ಶಾಲಾ ಶಿಕ್ಷಕರ ನೇಮಕಾತಿ ವಿಳಂಬದ ಬಗ್ಗೆ ರಾಜ್ಯ ಸರ್ಕಾರವನ್ನು ಜಾರ್ಖಂಡ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮುಂಬರುವ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲು 26,000 ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಲು ಆದೇಶಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ ಅರ್ಥಶಾಸ್ತ್ರಜ್ಞ ಡಾ. ಜೀನ್ ಡ್ರೇಜ್, ಸಹ-ಅರ್ಜಿದಾರ ಪರನ್ ಅಮಿತಾವ ಅವರು ಸಲ್ಲಿಸಿದ್ದ ಪಿಐಎಲ್‌ಅನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಜಾರ್ಖಂಡ್‌ನ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಗುರುತಿಸಿದೆ. ನೇಮಕಾತಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದೇಶ ಹೊರಡಿಸಿದೆ.
ಪಿಐಎಲ್‌ನ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎಂ.ಎಸ್ ರಾಮಚಂದ್ರ ರಾವ್, ಸರ್ಕಾರಿ ಶಾಲೆಗಳಲ್ಲಿ 26,000 ಬೋಧನಾ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ನೇಮಕಾತಿಯನ್ನು ತ್ವರಿತಗೊಳಿಸಬೇಕು. ನೇಮಕಾತಿ ಪ್ರಕ್ರಿಯೆಯು ನ್ಯಾಯಯುತ, ಪಾರದರ್ಶಕ ಹಾಗೂ ಸೂಕ್ತ ಸಮಯದಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ‘ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ’ (ಜೆಎಸ್‌ಎಸ್‌ಸಿ) ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಜಾತಿಗಣತಿ ವರದಿ ವಿರೋಧಿಸುತ್ತಿರುವ ಜಾತಿವಾದಿ ಲಿಂಗಾಯತರು
ಹಿಂದಿನ ವಿಚಾರಣೆ ವೇಳೆ ಜೆಎಸ್‌ಎಸ್‌ಸಿ ಪ್ರತಿ-ಅಫಿಡವಿಟ್ ಸಲ್ಲಿಸಿತ್ತು. ಒಂದು ವರ್ಷದ ಕಾಲಮಿತಿ ಕೋರಿತ್ತು. JSSC ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಸಹಾಯಕ್ ಆಚಾರ್ಯ (6 ರಿಂದ 8ನೇ ತರಗತಿಗಳಿಗೆ ಪದವಿ ತರಬೇತಿ ಪಡೆದ ಶಿಕ್ಷಕರು ಮತ್ತು 1 ರಿಂದ 5ನೇ ತರಗತಿಗಳಿಗೆ ಮಧ್ಯಂತರ ತರಬೇತಿ ಪಡೆದ ಶಿಕ್ಷಕರು) ಪರೀಕ್ಷೆಗಳನ್ನು ನಡೆಸಿದ್ದರೂ, ಉರ್ದು, ಕುರ್ಮಾಲಿ, ಪಂಚ ಪರ್ಗಾನಿಯಾ ಹಾಗೂ ಹೋ ವಿಷಯಗಳಿಗೆ ಮರು-ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಈ ಎಲ್ಲ ಕಾರಣಗಳಿಂದಾಗಿ 11,000 ಮಧ್ಯಂತರ ತರಬೇತಿ ಪಡೆದ ಮತ್ತು 15,001 ಪದವಿ ತರಬೇತಿ ಪಡೆದ ಶಿಕ್ಷಕರ ನೇಮಕಾತಿಗಳನ್ನು ಪೂರ್ಣಗೊಳಿಸಲು ನಿರೀಕ್ಷಿತ ಕಾಲಮಿತಿ 2026ರ ಜನವರಿಯಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿತ್ತು.