ಜಮ್ಮು ಮತ್ತು ಕಾಶ್ಮೀರದಲ್ಲಿ ಶೈಕ್ಷಣಿಕ ಸಂಸ್ಥೆಗಳು ಇನ್ನು ಮುಂದೆ ತಮ್ಮ ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆಡಳಿತವು, ಎಲ್ಲಾ ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕೋಚಿಂಗ್ ಸೆಂಟರ್ಗಳಿಗೆ ‘ಆಕ್ಷೇಪಾರ್ಹ’ ಅಥವಾ ‘ಅನುಚಿತ’ ವಿಷಯಗಳನ್ನು ಹೊಂದಿರುವ ಪುಸ್ತಕಗಳನ್ನು ಪತ್ತೆಹಚ್ಚಿ ವರದಿ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಸರ್ಕಾರದ ಈ ಹೊಸ ಆದೇಶದ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳು ತಮ್ಮ ಆವರಣದಲ್ಲಿರುವ ಎಲ್ಲಾ ಪ್ರಕಟಿತ ವಸ್ತುಗಳು, ಸಂಶೋಧನಾ ಪ್ರಬಂಧಗಳು ಮತ್ತು ಶೈಕ್ಷಣಿಕ ಕೃತಿಗಳನ್ನು ಪರಿಶೀಲಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಕಾನೂನುಬಾಹಿರ, ಭಯೋತ್ಪಾದನೆಯನ್ನು ವೈಭವೀಕರಿಸುವ, ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಅಥವಾ ದೇಶದ ಭದ್ರತೆಗೆ ಹಾನಿಕರವಾದ ಯಾವುದೇ ವಿಷಯಗಳನ್ನು ಪಠ್ಯ ಅಥವಾ ಗ್ರಂಥಾಲಯದಲ್ಲಿ ಇರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸರ್ಕಾರಿ ಶಾಲೆಯ ಗ್ರಂಥಾಲಯದ ಎರಡು ಪುಸ್ತಕಗಳು ಪ್ರತ್ಯೇಕತಾವಾದಿ ನಾಯಕರನ್ನು ವೈಭವೀಕರಿಸಿವೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಈ ಪ್ರಕರಣದ ನಂತರ, ಸಂಬಂಧಪಟ್ಟ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಶಿಕ್ಷಣ ಇಲಾಖೆಯ 8 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಈ ಕ್ರಮವು ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆ ಎಂದು ವಿರೋಧ ಪಕ್ಷಗಳು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಯಲ್ಲಿ 12 ಮಂದಿ ಸಾವು, ಅಘೋಷಿತ ಲಾಕ್ಡೌನ್ ಜಾರಿ!
ಇತಿಹಾಸವನ್ನು ಅಳಿಸಿಹಾಕುವ ಮತ್ತು ತಮ್ಮದೇ ಆದ ನಿರೂಪಣೆಯನ್ನು ಹೇರುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಕರು ಆರೋಪಿಸಿದ್ದಾರೆ. ಈ ಹಿಂದೆ ಅರುಂಧತಿ ರಾಯ್ ಸೇರಿದಂತೆ ಹಲವು ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ನಿಷೇಧಿಸಿರುವ ಸರ್ಕಾರದ ನಿರ್ಧಾರವು ಈಗಾಗಲೇ ನ್ಯಾಯಾಲಯದಲ್ಲಿದೆ. ಅತಿಯಾದ ನಿಯಂತ್ರಣ ಮತ್ತು ಕಣ್ಗಾವಲು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ರಾಜಕೀಯ ನಾಯಕರು ಟೀಕಿಸಿದ್ದಾರೆ.
ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಬಿಜೆಪಿ ಈ ಆದೇಶವನ್ನು ಸಮರ್ಥಿಸಿಕೊಂಡಿವೆ. “ಇದರ ಉದ್ದೇಶ ಓದುವಿಕೆಯನ್ನು ನಿರ್ಬಂಧಿಸುವುದಲ್ಲ, ಬದಲಾಗಿ ತರಗತಿಯಲ್ಲಿ ಅನಗತ್ಯ ವಿವಾದಗಳನ್ನು ಹುಟ್ಟುಹಾಕುವ ಮತ್ತು ದೇಶವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುವ ವಿಷಯಗಳನ್ನು ತಡೆಗಟ್ಟುವುದು ಮಾತ್ರ” ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಶಾಂತಿ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆ ಎಂದು ಬಿಜೆಪಿ ವಕ್ತಾರ ಸುನಿಲ್ ಸೇಥಿ ಹೇಳಿದ್ದಾರೆ.




