಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ.
ನಿಗೂಢ ಕಾಯಿಲೆಯ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ಇಲಾಖೆ ಗ್ರಾಮದಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಮಾದರಿಗಳನ್ನು (ಸ್ಯಾಂಪಲ್) ಸಂಗ್ರಹಣೆ ಮಾಡುತ್ತಿದೆ.
ಮೊಹಮ್ಮದ್ ಯೂಸುಫ್ ಎಂದು ಗುರುತಿಸಲಾದ ವೃದ್ಧ ವ್ಯಕ್ತಿ ಸೋಮವಾರ ಸಂಜೆ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು, ಸೋಮವಾರ ಬೆಳಿಗ್ಗೆ 10 ವರ್ಷದ ಬಾಲಕ ಮೊಹಮ್ಮದ್ ಮರೂಫ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಅಲ್ಲದೆ, ಭಾನುವಾರ ಕೂಡ ಇದೇ ನಿಗೂಢ ಕಾಯಿಲೆಯಿಂದ ಜಹೂರ್ ಅಹ್ಮದ್ (14 ವರ್ಷ) ಮತ್ತು ನಬೀನಾ ಅಖ್ತರ್ (5 ವರ್ಷ) ಎಂಬ ಇಬ್ಬರು ಮಕ್ಕಳು ಮರಣ ಹೊಂದಿದ್ದರು.
ಡಿಸೆಂಬರ್ ಆರಂಭದಲ್ಲಿ ನಿಗೂಢ ಕಾಯಿಲೆ ಕಾಣಿಸಿಕೊಂಡಿತ್ತು. ಒಂದೇ ಕುಟುಂಬದ ಏಳು ಮಂದಿ ಡಿಸೆಂಬರ್ 7ರಂದು ಸಾವನ್ನಪ್ಪಿದ್ದರು. ಅಂದಿನಿಂದ ಇಂದಿನವರೆಗೆ ಸಾವನ್ನಪ್ಪಿರುವ 13 ಮಂದಿಯೂ ಜ್ವರ, ಬೆವರು, ವಾಂತಿ, ನಿರ್ಜಲೀಕರಣ ಹಾಗೂ ಪ್ರಜ್ಞೆ ಕಳೆದುಕೊಳ್ಳುವ ರೋಗಲಕ್ಷಣಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.
ರಾಜೌರಿ ಮುಖ್ಯ ವೈದ್ಯಾಧಿಕಾರಿ (CMO) ಡಾ. ಮನೋಹರ್ ಲಾಲ್ ಹೇಳುವಂತೆ, ಸಂಭಾವ್ಯ ಆರೋಗ್ಯ ಅಪಾಯಗಳನ್ನು ಗುರುತಿಸಲು ಮತ್ತು ಪರಿಹರಿಸಲು ಗ್ರಾಮದಲ್ಲಿ ತ್ವರಿತವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇಲ್ಲಿಯವರೆಗೆ, ನಿಗೂಢ ಕಾಯಿಲೆಯು ಗ್ರಾಮದ ಮೂರು ಕುಟುಂಬಗಳಿಗೆ ಸೀಮಿತವಾಗಿದೆ. ಇತರರಿಗೂ ಕಾಯಿಲೆ ಹರಡದಂತೆ ತಡೆಯಬೇಕಾಗಿದೆ. ಗ್ರಾಮದಲ್ಲಿ ಒಟ್ಟು 5,700 ಜನರಿದ್ದು, 12,000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ್ದೇವೆ. ನಾವು ಪುನರಾವರ್ತಿತ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದು ಮನೋಹರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಪರೀಕ್ಷೆಯ ಸಮಯದಲ್ಲಿ, ಯಾವುದೇ ವೈರಾಣು ಕಂಡುಬಂದಿಲ್ಲ. ನೀರು ಸಹ ಶುದ್ಧವಾಗಿದೆ ಎಂದು ದೃಢಪಡಿಸಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ಮತ್ತು FSL ವರದಿಗಳಿಗಾಗಿ ಕಾಯಲಾಗುತ್ತಿದೆ. ಆ ವರದಿಯಿಂದ ಏನಾದರೂ ಹೆಚ್ಚಿನ ಮಾಹಿತಿ ತಿಳಿಯಬಹುದೆಂದು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರಸ್ತುತ, ಜಮ್ಮುವಿನ ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.