ಜಾರ್ಖಂಡ್ನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿಗೆ ಸಂಬಂಧಿಸಿದ ಗೃಹ ಸಹಾಯಕನ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಅಪಾರ ಪ್ರಮಾಣದ ‘ಲೆಕ್ಕವಿಲ್ಲದ’ ಹಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
2023ರ ಫೆಬ್ರವರಿಯಲ್ಲಿಯೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಮುಖ್ಯ ಇಂಜಿನಿಯರ್ ವೀರೇಂದ್ರ ಕುಮಾರ್ ರಾಮ್ ಅವರನ್ನು ಬಂಧಿಸಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಶೋಧ ನಡೆಸುತ್ತಿದೆ. ಈ ವೇಳೆ, ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಸಹಾಯಕನ ಮನೆಯಲ್ಲಿಯೂ ಶೋಧ ನಡೆಸಿದ್ದಾರೆ.
ದಾಳಿಯ ವೇಳೆ, 500 ಮುಖಬೆಲೆಯ ಸುಮಾರು 20-30 ಕೋಟಿ ರೂ. ನಗದು ಮತ್ತು ಚಿನ್ನಾಭರಣಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾಜಿ ಮುಖ್ಯ ಇಂಡಿಜಿಯರ್ ರಾಮ್ ವಿರುದ್ಧ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ದೂರು ದಾಖಲಿಸಿದ ಬಳಿಕ, ಅಕ್ರಮ ಹಣ ವರ್ಗಾವಣೆ ಪ್ರಕರಣವು ಬೆಳಕಿಗೆ ಬಂದಿದೆ. 2023ರ ಇಡಿ ಹೇಳಿಕೆಯ ಪ್ರಕಾರ, ರಾಮ್ ಅವರು ಗುತ್ತಿಗೆದಾರರಿಗೆ ಟೆಂಡರ್ಗಳನ್ನು ಹಂಚಿಕೆ ಮಾಡಲು ಕಮಿಷನ್ ಹೆಸರಿನಲ್ಲಿ ಹಣ ಪಡೆದಿದ್ದಾರೆ. ಅಕ್ರಮವಾಗಿ ಗಳಿಸಿದ ಹಣವನ್ನು ರಾಮ್ ಮತ್ತು ಅವರ ಕುಟುಂಬ ಸದಸ್ಯರು ‘ಅತ್ಯಂತ ಅದ್ದೂರಿ ಜೀವನಶೈಲಿಯ ಬದುಕಿಗಾಗಿ’ ಬಳಸಿದ್ದಾರೆ ಎಂದು ಆರೋಪಿಸಿದೆ.