ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು 13ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ಆರು ಪ್ರತಿಭಟನಾಕಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಮತ್ತು ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ದಿನಗಳಿಂದ ಕಿರಿಯ ವೈದ್ಯರುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 13 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಕೋಲ್ಕತ್ತಾ ಪ್ರಕರಣ | 9ನೇ ದಿನವೂ ಮುಂದುವರೆದ ಕಿರಿಯ ವೈದ್ಯರ ಉಪವಾಸ ಸತ್ಯಾಗ್ರಹ; ರಾಜ್ಯಾದ್ಯಂತ ಬೆಂಬಲ
ಇದುವರೆಗೆ ಆರು ಜನ ಉಪವಾಸ ನಿರತ ಕಿರಿಯ ವೈದ್ಯರ ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾ ಸುವೆಂದು ಮಲ್ಲಿಕ್ ತಿಳಿಸಿದ್ದಾರೆ. ಪ್ರಸ್ತುತ ಎಂಟು ವೈದ್ಯರು ಕೋಲ್ಕತ್ತಾದ ಎಸ್ಪ್ಲಾನೇಡ್‌ನಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಆರೋಗ್ಯ ಕಾರ್ಯದರ್ಶಿ ಎನ್‌ಎಸ್‌ನಿಗಂ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂಬುದು ಕೂಡಾ ಕಿರಿಯ ವೈದ್ಯರ ಆಗ್ರಹವಾಗಿದೆ. ಹಾಗೆಯೇ ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಕೇಂದ್ರೀಕೃತ ರೆಫರಲ್ ವ್ಯವಸ್ಥೆಯನ್ನು ಸ್ಥಾಪಿಸಬೇಕು, ಹಾಸಿಗೆ ಖಾಲಿ ಇರುವೆಡೆ ಸಿಸಿಟಿವಿ ಅಳವಡಿಸಬೇಕು, ಆನ್-ಕಾಲ್ ರೂಂಗಳು ಮತ್ತು ಶೌಚಾಲಯಗಳಲ್ಲಿ ವೈದ್ಯರ ಸುರಕ್ಷತೆಗಾಗಿ ಅಗತ್ಯ ನಿಬಂಧನಗೆಳನ್ನು ಕಾರ್ಯಪಡೆ ರಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕಿರಿಯ ವೈದ್ಯರು ಮುಂದಿಟ್ಟಿದ್ದಾರೆ.
ಆಸ್ಪತ್ರೆಗಳಲ್ಲಿ ಹೆಚ್ಚಿನ ಪೊಲೀಸ್ ರಕ್ಷಣೆ, ಖಾಯಂ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕಾತಿ ಮತ್ತು ವೈದ್ಯರು, ನರ್ಸ್‌ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕೆಂದು ಕೂಡಾ ಉಪವಾಸ ನಿರತ ವೈದ್ಯರು ಒತ್ತಾಯಿಸುತ್ತಿದ್ದಾರೆ.
